ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಯಾವಾಗ ಚಿತ್ರೀಕರಣ ಆರಂಭವಾಯ್ತೋ ಆ ಘಳಿಗೆಯಿಂದಲೇ ಸದಾ ಸುದ್ದಿಯಲ್ಲಿರುವ ಈ ಚಿತ್ರವೀಗ ಬೇರೆ ಬೇರೆ ಭಾಷೆಗಳ ಚಿತ್ರರಂಗವನ್ನೂ ತನ್ನತ್ತ ಸೆಳೆದಿದೆ. ಇನ್ನು, ದರ್ಶನ್ ಸೋದರಳಿಯ ಮನೋಜ್ ನಟಿಸುತ್ತಿರುವ ‘ಟಕ್ಕರ್’ಗೆ ನಾಲ್ಕೈದು ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಈ ಎರಡೂ ಸಿನಿಮಾಗಳಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಡಬ್ಬಿಂಗ್ ರೈಟ್ಸ್‌ಗಾಗಿ ಪೈಪೋಟಿ ಆರಂಭವಾಗಿದೆ!
ವಿಶೇಷವೆಂದರೆ ಈ ಎರಡೂ ಸಿನಿಮಾಗಳ ಫಸ್ಟ್ ಲುಕ್ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ. ಅದು ಒಟ್ಟಾರೆ ಚಿತ್ರದ ಅದ್ದೂರಿತನಕ್ಕೂ ಕನ್ನಡಿ ಹಿಡಿದಂತಿದೆ. ಈ ಕಾರಣದಿಂದಾಗಿಯೇ ಡಬ್ಬಿಂಗ್ ಹಕ್ಕುಗಳಿಗೆ ಭಾರೀ ಬೇಡಿಕೆ ಬಂದಿದೆ. ಇದೀಗ ಹಿಂದಿ ಹಾಗೂ ಭೋಜ್‌ಪುರಿ ಭಾಷೆಗಳಿಗೆ ಭರಾಟೆ ಮತ್ತು ಟಕ್ಕರ್ ಸಿನಿಮಾಗಳನ್ನು ಡಬ್ ಮಾಡಲು ಪ್ರಸಿದ್ಧ ಸಂಸ್ಥೆಗಳೇ ಉತ್ಸುಕವಾಗಿವೆ.
ಬಾಲಿವುಡ್‌ನ ಪ್ರಸಿದ್ಧ ಕಂಪೆನಿಗಳೇ ಈ ಸಿನಿಮಾಗಳ ಡಬ್ಬಿಂಗ್ ಹಕ್ಕುಗಳನ್ನು ಪಡೆಯಲು ಹಣಾಹಣಿ ಶುರು ಮಾಡಿವೆ. ದೊಡ್ಡ ಮೊತ್ತ ಕೊಟ್ಟು ಡಬ್ಬಿಂಗ್ ಹಕ್ಕು ಖರೀದಿಗೂ ಮುಂದಾಗಿವೆ. ಭೋಜ್‌ಪುರಿಯಲ್ಲಂತೂ ಈ ಪೈಪೋಟಿ ಇನ್ನೂ ತೀವ್ರವಾಗಿದೆಯಂತೆ. ಆದರೆ ಈ ಬಗ್ಗೆ ಇನ್ನೂ ಮಾತುಕತೆ ಚಾಲ್ತಿಯಲ್ಲಿದೆ. ಶೀರ್ಘದಲ್ಲಿಯೇ ಈ ಬಗ್ಗೆ ನಿರ್ಮಾಪಕರು ನಿರ್ಧಾರ ಕೈಗೊಳ್ಳಲಿದ್ದಾರೆ.
ಭರಾಟೆಯನ್ನು ಭೋಜ್‌ಪುರಿ ಭಾಷೆಗೆ ಭರಾಟೆಯನ್ನು ಡಬ್ ಮಾಡುವ ಸಲುವಾಗಿ ನೂಕು ನುಗ್ಗಲು ಶುರುವಾಗಿರೋದಕ್ಕೆ ಕಾರಣವಿದೆ. ಭರಾಟೆ ಚಿತ್ರದ ಚಿತ್ರೀಕರಣ ಆರಂಭವಾಗಿದ್ದೇ ರಾಜಸ್ಥಾನದ ಮರುಭೂಮಿಯಲ್ಲಿ. ಇದರ ಬಹುಭಾಗದ ಚಿತ್ರೀಕರಣ ಅಲ್ಲಿಯೇ ನಡೆಯಲಿದೆ. ಶ್ರೀಮುರಳಿಯ ವೇಷಭೂಷಣಗಳೂ ಕೂಡಾ ಅಲ್ಲಿನ ಶೈಲಿಗನುಗುಣವಾಗಿಯೇ ಇದೆ. ಈ ಚಿತ್ರದಲ್ಲಿ ಅಲ್ಲಿನ ಸಂಸ್ಕೃತಿಯ ಘಮವೇ ಹೆಚ್ಚಾಗಿರೋದರಿಂದ ಭೋಜ್‌ಪುರಿಯಲ್ಲಿ ಈ ಚಿತ್ರ ಗೆಲ್ಲೋದು ಗ್ಯಾರೆಂಟಿ. ಆದ್ದರಿಂದಲೇ ಡಬ್ಬಿಂಗ್ ಹಕ್ಕುಗಳಿಗಾಗಿ ಕಸರತ್ತು ಶುರುವಾಗಿದೆ.
ಟಕ್ಕರ್ ಸಿನಿಮಾದ ಮೂಲಕ ಆರಡಿಯ ಹುಡುಗ ಮನೋಜ್ ಎಂಟ್ರಿ ಕೊಡುತ್ತಿರೋದು ಅಮೋಘ ಐದು ಫೈಟುಗಳನ್ನು ರೋಚಕವಾಗಿ ಚಿತ್ರೀಕರಿಸಿರೋದು, ದುಬಾರಿ ಬೆಲೆಯ ಪ್ಯಾಂಟಮ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರೋದು, ಸದ್ಯ ಕನ್ನಡದ ಕಿರುತೆರೆಯ ಸ್ಟಾರ್ ನಟಿ ರಂಜನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಂಡಿರೋದು, ಭಜರಂಗಿ ಲೋಕಿ ಸ್ಟೈಲಿಷ್ ವಿಲನ್ ಆಗಿ ಆರ್ಭಟಿಸಿರೋದು… ಹೀಗೆ ಹಲವಾರು ಕಾರಣಗಳಿಗಾಗಿ ರಘು ಶಾಸ್ತ್ರಿ ನಿರ್ದೇಶನದ ಟಕ್ಕರ್ ಚಿತ್ರದ ಮಾರ್ಕೆಟ್ಟು ತೆರೆದುಕೊಂಡಿದೆ. ಅಂತಿಮ ಹಂತದ ಚಿತ್ರೀಕರಣದ ಸಂದರ್ಭದಲ್ಲೇ ನಾಗೇಶ್ ಕೋಗಿಲು ಅವರ ನಿರ್ಮಾಣದ ‘ಟಕ್ಕರ್’ಗೆ ಬೇಡಿಕೆ ಸೃಷ್ಟಿಯಾಗಿರೋದು ನಿಜಕ್ಕೂ ಒಳ್ಳೇ ಬೆಳವಣಿಗೆ.
ಕನ್ನಡ ಚಿತ್ರಗಳು ಚಿತ್ರೀಕರಣದ ಹಂತದಲ್ಲಿಯೇ ಬೇರೆ ಭಾಷೆಗಳಿಂದ ಇಂಥಾ ಬೇಡಿಕೆ ಪಡೆದಿರೋದು ಸಕಾರಾತ್ಮಕ ಬೆಳವಣಿಗೆ. ಈ ಮೂಲಕ ಭರಾಟೆ ಮತ್ತು ಟಕ್ಕರ್ ಬಗ್ಗೆ ಕನ್ನಡ ಪ್ರೇಕ್ಷಕರಲ್ಲಿಯೂ ಕುತೂಹಲ ಇಮ್ಮಡಿಸಲಿದೆ.
#