ಪತ್ತೇದಾರನ ಚಿತ್ರವೆಂದರೆ ಆತ ಸರ್ಕಾರಿ ಗೂಢಚರ ಸಂಸ್ಥೆಯೊಂದರಡಿಯಲ್ಲಿ ಆಂತರಿಕ ಮತ್ತು ಶತ್ರುದೇಶದವರ ಹುನ್ನಾರಗಳನ್ನು ಬಯಲಿಗೆಳೆಯಬೇಕು, ಬಂದೂಕು-ಪಿಸ್ತೂಲುಗಳ ಢಾಂ ಢೂಂ ಆಕ್ಷನ್ ಧಮಾಕ ಇರಬೇಕು, ಮತ್ತೇರಿಸುವಂಥ ಗ್ಲಾಮರಸ್ ನಾಯಕಿಯಿರಬೇಕು, ಒಬ್ಬ ಸೀಕ್ರೇಟ್ ಡಾನ್ ಇರಬೇಕು ಎಂಬ ಫಾರ್ಮುಲಾವನ್ನು ಬದಿಗಿಟ್ಟಿರುವ ಜಯತೀರ್ಥ, ಪತ್ತೇದಾರಿ ಚಿತ್ರವೊಂದನ್ನು ಮನರಂಜನಾತ್ಮಕವಾಗಿ ಕಲರ್‌ಫುಲ್ ಪಾತ್ರಗಳ ಮೂಲಕ ಹೇಳಲು ಹೊರಟಿದ್ದಾರೆ.
ಅವರೇ ಹೇಳುವ ಪ್ರಕಾರ ಬೆಲ್‌ಬಾಟಂ ಚಿತ್ರದ ಪತ್ತೇದಾರ ನಮ್ಮ ನಿಮ್ಮ ನಡುವೆ ಇರುವಂತಹ ಸಾಮಾನ್ಯ ಯುವಕ. ಪತ್ತೇದಾರಿ ಕಾದಂಬರಿಗಳು, ಸಿನಿಮಾಗಳಿಂದ ಸ್ಪೂರ್ತಿ ಪಡೆದು ಬಾಲ್ಯದಿಂದಲೂ ಪತ್ತೇದಾರನಾಗಬೇಕೆಂದು ಕನಸು ಕಾಣುತ್ತ ಪತ್ತೇದಾರನಾದ ಫನ್ ಲವಿಂಗ್ ವ್ಯಕ್ತಿ ಡಿಟೆಕ್ಟೀವ್ ದಿವಾಕರ ಮಲೆನಾಡಿನ ಊರೊಂದರಲ್ಲಿ ಕೊಲೆಪ್ರಕರಣವೊಂದನ್ನು ಬೇಧಿಸುವ ಮೂಲಕ ತನ್ನ ಚಾಣಾಕ್ಷತೆಯನ್ನು ಪ್ರಕಟಪಡಿಸುವ ದಿವಾಕರ್‌ಗೆ ಆ ನಂತರ ಒಂದು ಸೀಕ್ರೇಟ್ ಅಂಡರ್ ಕವರ್ ಆಪರೇಷನ್ ಮೂಲಕ ಹಿಂದೆಂದೂ ಕಂಡು ಕೇಳಿರದ ಅಪರಾಧ ಪ್ರಕರಣವೊಂದನ್ನು ಬೇಧಿಸಿ ಅದರ ಹಿಂದಿನ ನಿಗೂಢ ವ್ಯಕ್ತಿಗಳನ್ನು ಬಯಲಿಗೆಳೆಯುವ ಪ್ರಾಜೆಕ್ಟ್ ಸಿಗುತ್ತದೆ. ಆ ಅಪರೂಪದ ಕ್ರೈಮ್‌ಕೇಸ್ ಯಾವುದು ಎಂಬುದನ್ನು ಚಿತ್ರತಂಡ ಇದುವರೆಗೂ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಇಲ್ಲಿಯವರೆಗೆ ಜನರನ್ನು ತಲುಪಿರುವ ಹೀರೋ ಪರಿಚಯದ ಪುಟ್ಟ ಟೀಸರ್ ಮತ್ತು ಕಥಾಹಂದರವನ್ನು ಹೇಳುವ ಟೀಸರಿನಲ್ಲಿಯೂ ಈ ಕಾನ್ಫಿಡೆನ್ಷಿಯಲ್ ಸೀಕ್ರೇಟ್ ಕೇಸ್ ಯಾವುದೆಂದು ಚಿತ್ರತಂಡ ಹೇಳಿಲ್ಲ. ಬಹುಶಃ ಟ್ರೈಲರಿನಲ್ಲಿ ಡಿಟೆಕ್ಟೀವ್ ದಿವಾಕರ ಹ್ಯಾಂಡಲ್ ಮಾಡುವ ಆ ಕೇಸ್ ಏನೆಂಬುದು ಬಯಲಾಗುವ ಸಾಧ್ಯತೆಯಿದೆ.
#