ಸಿಂಪಲ್ ಸುನಿ ನಿರ್ದೇಶನದ ಬಜ಼ಾರ್ ಫೆಬ್ರವರಿ ಒಂದರಂದು ಶುರುವಾಗೋದು ಪಕ್ಕಾ ಆಗಿದೆ. ಆರಂಭದಲ್ಲಿಯೇ ಹೊಸ ಬಗೆಯ ಕಥೆ ಮತ್ತು ಹೊಸಬರನ್ನೇ ಜೊತೆಗಿಟ್ಟುಕೊಂಡು ಗೆದ್ದವರು ಸುನಿ. ಇದೀಗ ಬಜ಼ಾರ್ ವಿಚಾರದಲ್ಲಿಯೂ ಆ ಹೊಸತನದ ಛಾಯೆ ಹಾಗೆಯೇ ಮುಂದುವರೆದಿದೆ. ಈ ಸಿನಿಮಾ ಮೂಲಕವೇ ಧನ್ವೀರ್ ಎಂಬ ಸಿಕ್ಸ್ ಪ್ಯಾಕ್ ಹುಡುಗ ಬಣ್ಣದ ಬಜ಼ಾರಿಗೆ ಎಂಟ್ರಿ ಕೊಟ್ಟಿದ್ದಾರೆ.
ಬಜ಼ಾರ್ ಚಿತ್ರವನ್ನು ನಿರ್ಮಾಣ ಮಾಡಿರುವವರು ತಿಮ್ಮೇಗೌಡ. ಅವರು ಸಿನಿಮಾ ನಾಯಕನಾಗಬೇಕೆಂಬ ಆಸೆ ಹೊತ್ತಿದ್ದ ಪುತ್ರ ಧನ್ವೀರ್ ಅವರನ್ನು ನೆಲೆಗಾಣಿಸುವ ಉದ್ದೇಶದಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಒಂದೊಳ್ಳೆ ಸಿನಿಮಾ ಮಾಡಿರೋ ಖುಷಿಯೂ ಅವರದ್ದಾಗಿದೆ.
ಹೀಗೆ ತಂದೆಯ ಸಪೋರ್ಟಿನಿಂದ ನಾಯಕನಾಗಿ ಎಂಟ್ರಿ ಕೊಟ್ಟಿರೋ ಧನ್ವೀರ್ ನಿರ್ದೇಶಕ ಸುನಿ ನಿರ್ದೇಶನದಂತೆ ಸಾಕಷ್ಟು ಪಳಗಿಕೊಂಡಿದ್ದಾರೆ. ನಟನೆ, ಫೈಟಿಂಗ್, ಡ್ಯಾನ್ಸು ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾಗಾಗಿಯೇ ಧನ್ವೀರ್ ದೇಹವನ್ನೂ ಕೂಡಾ ಹುರಿಗೊಳಿಸಿಕೊಂಡಿದ್ದಾರೆ. ದೈಹಿಕ ಕಸರತ್ತು ನಡೆಸಿ ಬರೀ ಫಿಟ್ ಆಗೋದೇ ತ್ರಾಸದ ಕೆಲಸ. ಅಂಥಾದ್ದರಲ್ಲಿ ಧನ್ವೀರ್ ಸಿಕ್ಸ್ ಪ್ಯಾಕನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ನಿರ್ದೇಶಕ ಸುನಿ ಧನ್ವೀರ್ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಲೂ ಒಂದೊಳ್ಳೆ ಅವಕಾಶ ಮಾಡಿಕೊಟ್ಟಿದ್ದಾರಂತೆ. ಹಾಡೊಂದರಲ್ಲಿ ಧನ್ವೀರ್ ನಾಗಕನ್ನಿಕೆ ಅದಿತಿ ಪ್ರಭುದೇವ ಜೊತೆ ಸಿಕ್ಸ್ ಪ್ಯಾಕ್ ಪ್ರದರ್ಶಿಸುತ್ತಾ ಹಾಡಿ ಕುಣಿದಿದ್ದಾರೆ. ಈಗಾಗಲೇ ಧನ್ವೀರ್ ಖಡಕ್ ಡೈಲಾಗುಗಳು ಮತ್ತು ಆ ಶೈಲಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈ ಮೂಲಕ ಸುನಿ ಗರಡಿಯಿಂದ ಮತ್ತೋರ್ವ ಖದರ್ ಹೊಂದಿರೋ ನಾಯಕನ ಆಗಮನವಾಗಿರೋದಂತೂ ನಿಜ!
#