ಮಫ್ತಿ ಚಿತ್ರದ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರಿಸುತ್ತಲೇ ಎಂಟ್ರಿ ಕೊಡಲು ರೆಡಿಯಾಗಿರುವ ಚಿತ್ರ ಭರಾಟೆ. ಚಿತ್ರೀಕರಣ ಆರಂಭವಾದಾಗಿನಿಂದಲೂ ಶ್ರೀಮುರಳಿಯ ಡಿಫರೆಂಟ್ ಗೆಟಪ್, ಸಾಹಸ ಸೇರಿದಂತೆ ನಾನಾ ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿರೋ ಭರಾಟೆ ಈಗ ಮೈಸೂರಲ್ಲಿ ಶುರುವಾಗಿದೆ. ಮಾಸ್ ಗೆಟಪ್ಪಿನ ಚಿತ್ರೀಕರಣವೀಗ ಡ್ಯುಯೆಟ್ ಮೂಡಿಗೆ ಜಾರಿಕೊಂಡಿದೆ.
ಮೈಸೂರಿನ ಸುಂದರ ತಾಣಗಳಲ್ಲೀಗ ಡ್ಯುಯೆಟ್ ಸಾಂಗಿನ ಚಿತ್ರೀಕರಣ ಅವ್ಯಾಹತವಾಗಿ ನಡೆಯುತ್ತಿದೆ. ನಾಯಕಿ ಶ್ರೀಲೀಲಾ ಜೊತೆ ಶ್ರೀಮುರುಳಿ ರೊಮ್ಯಾಂಟಿಕ್ ಸೀನುಗಳಲ್ಲಿ ನಟಿಸುತ್ತಿದ್ದಾರೆ. ರಾಜಸ್ಥಾನ ಮುಂತಾದೆಡೆಗಳಲ್ಲಿ ನಡೆದಿರೋ ಚಿತ್ರೀಕರಣದಷ್ಟೇ ಅದ್ದೂರಿಯಾಗಿ ಈ ಹಾಡನ್ನೂ ಚಿತ್ರೀಕರಿಸಿಕೊಳ್ಳಲು ಚಿತ್ರತಂಡ ಶ್ರಮಿಸುತ್ತಿದೆ. ಈಗಾಗಲೇ ಹೈದ್ರಾಬಾದ್, ರಾಜಸ್ಥಾನ್ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಚಿತ್ರತಂಡ ಮೈಸೂರಿನಲ್ಲಿ ಅದ್ಬುತವಾದೊಂದು ಸೆಟ್ ಅನ್ನೂ ಹಾಕಿದೆ.
ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಭರಾಟೆ ಶ್ರೀಮುರಳಿ ಇಮೇಜಿಗೆ ತಕ್ಕಂಥಾ ಮಾಸ್ ಚಿತ್ರ. ಇದರಲ್ಲಿ ಹಿಂಡುಗಟ್ಟಲೆ ಖಳನಟರು ಥರ ಥರದ ಪಾತ್ರಗಳಲ್ಲಿ ವಿಜೃಂಭಿಸಿದ್ದಾರೆ. ಸಾಯಿಕುಮಾರ್, ಅಯ್ಯಪ್ಪ ಶರ್ಮಾ ಮತ್ತು ರವಿಶಂಕರ್ ಸಹೋದರರು ಒಟ್ಟಾಗಿ ಈ ಚಿತ್ರದಲ್ಲಿ ಖಳರಾಗಿ ನಟಿಸಿರೋದು ವಿಶೇಷ. ಇನ್ನುಳಿದಂತೆ ಜಗಪತಿ ಬಾಬು ಸೇರಿದಂತೆ ಖಳ ನಟರ ಲಿಸ್ಟು ದೊಡ್ಡದಿದೆ. ಈ ಡ್ಯುಯೆಟ್ ಹಾಡು ಮುಗಿದರೆ ಭರಾಟೆ ಅಂತಿಮ ಘಟ್ಟ ತಲುಪಿಕೊಂಡಂತಾಗುತ್ತದೆ.