ನಿರ್ಮಾಪಕರಿಗೆ ಭರ್ಜರಿ ಲಾಭ

ಚೇತನ್ ಕುಮಾರ್ ಅದೃಷ್ಟವಂತ ನಿರ್ದೇಶಕ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಎರಡು ವರ್ಷಗಳಿಂದ ಕಾದಿದ್ದಕ್ಕೂ ಸಾರ್ಥಕವಾಗುವಂಥಾ ಕಲೆಕ್ಷನ್ ಕಂಡಿದೆ.. ಭರಾಟೆಯ ಮೊದಲ ದಿನ ಗಳಿಕೆ ಬರೋಬ್ಬರಿ ಎಂಟು ಕೋಟಿ ಮೂವತ್ತಾರು ಲಕ್ಷ ರುಪಾಯಿಗಳು ಅಂದರೆ ನಂಬಲೇಬೇಕು. ಕರ್ನಾಟಕದ ಒಟ್ಟು ೩೯೬ ಥಿಯೇಟರುಗಳಲ್ಲಿ ಭರಾಟೆ ತೆರೆಕಂಡಿತ್ತು. ಅದರಲ್ಲಿ ಶೇ. ೬೦ಕ್ಕೂ ಹೆಚ್ಚು ಕಡೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ. ಶ್ರೀಮುರಳಿಗೆ ಐಟಿ ವಲಯ, ಸ್ಟೂಡೆಂಟ್ಸ್ ಮತ್ತು ಮಹಿಳಾ ಅಭಿಮಾನಿಗಳು ಯಥೇಚ್ಚವಾಗಿದ್ದಾರೆ. ಇವರೆಲ್ಲಾ ಥಿಯೇಟರಿಗೆ ಕಾಲಿಡೋದೇ ವೀಕೆಂಡ್ನಲ್ಲಿ ಹೀಗಾಗಿ ಶನಿವಾರ ಭಾನುವಾರ ಕೂಡಾ ಇದೇ ಮಟ್ಟಕ್ಕೆ ಕಲೆಕ್ಷನ್ ಗ್ಯಾರೆಂಟಿ!

ಈಗಾಗಲೇ ನಿರ್ಮಾಪಕ ಸುಪ್ರಿತ್ ಹಾಕಿದ ಬಂಡವಾಳವನ್ನು ವಾಪಾಸು ತೆಗೆದಿದ್ದಾರೆ ಎನ್ನಲಾಗುತ್ತಿದೆ. ಒಳ್ಳೊಳ್ಳೇ ರೇಟಿಗೆ ರೈಟ್ಸುಗಳೂ ಮಾರಾಟವಾಗಿವೆಯಂತೆ. ಆಡಿಯೋ ಕೂಡಾ ಹಿಟ್ ಆಗಿರುವುದು ಸಿನಿಮಾಗೆ ಪ್ಲಸ್ ಪಾಯಿಂಟ್. ಚಿತ್ರದಲ್ಲ್ಲಿ ಆಕ್ಷನ್ಗೆ ಹೆಚ್ಚು ಮಹತ್ವ ನೀಡಿರೋದರಿಂದ ಬಿ ಮತ್ತು ಸಿ ಸೆಂಟರ್ ಪ್ರೇಕ್ಷಕರಿಗೆ ಇದು ರಸದೌತಣವಿದ್ದಂತೆ. ಜನ ನೂಕು ನುಗ್ಗಲಿನಲ್ಲಿ ಬಂದು ಸಿನಿಮಾ ನೋಡುತ್ತಾರೆ. ಅಲ್ಲಿಗೆ ಭರಾಟೆ ಬಾಕ್ಸಾಫೀಸನ್ನು ಲೂಟಿ ಮಾಡುವುದರಲ್ಲಿ ಯಾವ ಸಂದೇಹವೂ ಇಲ್ಲ.

ಸಾಕಷ್ಟು ಬಾರಿ ಎರಡು ಸಿನಿಮಾ ಹಿಟ್ ಕೊಟ್ಟ ನಿರ್ದೇಶಕರು ಮೂರನೇ ಪ್ರಯತ್ನದಲ್ಲಿ ಔಟ್ ಆಗಿ ಬಿಡುತ್ತಾರೆ. ಚೇತನ್ ಕುಮಾರ್ ಅವರ ಲಕ್ ಚನ್ನಾಗಿದೆಯಾ ಅಥವಾ ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವೋ ಗೊತ್ತಿಲ್ಲ. ಚೇತನ್ ಈಗ ಕನ್ನಡ ಚಿತ್ರರಂಗದ ಪಾಲಿಗೆ ಹ್ಯಾಟ್ರಿಕ್ ಡೈರೆಕ್ಟರ್. ಭರ್ಜರಿ, ಬಹದ್ದೂರ್ ಮತ್ತೀಗ ಭರಾಟೆ – ‘ಭ ಅಕ್ಷರ ಚೇತನ್ ಕೈ ಹಿಡಿದಿದೆ!

ಒಬ್ಬ ನಿರ್ದೇಶಕ ಸ್ವತಃ ಬರಹಗಾರನಾಗಿದ್ದಾಗ ಮಾತ್ರ ಬೊಗಸೆ ತುಂಬುವಷ್ಟು ಗೆಲುವು ದಕ್ಕುತ್ತದೆ. ಹಾಡು, ಡೈಲಾಗು, ಕಥೆ, ಚಿತ್ರಕಥೆ ಎಲ್ಲ ವಿಭಾಗಗಳಲ್ಲೂ ಪಳಗಿರೋದರಿಂದಲೇ ಚೇತನ್ ಅವರಿಗೆ ಒಂದು ಸಿನಿಮಾವನ್ನು ಜನಪ್ರಿಯ ಮಾದರಿಯಲ್ಲಿ ಹೇಗೆ ರೂಪಿಸಬಹುದು ಎನ್ನುವ ಅಂದಾಜು ಸಿಕ್ಕಿದೆ. ವಿಮರ್ಶೆಗಳಾಚೆಗೆ ಒಂದು ಸಿನಿಮಾ ಹಾಕಿದ ಬಂಡವಾಳವನ್ನು ವಾಪಾಸು ತಂದು ಕೊಟ್ಟಿತಾ? ಎಷ್ಟು ಪಟ್ಟು ಲಾಭ ಮಾಡಿತು? ಅನ್ನೋದು ಮುಖ್ಯವಾಗುತ್ತದೆ. ಕಮರ್ಷಿಯಲ್ ಸಿನಿಮಾಗಳ ಮಟ್ಟಿಗೆ ಯಾರು ಲಾಭ ಮಾಡಿಕೊಡುತ್ತಾರೋ ಅವರು ಸಕ್ಸಸ್ಫುಲ್ ಡೈರೆಕ್ಟರ್. ಅಷ್ಟೇ… ನಿರ್ದೇಶಕ ಒಂದು ಸಲ ಪ್ರೇಕ್ಷಕರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡುಬಿಟ್ಟರೆ ಯಶಸ್ಸು ಸಾಕಷ್ಟು ದೂರ ಕರೆದುಕೊಂಡು ಹೋಗುತ್ತದೆ. ಈ ನಿಟ್ಟಿನಲ್ಲಿ ಚೇತನ್ ಸದ್ಯದ ಮಟ್ಟಿಗೆ ಉದಾಹರಣೆಯಾಗಿದ್ದಾರೆ.

ಶ್ರೀ ಮುರಳಿ ಅವರಿಗೂ ‘ಭರಾಟೆ’ ವರವಾಗಿದೆ. ಇನ್ನೂ ದೊಡ್ಡ ಮಟ್ಟದ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲು ಅವರಿಗಿದು ಸಹಾಯವಾಗಿಲಿದೆ. ಭರಾಟೆಯ ಕಮರ್ಷಿಯಲ್ ಗೆಲುವು ಮುಂದೆ ಬರಲಿರುವ ಮದಗಜ ನಿರೀಕ್ಷೆಯನ್ನು ಹೆಚ್ಚಿಸುವುದರಲ್ಲಿ ಡೌಟಿಲ್ಲ!


Posted

in

by

Tags:

Comments

Leave a Reply