ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ರೆಟ್ರೋ ಜಮಾನವನ್ನ ಕ್ರಿಯೇಟಿವ್ ಆಗಿ ಪರಿಚಯಿಸುತ್ತಲೇ ಕ್ರೇಜ್ ಸೃಷ್ಟಿಸಿದ್ದ ಚಿತ್ರ. ಪ್ರತಿಯೊಂದರಲ್ಲಿಯೂ ಹಳತಿಗೆ ಹೊಸಾ ಹೊಳಪು ನೀಡೋ ಪ್ರಯತ್ನದಿಂದಲೇ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿದ್ದ ಈ ಸಿನಿಮಾವೀಗ ಥೇಟರುಗಳಿಗೆ ಅಡಿಯಿರಿಸಿದೆ. ಈ ಕಾಲಮಾನಕ್ಕೆ ಹೊಸತೆನ್ನಿಸುವಂಥಾ ಅಪ್ಪಟ ಪತ್ತೇದಾರಿ ಕಥನವೊಂದು ಭರ್ಜರಿ ಕಾಮಿಡಿ ಝಲಕ್ಕುಗಳ ಜೊತೆಗೆ ನೋಡುಗರನ್ನು ಮುದಗೊಳಿಸಿದೆ.
ಟಿ.ಕೆ ದಯಾನಂದ್ ಬರೆದಿರೋ ಥ್ರಿಲ್ಲಿಂಗ್ ಕಥೆಗೆ ಜಯತೀರ್ಥ ಚಿತ್ರಕಥೆ ಮತ್ತು ರಘು ನಿಡುವಳ್ಳಿ ಸಂಭಾಷಣೆ ಬರೆದಿರೋ ಸಿನಿಮಾ ಬೆಲ್ ಬಾಟಮ್. ವರ್ಷಾಂತರಗಳ ಹಿಂದೆ ಕೋಲಾರ ಸೀಮೆಯಲ್ಲಿ ನಡೆದಿದ್ದ ಸತ್ಯ ಘಟನೆಯೊಂದರ ಎಳೆಯೊಂದಿಗೇ ಹೊಸೆದಿರೋ ರೋಚಕ ಕಥನವನ್ನ ಈ ಚಿತ್ರ ಒಳಗೊಂಡಿದೆ. ಬೆಲ್ ಬಾಟಮ್ ಅನ್ನು ಜನ ಯಾವ ನಿರೀಕ್ಷೆಯಿಟ್ಟುಕೊಂಡು ನೋಡಿದರೂ ಅದನ್ನು ತಣಿಸಿ ಬೇರೆಯದ್ದೇ ಜಗತ್ತಿನೊಂದಿಗೆ ವಿಹರಿಸುವಂತೆ ಮಾಡುವಲ್ಲಿ ಬೆಲ್ ಬಾಟಮ್ ಗೆದ್ದಿದೆ.
ರಿಷಬ್ ಶೆಟ್ಟಿ ಡಿಟಕ್ಟಿವ್ ದಿವಾಕರನಾಯಿ ತಮ್ಮ ಪ್ರತಿಭೆಯ ಮತ್ತೊಂದು ಮಜಲನ್ನು ಸಮರ್ಥವಾಗಿಯೇ ಅನಾವರಣಗೊಳಿಸಿದ್ದಾರೆ. ಈ ದಿವಾಕರನಿಗೆ ಸಣ್ಣ ವಯಸಿನಿಂದಲೇ ಪತ್ತೇದಾರಿ ಕಥೆಗಳನ್ನು ಓದೋ ಹವ್ಯಾಸ. ಆ ಸ್ಫೂರ್ತಿಯಿಂದ ತಾನು ಡಿಟೆಕ್ಟಿವ್ ಆಗಬೇಕೆಂಬ ಏಕ ಮಾತ್ರ ಉದ್ದೇಶದೊಂದಿಗೆ ಮುಂದುವರೆದ ಆತನನ್ನು ಬದುಕು ಪೊಲೀಸ್ ಕಾನ್ಸ್ಟೇಬಲ್ ವೃತ್ತಿಗೆ ಕಟ್ಟಿ ನಿಲ್ಲಿಸುತ್ತದೆ. ಹೀಗೆ ಅನಿವಾರ್ಯವಾಗಿ ಪೊಲೀಸು ವೃತ್ತಿಗಿಳಿದರೂ ದಿವಾಕರನೊಳಗಿನ ಪತ್ತೇದಾರಿಕೆಯ ಬುದ್ಧಿ ಮಾತ್ರ ಮರೆಯಾಗಿರೋದಿಲ್ಲ. ಹೀಗಿರುವಾಗಲೇ ಪೊಲೀಸಲ್ ಇಲಾಖೆಯನ್ನೇ ಮುಜುಗರಕ್ಕೆ ತಳ್ಳುವಂಥಾ ವಿದ್ಯಮಾನವೊಂದು ಘಟಿಸುತ್ತೆ. ಅದರ ಸುತ್ತಾ ಇಡೀ ಕಥೆ ಮಜವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.
ಬೆಲ್ ಬಾಟಮ್ ಚಿತ್ರದಲ್ಲೊಂದು ರೆಟ್ರೋ ಜಗತ್ತನ್ನೇ ಸೃಷ್ಟಿಸಿರೋ ನಿರ್ದೇಶಕ ಜಯತೀರ್ಥ ಇಡೀ ಕ್ಯಾನ್ವಾಸಿನ ಬಣ್ಣಗಳನ್ನು ಎಲ್ಲಿಯೂ ಚೆದುರದಂತೆ, ಎಲ್ಲರಿಗೂ ಆಪ್ತವಾಗುವಂತೆ ಕಟ್ಟಿ ಕೊಟ್ಟಿದ್ದಾರೆ. ಇಡೀ ಚಿತ್ರದ ಅಸಲೀ ಶಕ್ತಿಯೇ ಇದುವರೆಗೆ ಕಂಡು ಕೇಳರಿಯದಂಥಾ ವಿಚಿತ್ರ, ವಿಲಕ್ಷಣ ಪಾತ್ರಗಳು. ಸೆಗಣಿ ಪಿಂಟೋ, ಮರಕುಟುಕ ಎಂಬ ಸ್ಯಾಂಪಲ್ಲು ಕೇಳಿದರೇನೇ ಇದರ ವಿಶೇಷತೆ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ. ಹೀಗೆ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಕಾಡುವಂತೆ ಸೃಷ್ಟಿಸಲಾಗಿದೆ. ಮರಕುಟುಕನ ಪಾತ್ರಧಾರಿ ಯೋಗರಾಜ ಭಟ್ ಸೇರಿದಂತೆ ಸಮಸ್ತರೂ ಆಯಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿ ಪ್ರೇಕ್ಷಕರ ಮನಸಿನಾಳಕ್ಕಿಳಿದಿದ್ದಾರೆ. ಅಷ್ಟಕ್ಕೂ ಟಿ ಕೆ ದಯಾನಂದ್ ಅವರ ಕಥೆಯ ಸೊಗಸೇ ಅಂಥಾದ್ದಿದೆ!
ಜಯತೀರ್ಥ ಚಿತ್ರಗಳೆಂದ ಮೇಲೆ ಹೊಸತನ ಖಾಯಂ. ಅದು ಬೆಲ್ ಬಾಟಮ್ ಮೂಲಕವೂ ಮುಂದುವರೆದಿದೆ. ಹರಿಪ್ರಿಯಾ ಮತ್ತು ರಿಷಬ್ ಸೇರಿದಂತೆ ಎಲ್ಲರೂ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದಾರೆ. ಒಟ್ಟಾರೆಯಾಗಿ ಎಂಭತ್ತರ ದಶಕದ ಪತ್ತೇದಾರಿ ಚಿತ್ರಗಳ ಜಗತ್ತಿಗೆ ಬೆಲ್ ಬಾಟಮ್ ಮೂಲಕ ಎಲ್ಲರಿಗೂ ಪ್ರವೇಶ ಸಿಗುತ್ತದೆ. ಅಲ್ಲಿ ಭರ್ಜರಿ ಮನೋರಂಜನೆ, ಅದ್ಭುತ ಪತ್ತೇದಾರಿಕೆಯ ಗಮ್ಮತ್ತು… ಹೀಗೆ ಎಲ್ಲವೂ ಸಿಗುತ್ತದೆ. ಕೊನೇಯದಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಮಿಸ್ ಮಾಡಿಕೊಳ್ಳದೆ ನೋಡಲೇ ಬೇಕಾದ ಚಿತ್ರ ಬೆಲ್ ಬಾಟಮ್!
cinibuzz ರೇಟಿಂಗ್ ****/***** #
No Comment! Be the first one.