ಮಾಸ್ಟರ್ ಪೀಸ್ ಚಿತ್ರವನ್ನು ನಿರ್ದೇಶಿಸಿದ್ದ ಮಂಜು ಮಾಂಡವ್ಯ ಈಗ ಶ್ರೀ ಭರತ ಬಾಹುಬಲಿ ಮೂಲಕ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಇದೇ ಜನವರಿ 17ಕ್ಕೆ ತೆರೆಗೆ ಬರುತ್ತಿರುವ ಶ್ರೀ ಭರತ ಬಾಹುಬಲಿಯ ನಿರ್ಮಾಪಕರು ಯಾರು ಅನ್ನೋದೇ ಇಷ್ಟು ದಿನ ಸ್ಪಷ್ಟವಾಗಿರಲಿಲ್ಲ. ಈ ಚಿತ್ರದ ಟ್ರೇಲರ್ ಬಿಡುಗಡೆ ಹೊತ್ತಿನಲ್ಲಿ ನಿರ್ಮಾಪಕರು ಕಾಣಿಸಿಕೊಂಡಿದ್ದೂ ಅಲ್ಲದೆ, ಇಡೀ ಚಿತ್ರರಂಗವೇ ಬೆರಗಾಗುವಂತಾ ಘೋಷಣೆ ಮೊಳಗಿಸಿದ್ದಾರೆ!

ಐಶ್ವರ್ಯಾ ಡೆವಲಪರ‍್ಸ್ ಮೂಲಕ ಸರಿ ಸುಮಾರು ಹತ್ತು ಸಾವಿರ ಜನರಿಗೆ ನಿವೇಶನ ನೀಡಿರುವ ಶಿವಕುಮಾರ್ ಶ್ರೀ ಭರತ ಬಾಹುಬಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಂಜು ಮಾಂಡವ್ಯ ಸಂಭಾಷಣೆಕಾರರಾಗಿ ಸಾಕಷ್ಟು ಸ್ಟಾರ್ ಸಿನಿಮಾಗಳಿಗೆ ಕೆಲಸ ಮಾಡಿದ್ದವರು. ಮಾಸ್ಟರ್ ಪೀಸ್ ಚಿತ್ರವನ್ನು ನಿರ್ದೇಶಿಸಿ ಗೆದ್ದವರು. ಇದರ ಜೊತೆಗೆ ರಾಜಾಹುಲಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದರು. ಆದರೆ ಹೀರೋ ಆಗಿ ಲಾಂಚ್ ಆಗುತ್ತಿರುವುದರಿಂದ ಆರಂಭಿಕವಾಗಿ ಜನ ಬರ್ತಾರಾ? ಇಲ್ಲವಾ? ಅನ್ನೋ ಗೊಂದಲ ಯಾರಿಗಾದರೂ ಇದ್ದೇ ಇರುತ್ತದೆ. ಹೇಗೂ ಚಿತ್ರ ಎಲ್ಲರೂ ಮೆಚ್ಚುವಂತೆ ಮೂಡಿಬಂದಿದೆ. ಮೊದಲ ಎರಡು ವಾರ ಜನ ಬರುವಂತಾದರೆ, ಆಮೇಲೆ ಯಶಸ್ವಿಯಾಗಿ ಮುನ್ನಡೆಯುತ್ತದೆ ಅನ್ನೋದು ಚಿತ್ರತಂಡದ ಅಭಿಪ್ರಾಯ. ಹೀಗಿರುವಾಗ ಮೊದಮೊದಲಿಗೆ ಜನರನ್ನು ಸೆಳೆಯಲು ಏನು ಮಾಡೋದು ಅಂಥಾ ಯೋಚಿಸುತ್ತಿರುವಾಗಲೇ ನಿರ್ಮಾಪಕ ಶಿವಕುಮಾರ್ ಈ ಸಿನಿಮಾ ಬಂದು ನೋಡಿದವರಿಗೆ ಬರೋಬ್ಬರಿ ಒಂದು ಕೋಟಿ ಬಹುಮಾನ ನೀಡುವ ಪ್ಲಾನು ನೀಡಿದರಂತೆ!

ಹೌದು.. ಜನವರಿ 17ಕ್ಕೆ ರಿಲೀಸಾಗುತ್ತಿರುವ ಶ್ರೀ ಭರತ ಬಾಹುಬಲಿಯನ್ನು ನೋಡಿದ ಹತ್ತು ಮಂದಿಗೆ ತಲಾ ೫ ಲಕ್ಷ ಬೆಲೆಯ ಕಾರು ಮತ್ತು ಐವತ್ತು ಲಕ್ಷ ರೂಗಳ ಚಿನ್ನಾಭರಣಗಳನ್ನು ಲಕ್ಕಿ ಡಿಪ್ ಮೂಲಕ ನೀಡಲಾಗುತ್ತದೆ. ಚಿತ್ರದ ಟಿಕೇಟಿನೊಂದಿಗೆ ಕೂಪನ್ ಒಂದನ್ನು ನೀಡಿ, ಹದಿನಾಲ್ಕು ದಿನಗಳ ನಂತರ ಅದೃಷ್ಟವಂತರಿಗೆ ಕಾರು ಮತ್ತು ಚಿನ್ನಾಭರಣಗಳನ್ನು ವಿತರಿಸಲಿದ್ದಾರೆ.

ಈ ಬಹುಮಾನದ ಕಾರಣಕ್ಕಾದರೂ ಜನ ಥಿಯೇಟರಿನ ಕಡೆಗೆ ಬರೋದು ಗ್ಯಾರೆಂಟಿ. ಕಾರು ಕೊಳ್ಳುವ ಕನಸು ಕಾಣುವವರು ಮತ್ತು ಚಿನ್ನಾಭರಣಕ್ಕಾಗಿ ಪರಿತಪಿಸುವ ಹೆಣ್ಣುಮಕ್ಕಳು ಒಮ್ಮೆಯಾದರೂ ಥೇಟರಿಗೆ ಬಂದು ಸಿನಿಮಾ ವೀಕ್ಷಿಸಲಿದ್ದಾರೆ.

ಈ ವರೆಗೆ ಜನರನ್ನು ಚಿತ್ರಮಂದಿರಕ್ಕೆ ಸೆಳೆಯಲು ಸಾಕಷ್ಟು ಜನ ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ. ಸಿನಿಮಾ ತಾರೆಯರನ್ನೇ ಟಿಕೇಟು ಕೌಂಟರಿನಲ್ಲಿ ಕೂರಿಸಿದ್ದಾರೆ, ಬಗೆಬಗೆಯ ಬಹುಮಾನಗಳನ್ನು ಘೋಷಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟ ಉಡುಗೊರೆಯನ್ನು ನೀಡುವುದಾಗಿ ಹೇಳಿ ಶ್ರೀ ಭರತ ಬಾಹುಬಲಿ ನಿರ್ಮಾಪಕರು ದಾಖಲೆ ನಿರ್ಮಿಸಿದ್ದಾರೆ.  ಟೀವಿ ಮತ್ತು ಆನ್ ಲೈನ್ ಹಾವಳಿಯಿಂದ ಜನ ಚಿತ್ರಮಂದಿರಕ್ಕೆ ಬರೋದನ್ನೇ ಮರೆತಿರುವ ಈ ಕೆಟ್ಟ ಕಾಲದಲ್ಲಿ ಐಶ್ವರ್ಯಾ ಫಿಲಂ ಪ್ರೊಡಕ್ಷನ್ಸ್’ನ ಶಿವಕುಮಾರ್, ನಿರ್ದೇಶಕ ಮಂಜು ಮಾಂಡವ್ಯ ನಿಜಕ್ಕೂ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಜನರಿಗೆ ಮನರಂಜನೆಯ ಜೊತೆ ಉಡುಗೊರೆ ಸಿಗೋದರೊಂದಿಗೆ ಬಹುಮುಖ ಪ್ರತಿಭೆ ಮಂಜು ಮಾಂಡವ್ಯ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ನೆಲೆನಿಲ್ಲುವಂತಾಗಲಿ…

ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಶ್ರೀ ಭರತ ಬಾಹುಬಲಿಯ ಟ್ರೇಲರ್ ರಿಲೀಸ್ ಮಾಡಿದ್ದಾರೆ. ನೀವೂ ನೋಡಿ!

CG ARUN

ಹಾಡುಗಳು ಚೆನ್ನಾಗಿವೆ ಎಂಬುದನ್ನು ಜನ ನಿರ್ಧಾರ ಮಾಡಿದ ಮೇಲೆ ಮುಗೀತು!

Previous article

ಕನ್ನಡ ಚಿತ್ರರಂಗಕ್ಕೆ ಇನ್ನೆಲ್ಲಿಯ ಉಳಿಗಾಲ?

Next article

You may also like

Comments

Leave a reply

Your email address will not be published. Required fields are marked *