ಕಳೆದ ಕೆಲವು ವರ್ಷಗಳಿಂದ ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನೋದು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳ ಪಾಲಿಗೆ ವರವಾಗಿದೆ. ಶಿವಣ್ಣ, ಸುದೀಪ್, ಗೋಲ್ಡನ್ ಗಣೇಶ್, ದರ್ಶನ್, ಪುನೀತ್, ಯಶ್, ಉಪೇಂದ್ರ, ದುನಿಯಾ ವಿಜಯ್, ಪ್ರಜ್ವಲ್ ಮತ್ತು ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಚಿತ್ರಗಳು ಬಿಡುಗಡೆಗೂ ಮುನ್ನವೇ ಒಳ್ಳೆಯ ರೇಟಿಗೆ ಸೇಲ್ ಆಗುತ್ತಿವೆ. ಒಳ್ಳೇ ಫೈಟ್ ಗಳಿರುವ ಆಕ್ಷನ್ ಸಿನಿಮಾಗಳಂತೂ ಉತ್ತಮ ಬೆಲೆಗೆ ಬಿಕರಿಯಾಗಿವೆ.
ಈ ಕಾರಣಕ್ಕೇ ತಲೆ ಬುಡವಿಲ್ಲದ ಕತೆ ಮಾಡಿಕೊಂಡು ಮೂರು ಫೈಟು, ಎರಡು ಚೇಸಿಂಗ್ ಗಳನ್ನು ತುರುಕಿ ವ್ಯಾಪಾರ ಮಾಡಲು ಹೋದವರೆಲ್ಲಾ ದಬುಕ್ಕುದಬುಕ್ಕಂತಾ ದಬ್ಬಾಕೊಂಡಿದ್ದಾರೆ. ಯಾಕೆಂದರೆ, ಚೇಸಿಂಗ್ ಮತ್ತು ಗನ್ ಶೂಟ್ ಇರುವ ಫೈಟ್ ಗಳನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳೋದಿಲ್ಲವಂತೆ. ಹಿಂದಿಗೆ ಡಬ್ ಆದ ಸಿನಿಮಾಗಳಲ್ಲಿ ದೊಡ್ಡ ಮಟ್ಟದ ವೀಕ್ಷಣೆ ಪಡೆದ ಸಿನಿಮಾ ಆಗಿ ದರ್ಶನ್ ನಟನೆಯ ಚಕ್ರವರ್ತಿ ದಾಖಲೆ ನಿರ್ಮಿಸಿದೆ ಎನ್ನುವ ಮಾಹಿತಿ ಇದೆ. ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕನ್ನಡ ಸಿನಿಮಾ ಕೂಡಾ ಇದೇ ಚಾಲೆಂಜಿಂಗ್ ಸ್ಟಾರ್ ಅವರದ್ದಂತೆ.
ಸೌತ್ ಇಂಡಿಯಾದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮೊತ್ತದ ಬೇಡಿಕೆ ಪಡೆದಿರುವ ಸಿನಿಮಾ ಇಳಯದಳಪತಿ ವಿಜಯ್ ನಟನೆಯ ‘ಬೀಸ್ಟ್” ಎನ್ನುವ ಸುದ್ದಿ ಕೇಳಿಬರುತ್ತಿದೆ. ಅದು ನಿಜವಿದ್ದರೂ ಇರಬಹುದು. ಮೂಲಗಳ ಪ್ರಕಾರ, ಹಿಂದಿ ಡಬ್ಬಿಂಗ್ ಹಕ್ಕಿಗಾಗಿ ಬರೋಬ್ಬರಿ 50ಕೋಟಿ ರುಪಾಯಿಗಳ ಆಫರ್ ಬಂದಿದೆಯಂತೆ. ಬಡ್ಡಿ ಸಾಲಕ್ಕೆ ದುಡ್ಡು ತಂದು ಸಿನಿಮಾ ಮಾಡಿದ್ದ ನಿರ್ಮಾಪಕರಾಗಿದ್ದಿದ್ದರೆ ಬಹುಶಃ ಒಳ್ಳೇ ಲಾಭ ಅಂತಾ ಮಾರಿಬಿಡುತ್ತಿದ್ದರೋ ಏನೋ? ಆದರೆ, ಈ ಸಿನಿಮಾವನ್ನು ನಿರ್ಮಿಸಿರೋದು ಪ್ರತಿಷ್ಟಿತ ಸನ್ ಪಿಕ್ಚರ್ಸ್. ಕಲಾನಿಧಿ ಮಾರನ್ ಬಂದ ಆಫರನ್ನು ಪಕ್ಕಕ್ಕಿಟ್ಟು, ಸದ್ಯಕ್ಕೆ ಮಾರಾಟ ಮಾಡುವ ಪ್ಲಾನಿಲ್ಲ. ಆಮೇಲೆ ನೋಡೋಣ ಅಂದಿಬಿಟ್ಟಿದ್ದಾರಂತೆ.
ನಯನತಾರಾ ಮತ್ತು ಕಾಮಿಡಿ ನಟ ಯೋಗಿಬಾಬು ಕಾಂಬಿನೆಷನ್ನಿನಲ್ಲಿ ಬಂದಿದ್ದ ಕೊಳಮಾವು ಕೋಕಿಲ ಎನ್ನುವ ವಿನೂತನ, ಮಹಿಳಾಪ್ರಧಾನ ಚಿತ್ರ ಮತ್ತು ಡಾಕ್ಟರ್ ಎಂಬೆರಡು ಸಿನಿಮಾಗಳನ್ನು ನೀಡಿರುವ ನೆಲ್ಸನ್ ದಿಲೀಪ್ ಕುಮಾರ್ ಬೀಸ್ಟ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ!
ಮೃಗ ಎನ್ನುವ ಅರ್ಥವನ್ನು ಸೂಚಿಸುವ ಬೀಸ್ಟ್ ಟೈಟಲ್ಲನ್ನು ಸ್ವತಃ ತಮಿಳು ಜನ ಮನಸಾರೆ ಒಪ್ಪುತ್ತಿಲ್ಲ. ವಿಜಯ್ ಥರದ ಸ್ಟಾರ್ ನಟರ ಸಿನಿಮಾಗಳಿಗೆ ಕಮರ್ಷಿಯಲ್ ಟೈಟಲ್ಲುಗಳನ್ನು ಬಯಸುವ ತಮಿಳ್ ಮಕ್ಕಳ್ ‘ಇದೆನ್ನ ಪಡಂ ಪೇರ್? ಮಯಿರ್ ಮಾದರಿ ಇರುಕ್ಕುದೇ…’ ಅಂತಾ ಕೆಟ್ಟ ಭಾಷೆಯಲ್ಲಿ ಬೈದುಕೊಳ್ಳುತ್ತಿದ್ದಾರೆ. ಆದರೂ ನೋಡಿ ಅದೃಷ್ಟ ಹುಡುಕಿಕೊಂಡು ಬಂದು ಕಾಯುತ್ತಿದೆ!
No Comment! Be the first one.