ಕನ್ನಡದ ಸಾಕಷ್ಟು ಸ್ಟಾರ್ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಲೇ ಬೆಳಕಿಗೆ ಬಂದವರು ಮಂಜು ಮಾಂಡವ್ಯ. ಆ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾವನ್ನು ನಿರ್ದೇಶನ ಕೂಡಾ ಮಾಡಿದರು. ಚಿತ್ರರಂಗದಲ್ಲಿ ಹಂತ ಹಂತ ಹಂತವಾಗಿ ಮೇಲೆ ಬಂದಿರುವ ಮಂಜು ಮಾಂಡವ್ಯ ಈಗ ‘ಶ್ರೀ ಭರತ-ಬಾಹುಬಲಿ’ ಸಿನಿಮಾದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ.
ಇದೇ ಜನವರಿ ೧೭ಕ್ಕೆತೆರೆಗೆ ಬರಲು ಅಣಿಯಾಗಿರುವ ಈ ಚಿತ್ರದ ಎಣ್ಣೆ ಸಾಂಗು ಈಗ ಹೊಸ ವರ್ಷಕ್ಕೆ ರಂಗು ತುಂಬಿದೆ. ನ್ಯೂ ಇಯರ್ ಪಾರ್ಟಿ ಹೊತ್ತಲ್ಲಿ ಎಲ್ಲೆಲ್ಲೂ ‘ಶ್ರೀ ಭರತ-ಬಾಹುಬಲಿ’ಯ ಹಾಡು ಮಾರ್ದನಿಸುತ್ತಿದೆ. ‘ಕಣ್ಣಾಮುಚ್ಚೆ ಕಾಡೆಗೂಡೆ ಉರುಳೆಹೋಯ್ತು ಕಾಲ, ಹೆಣ್ಣು ಗಂಡು ಇನ್ಮೇಲೆ ಒಂದೇ ಕಲಾ. ಫುಲ್ಲು ಬಾಟ್ಲು ಲೇಡೀಸ್ಗೂನು ಬೇಕು ಕಲಾ…’ ಎಂದು ಶುರುವಾಗುವ ಈ ಹಾಡನ್ನು ಸ್ವತಃ ಮಂಜು ಮಾಂಡವ್ಯ ಬರೆದಿರೋದಲ್ಲದೆ, ಅವರೇ ಹಾಡಿದ್ದಾರೆ.
ಈ ಹಾಡಿನಲ್ಲಿ ಶೃತಿ ಪ್ರಕಾಶ್ ಸಖತ್ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಚಿಕ್ಕಣ್ಣ ಮತ್ತು ಮಂಜು ಮಾಂಡವ್ಯ ಭಾಗಿಯಾಗಿರುವ ಈ ಹಾಡನ್ನು ವಿಶೇವವಾದ ಸೆಟ್’ನಲ್ಲಿ ಕಲರ್’ಫುಲ್ ಆಗಿ ಚಿತ್ರೀಕರಿಸಲಾಗಿದೆ. ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಮಸ್ತ್ ಹಾಡನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಎಲ್ಲ ಪ್ರಾಕಾರದ ಹಾಡುಗಳಿಗೂ ಸಂಗೀತ ನೀಡಿದ್ದಾರೆ. ಮೆಲೋಡಿ ಮಾತ್ರವಲ್ಲದೆ, ಕುಣಿದು ಕುಪ್ಪಳಿಸುವ ಹಾಡಿಗೆ ಕೂಡಾ ಕದ್ರಿ ಟ್ಯೂನು ಹೊಂದುತ್ತದೆ ಅನ್ನೋದಕ್ಕೆ ಈಗ ಭರತ ಬಾಹುಬಲಿಯ ಎಲ್ಲಿಗ್ ಬಂತು ಕಾಲ ಹಾಡು ಸಾಕ್ಷಿಯಂತಿದೆ!
ಸಂಭಾಷಣೆ ಬರಹಗಾರನಾಗಿ, ನಿರ್ದೇಶಕನಾಗಿ ಗೆಲುವು ಕಂಡಿರುವ ಮಂಜು ಮಾಂಡವ್ಯ ಪಾಲಿಗೆ ‘ಶ್ರೀ ಭರತ-ಬಾಹುಬಲಿ’ ದೊಡ್ಡ ಪರೀಕ್ಷೆಯಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬರಹಗಾರರಾಗಿ ಬಂದು ನಿರ್ದೇಶನದಲ್ಲೂ ಸೈ ಅನಿಸಿಕೊಂಡು ಆನಂತರ ಹೀರೋ ಆದ ಸಾಕಷ್ಟು ಪ್ರತಿಭೆಗಳಿದ್ದಾರೆ. ಒಂದು ವೇಳೆ ‘ಶ್ರೀ ಭರತ-ಬಾಹುಬಲಿ’ ಅಂದುಕೊಂಡಂತೇ ಗೆಲುವು ಕಂಡರೆ ಮಂಜು ಮಾಂಡವ್ಯ ಪರ್ಮನೆಂಟು ಹೀರೋ ಆಗಿ ಕೂಡಾ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲಿದ್ದಾರೆ. ಅದು ಸಾಧ್ಯವಾಗಲಿ…