ನಿರ್ದೇಶಕ ಎ. ಹರ್ಷ ತಮ್ಮ ಪ್ರತಿ ಸಿನಿಮಾ ಕೂಡಾ ಹನುಮಂತನ ಹೆಸರನ್ನೇ ಸೂಚಿಸಬೇಕು ಅಂತಾ ಬಯಸುತ್ತಾರೆ. ಸಿನಿಮಾದ ಕಂಟೆಂಟಿನಲ್ಲಿ ಕೂಡಾ ಆಂಜನೇಯನ ನೆರಳಿದ್ದೇ ಇರುತ್ತದೆ. ಭಜರಂಗಿ, ವಜ್ರಕಾಯ, ಜೈಮಾರುತಿ, ಅಂಜನೀಪುತ್ರ, ಸೀತಾರಾಮ ಕಲ್ಯಾಣ ಮತ್ತೀಗ ಭಜರಂಗಿ-೨ ಎಲ್ಲವೂ ರಾಮಧೂತನನ್ನೇ ಪ್ರದಕ್ಷಿಣೆ ಹಾಕುತ್ತಿವೆ. ಎ. ಹರ್ಷ ಆಂಜನೇಯನ ಹೆಸರಿನಲ್ಲಿ ರೂಪಿಸುವ ಸಿನಿಮಾಗಳೇನೋ ಗೆದ್ದು ಕಾಸು ಮಾಡುತ್ತಿವೆ. ಆದರೆ ಪ್ರತೀ ಸಿನಿಮಾದಲ್ಲೂ ಏನಾದರೊಂದು ಕಂಟಕ ಮಾತ್ರ ಎದುರಾಗುತ್ತಲೇ ಇರುತ್ತದೆ.
ಇಂದು ಬೆಳಿಗ್ಗೆ ಮುನ್ನೂರು ಜನ ಸಹ ಕಲಾವಿದರೊಂದಿಗೆ ಶಿವರಾಜ್ ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ನೆಲಮಂಗಲ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬರೋಬ್ಬರಿ ಒಂದು ಕೋಟಿ ರುಪಾಯಿಗಳನ್ನು ಖರ್ಚು ಮಾಡಿ ಸೆಟ್ ಕೂಡಾ ಹಾಕಲಾಗಿತ್ತು. ಕಾಡಿನ ನಡುವೆ ಇರುವಂತೆ ಗುಹೆಯೊಂದನ್ನು ಕೃತಕವಾಗಿ ಸೃಷ್ಟಿಸಲಾಗಿತ್ತು.
ಈ ಸೆಟ್ ನಿರ್ಮಿಸಲು ಕಳೆದ ಒಂದು ತಿಂಗಳಿಂದ ಕರ್ನಾಟಕ ಮತ್ತು ಚೆನ್ನೈನ ಕಾರ್ಪೆಂಟರುಗಳು, ಕಲಾವಿದರು ಕೆಲಸ ಮಾಡಿದ್ದರು. ಬಹುತೇಕ್ ಹಳೇ ಮರ, ಪಿ.ಓ.ಪಿ. ಮತ್ತು ಗೋಣಿಚೀಲ, ಟೋರಾ ಬಟ್ಟೆಗಳನ್ನೆಲ್ಲಾ ಬಳಸಿ ಈ ಸೆಟ್ ನಿರ್ಮಿಸಲಾಗಿತ್ತು. ಅದೇನು ಯಡವಟ್ಟಾಯಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಕ್ರಮೇಣ ಬಹುತೇಕ ಸೆಟ್ಟಿಗೆಲ್ಲಾ ವ್ಯಾಪಿಸಿ, ಒಂದು ಘಂಟೆಯ ಕಾಲ ಹೊತ್ತಿಉರಿದು ಧಗಧಗಿಸಿ ಸುಟ್ಟು ಕರಕಲಾಗಿದೆ. ಪುಣ್ಯಕ್ಕೆ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ನಾಯಕನಟ ಶಿವರಾಜ್ ಕುಮಾರ್ ಅವರನ್ನು ತಕ್ಷಣ ಕ್ಯಾರವಾನಿಗೆ ಹತ್ತಿಸಿ ಬೇರೆ ಕಡೆಗೆ ಕಳಿಸಿಕೊಟ್ಟಿದ್ದಾರೆ.
ಗೋಣಿಚೀಲ, ಹಳೇ ಮರದ ತುಂಡುಗಳು ಮತ್ತು ಒಣಗಿ ಉದುರಿದ ಎಲೆಗಳು ಯಥೇಚ್ಛವಾಗಿ ಬಳಸಿದ್ದರಿಂದ ಒಂದಿಷ್ಟು ಕಿಡಿ ಸೋಕಿದರೂ ಇಡೀ ಸೆಟ್ಟು ಬೆಂಕಿಗೆ ಆಹುತಿಯಾಗುವ ಅಪಾಯವಿರುತ್ತದೆ. ಇಂಥ ಸಾಕಷ್ಟು ಅವಘಡಗಳು ನಡೆದ ಉದಾಹರಣೆಯೂ ಇವೆ. ಹೀಗಿರುವಾಗ ಮುಂಜಾಗ್ರತೆ ವಹಿಸೋದು ಮುಖ್ಯ. ಹಾಗೆ ನೋಡಿದರೆ ಮೋಹನ್ ಬಿ.ಕೆರೆ ಸ್ಟುಡಿಯೋ ಎಲ್ಲ ರೀತಿಯಿಂದಲೂ ಸೇಫು ಅಂತಲೇ ಅಲ್ಲಿ ಹೆಚ್ಚು ಸೆಟ್ಟುಗಳನ್ನು ನಿರ್ಮಿಸಲಾಗುತ್ತದೆ. ಹಾಗಿದ್ದೂ ಈ ಯಡವಟ್ಟು ಯಾಕಾಯಿತು ಅನ್ನೋದೇ ಸದ್ಯಕ್ಕೆ ಗೊತ್ತಾಗಿಲ್ಲ.
ವಜ್ರಕಾಯನ ವಿಗ್ರಹವೇ ಉರುಳಿಬಿದ್ದಿತ್ತು!
ವಜ್ರಕಾಯ ಸಿನಿಮಾ ಚಿತ್ರೀಕರಣಗೊಳ್ಳುತ್ತಿದ್ದ ಸಂದರ್ಭದಲ್ಲೂ ಇಂಥದ್ದೇ ಒಂದು ಅನಾಹುತ ಸಂಭವಿಸಿತ್ತು. ಆ ದಿನ ಪತ್ರಕರ್ತರನ್ನೆಲ್ಲಾ ಕರೆಸಿ ಹನುಮನ ಬೃಹತ್ ಮೂರ್ತಿ ಮತ್ತು ಚಿತ್ರೀಕರಣದ ದೃಶ್ಯಗಳನ್ನೆಲ್ಲಾ ತೋರಿಸಿ ಪತ್ರಿಕಾಗೋಷ್ಟಿಯನ್ನು ನಡೆಸಲಾಗಿತ್ತು. ಪ್ರೆಸ್ ಮೀಟು ಮುಗಿಸಿ ಪತ್ರಕರ್ತರೆಲ್ಲಾ ಈ ಕಡೆ ಹೊರಟಿದ್ದರು. ಅಷ್ಟರಲ್ಲೇ ಅಜಾನುಬಾಹು ವೀರಾಂಜನೇಯ ಬಿರುಗಾಳಿಗೆ ಸಿಲುಕಿ ನೆಲಕ್ಕುರುಳಿದ್ದ. ಕೆಲವೇ ನಿಮಿಷದ ಅಂತರದಲ್ಲಿ ದೊಡ್ಡ ಅನಾಹುತದಿಂದ ಎಲ್ಲರೂ ಪಾರಾಗಿದ್ದರು.
ಇವತ್ತು ನೋಡಿದರೆ, ಭಜರಂಗಿ ಸೆಟ್ಟಿಗೆ ಬೆಂಕಿ ಬಿದ್ದಿದೆ. ಪ್ರಾಣದೇವರು ಅಂತಾ ಕರೆಸಿಕೊಳ್ಳುವ ಹನುಮಂತನ ಮೇಲೆ ನಿರ್ದೇಶಕ ಹರ್ಷ ಅವರಿಗೆ ಎಲ್ಲಿಲ್ಲದ ಭಕ್ತಿ. ಈ ಕಾರಣಕ್ಕೇ ಘಟಿಸಬಹುದಾದ ಬಾರೀ ದುರಂತ ಸ್ವಲ್ಪದರಲ್ಲೇ ಮಿಸ್ ಆಗಿರಬಹುದು.
ಜೈ ಭಜರಂಗಬಲಿ!