ಸದ್ಯ ಸ್ಯಾಂಡಲ್’ವುಡ್’ನಲ್ಲಿ ಅತಿ ಹೆಚ್ಚು ಕ್ರೇಜ಼್ ಕ್ರಿಯೇಟ್ ಮಾಡಿರುವ ಸಿನಿಮಾ ಶ್ರೀಮುರಳಿ ಅಭಿನಯದ ಭರಾಟೆ. ಈಗಾಗಲೇ ಶ್ರೀಮುರಳಿ ಬೇರೆಯದ್ದೇ ಗೆಟಪ್ಪಿನಲ್ಲಿರೋ ಸ್ಟಿಲ್ಲುಗಳು, ಹಾಡುಗಳು ಮತ್ತು ಟ್ರೇಲರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
ರಾಜಾಸ್ಥಾನದ ಮರಳುಗಾಡಿನ ಹಿನ್ನೆಲೆ ಮತ್ತು ಶ್ರೀಮುರಳಿ ಅವರ ಲುಕ್ಕು ಜನರನ್ನು ಸೆಳೆದಿದೆ. ನಿರ್ದೇಶಕ ಭರ್ಜರಿ ಚೇತನ್ ಅವರ ಕಾರ್ಯಶೈಲಿ ಮತ್ತು ಅವರು ಆಯ್ಕೆ ಮಾಡಿಕೊಂಡಿರುವ ಲೊಕೇಷನ್ನುಗಳ ಬಗ್ಗೆ ಸ್ವತಃ ಶ್ರೀಮುರಳಿ ಮನಸೋತಿದ್ದಾರೆ. ಇದುವರೆಗೂ ಮರುಭೂಮಿಯಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣವಾಗಿದೆ. ಆದರೆ ಚೇತನ್ ಈವರೆಗೂ ಕನ್ನಡಿಗರು ನೋಡಿರದ ಆಂಗಲ್ಲುಗಳಲ್ಲಿ, ಯಾರೂ ಹೆಚ್ಚಾಗಿ ಹೋಗದ ಮರುಭೂಮಿಯ ಪ್ರದೇಶಗಳನ್ನೇ ಚಿತ್ರೀಕರಣಕ್ಕೆ ಆಯ್ದುಕೊಂಡಿದ್ದಾರಂತೆ.

ನಮ್ಮ ನಿರ್ದೇಶಕರು ಶೂಟಿಂಗೆಗೆ ಆಯ್ದುಕೊಳ್ಳುವ ಪ್ರದೇಶಗಳೇ ನಮಗೆಲ್ಲ ಅಚ್ಚರಿ ಹುಟ್ಟಿಸುತ್ತೆ. ಪ್ರತೀ ಕ್ಷಣವೂ ಹೊಸ ಹುಡುಕಾಟ ನಡೆಸೋ ನಿರ್ದೇಶಕರ ಜೊತೆ ಕೆಲಸ ಮಾಡೋದೇ ಸಂತಸದ ವಿಚಾರ ಅಂತ ಒಟ್ಟಾರೆ ‘ಭರಾಟೆ ಅನುಭವಗಳನ್ನು ಶ್ರೀ ಮುರಳಿ ತೆರೆದಿಟ್ಟಿದ್ದಾರೆ.

ಈ ಸಿನಿಮಾದಲ್ಲಿ ಸಾಯಿ ಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಸಹೋದರರು ಸೇರಿದಂತೆ ಬರೋಬ್ಬರಿ ಹದಿಮೂರು ಜನ ವಿಲನ್ನುಗಳು ಕಾಣಿಸಿಕೊಂಡಿರುವ ವಿಚಾರ ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ವಿಚಾರವಾಗಿದೆ. ಕಿಸ್ ಸಿನಿಮಾದಿಂದ ಎಲ್ಲರನ್ನೂ ಸೆಳೆದುಕೊಂಡಿರುವ ಶ್ರೀ ಲೀಲಾ ಭರಾಟೆಯಲ್ಲಿ ಮುರಳಿ ಅವರಿಗೆ ಜೊತೆಯಾಗಿದ್ದಾಳೆ. ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿರುವ ಭರಾಟೆ ತೆರೆಗೆ ಅಪ್ಪಳಿಸಲು ಈಗ ದಿನಗಣನೆ ಆರಂಭವಾಗಿದೆ.