ಕಂಡರೂ ಕಾಣದಂತೆ ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿ ಆಗುವಂತಹ ಬಾಲ್ಯ ವಿವಾಹ ಹಾಗೂ ಹೆಣ್ಣು ಮಕ್ಕಳ ಶೋಷಣೆಯ ಕಥಾ ವಸ್ತು ಭಾಗ್ಯಶ್ರೀ. ಈ ಚಿತ್ರವನ್ನು ಎಸ್. ಮಲ್ಲೇಶ್ ನಿರ್ದೇಶನ ಮಾಡುತ್ತಿದ್ಧಾರೆ. ಇದು ಮಲ್ಲೇಶ್ ಅವರೇ ಬರೆದಿರುವ ಭಾಗ್ಯ ಎನ್ನುವ ಕುರು ಕಾದಂಬರಿ ಆಧಾರಿತ ಚಿತ್ರವಾಗಿದ್ದು, ‘ಬಡವರ ಮನೆಯಲ್ಲಿ ಜನಿಸುವ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ, ಬಾಲ್ಯವಿವಾಹ ಪಿಡುಗಿನ ಕಾರಣದಿಂದಾಗಿ ಅವರು ಎದುರಿಸುವ ಸಂಕಷ್ಟವನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆಯಂತೆ. ಅಲ್ಲದೇ ಶೋಷಣೆಯ ವಿರುದ್ಧ ಮಕ್ಕಳೇ ಹೋರಾಟ ನಡೆಸಿ, ಎಲ್ಲರಿಗೂ ಬುದ್ಧಿ ಕಲಿಸುವ ಸನ್ನಿವೇಶಗಳು ಕೂಡ ಈ ಚಿತ್ರದ ಭಾಗವಾಗಿರಲಿವೆ.
ಇನ್ನು ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದು, ಎರಡು ಹಾಡಿಗೆ ಸಾಹಿತ್ಯ ದೊಡ್ಡ ರಂಗೇಗೌಡ ಗೀತಸಾಹಿತ್ಯವನ್ನು ಒದಗಿಸಿದ್ದಾರೆ. ಈ ಹಿಂದೆ ಬಾಲ್ಯವಿವಾಹದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಅಪಾರ ಪ್ರಮಾಣದ ಮಾಹಿತಿಯನ್ನು ಮಲ್ಲೇಶ್ ಸಂಗ್ರಹಿಸಿ, ದೊಡ್ಡ ರಂಗೇಗೌಡರ ಬಳಿ ತಂದಿದ್ದರಂತೆ. ಅದನ್ನು ಕಂಡು ಓದಿದ್ದ ದೊಡ್ಡರಂಗೇಗೌಡರು ಇಷ್ಟೆಲ್ಲ ಮಾಹಿತಿ ಇಟ್ಟುಕೊಂಡು ಒಂದು ಕಾದಂಬರಿ ಬರೆಯಿರಿ ಎಂದು ಸಲಹೆಯನ್ನು ನೀಡಿದ್ದರಂತೆ. ಅದರ ಪರಿಣಾಮವಾಗಿ ಈ ಕಾದಂಬರಿ ರೂಪುಗೊಂಡಿತು ಎಂಬುದು ನಿರ್ದೇಶಕರ ಅಂಬೋಣ.