ಅವನೊಬ್ಬ ಅನಾಥ ಹುಡುಗ. ಬೇಡ ಅಂದಿದ್ದನ್ನೇ ಮಾಡೋ ಜಗಮೊಂಡ. ಇಂಥಾ ಹುಡುಗನ ಧೈರ್ಯ ಅದೊಂದು ದಿನ ಡಾನ್ ಒಬ್ಬನ ಜೀವ ಉಳಿಸಿರುತ್ತದೆ. ಆ ಯಜಮಾನ ಹುಡುಗನನ್ನು ಕರೆದೊಯ್ದು ಬೆಳೆಸುತ್ತಾನೆ. ರೌಡಿಸಂ ಜೊತೆಗೆ ಈ ವರೆಗೆ ಎಲ್ಲೂ ಚಿತ್ರಿತವಾಗದ ಪಾರಿವಾಳಗಳ ಲೋಕದೊಂದಿಗೇ ಸಿಂಪಲ್ ಸುನಿ ನಿರ್ದೇಶನದ ಬಜ಼ಾರ್ ತೆರೆದುಕೊಳ್ಳುತ್ತದೆ.
ಪಾರಿವಾಳಗಳನ್ನು ಸಾಕುವ ದಾವಡಿಗಳು, ಈ ಹಕ್ಕಿಗಳನ್ನು ಜೀವದಂತೆ ಪೊರೆಯುವ ಶೋಕ್ ದಾರ್ಗಳ ನಡುವೆ ಕತೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಪಾರಿವಾಳಗಳ ಟೋರ್ನಮೆಂಟ್ಗಳು ಹೇಗೆ ನಡೆಯುತ್ತವೆ. ಅಲ್ಲಿನ ಅನ್ಯಾಯಗಳು, ಅವ್ಯವಹಾರಗಳು, ರೌಡಿಸಂಗೂ ಪಾರಿವಾಳದ ಶೋಕ್ ದಾರ್ ಗಳಿಗೂ ಇರೋ ನಂಟುಗಳೆಲ್ಲವೂ ಬಜ಼ಾರ್ ನಲ್ಲಿ ಅನಾವರಣಗೊಂಡಿದೆ. ಸಿಂಪಲ್ ಸುನಿ ಬಜ಼ಾರ್ ಮೂಲಕ ಮಾಮೂಲಿ ಲವ್ ಸ್ಟೋರಿಗಳ ಜಾಡು ಬಿಟ್ಟು ಬೇರೆ ದಾರಿ ಹಿಡಿದಿದ್ದಾರೆ. ಇಂಥಾ ಸಿನಿಮಾಗಳನ್ನ ಮಾಡುವಾಗ ಭರ್ಜರಿಯಾದ ತಯಾರಿಯೇ ಬೇಕಾಗುತ್ತದೆ. ಅದೇ ರೀತಿ ಹೊರ ಜಗತ್ತಿಗೆ ಸಾಮಾನ್ಯವಾಗಿ ಕಾಣೋ ಪಾರಿವಾಳ ರೇಸಿನ ಸೂಕ್ಷ್ಮ ವಿಚಾರಗಳನ್ನೂ ಬಜ಼ಾರಿನಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ಮಾಸ್ ಸಬ್ಜೆಕ್ಟನ್ನೂ ಸಮರ್ಥವಾಗಿ ಹ್ಯಾಂಡಲ್ ಮಾಡಬಲ್ಲೆ ಅನ್ನೋದನ್ನು ನಿರ್ದೇಶಕ ಸುನಿ ಬಜಾರ್ ನಲ್ಲಿ ತೋರಿಸಿಕೊಟ್ಟಿದ್ದಾರೆ. ಹೊಸ ಹುಡುಗ ಧನ್ವೀರ್ ಮೊದಲ ಸಿನಿಮಾದಲ್ಲೇ ಒಳ್ಳೇ ಸ್ಕೋರು ಮಾಡಿದ್ದಾರೆ. ನಾಯಕಿ ಅದಿತಿ ಪ್ರಭುದೇವ ರಾಧಿಕಾ ಪಂಡಿತ್ ನೆನಪಿಗೆ ಬರುವಂತೆ ನಟಿಸಿದ್ದಾರೆ. ಶರತ್ ಲೋಹಿತಾಶ್ವ ಎಂದಿನಂತೆ ಅದ್ಭುತವಾಗಿ ಪಾತ್ರ ಪೋಷಣೆ ಮಾಡಿದ್ದಾರೆ.
ಸಿನಿಮಾ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಪಾರಿವಾಳ ಮತ್ತು ಭೂಗತ ಜಗತ್ತನ್ನು ಬೆಸೆದಕೊಂಡಿರೋ ಕಥೆಯಲ್ಲಿ ಕಾಡುವ ಲವ್ ಸ್ಟೋರಿ ಕೂಡಾ ಇದೆ. ಕಥೆಯ ಮೂಲ ಉದ್ದೇಶ ಇನ್ನಷ್ಟು ಶಕ್ತಿಶಾಲಿಯಾಗಿದ್ದಿದ್ದರೆ ಬಜ಼ಾರ್ ಇನ್ನಷ್ಟು ಭರ್ಜರಿಯಾಗಿರುತ್ತಿತ್ತು. ಆದರೂ ಇದು ಪಕ್ಕಾ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರು ನೋಡಬಹುದಾದ ಸಿನಿಮಾ.
#
No Comment! Be the first one.