ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ಮಾಡಿದ್ದವರು ಇದೇ ದಯಾನಂದ್. ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.
ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಟಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ.
ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ‘ಬೆಲ್ಬಾಟಮ್’ ಸಿನಿಮಾಗೆ ಕಥೆ ಒದಗಿಸಿದ್ದಾರೆ. ಇಂಥ ಸಿನಿಮಾಗಳು ಗೆದ್ದರೆ ಕನ್ನಡದಲ್ಲೂ ಸಾಕಷ್ಟು ಹೊಸ ಕಂಟೆಂಟುಗಳ ಸಿನಿಮಾ ಬರೋದು ಗ್ಯಾರೆಂಟಿ. ಈ ಕಾರಣಕ್ಕಾದರೂ ನಾವು ಬೆಲ್ ಬಾಟಮ್ ಸಿನಿಮಾವನ್ನೊಮ್ಮೆ ನೋಡಲೇಬೇಕು.
#