ನಿರ್ದೇಶಕ, ಸಂಭಾಷಣೆಕಾರ ಮಂಜು ಮಾಂಡವ್ಯ ನಿರ್ದೇಶಿಸಿ, ನಟಿಸಿರುವ ಸಿನಿಮಾ ಶ್ರೀ ಭರತ ಬಾಹುಬಲಿ ತೆರೆಗೆ ಬಂದಿದೆ. ಈ ಸಿನಿಮಾ ರಿಲೀಸಾದರೆ ಕನ್ನಡ ಚಿತ್ರರಂಗಕ್ಕೆ ಪವರ್’ಫುಲ್ ಹೀರೋ ದಕ್ಕಿದಂತಾಗುತ್ತದೆ. ಇನ್ನೂ ಹೊಸ ಬಗೆಯ ಸಿನಿಮಾಗಳು ಸೃಷ್ಟಿಯಾಗಲು ನಾಂದಿಯಾಗುತ್ತದೆ ಅನ್ನೋ ಮಾತೆಲ್ಲಾ ಕೇಳಿಬಂದಿತ್ತಲ್ಲಾ? ಅದು ನಿಜವಾಗುತ್ತದಾ? ಮಂಜು ಮಾಂಡವ್ಯ ಕೂಡಾ ಕನ್ನಡದ ಹೀರೋಗಳ ಸಾಲಿನಲ್ಲಿ ನಿಲ್ಲುತ್ತಾರಾ? ಇವೆಲ್ಲಾ ಪ್ರಶ್ನೆಗಳಿಗೆ ಖಂಡಿತವಾಗಿಯೂ ಶ್ರೀ ಭರತ ಬಾಹುಬಲಿ ಉತ್ತರ ನೀಡಿದೆ.
ಫಾರಿನ್ನಿಂದ ಕರ್ನಾಟಕಕ್ಕೆ ಬಂದ ಒಂದು ಜೋಡಿ ಮತ್ತು ಅವರಿಗೆ ಇಲ್ಲಿನ ನೆಲ ಮತ್ತು ಜನರನ್ನು ಪರಿಚಯಿಸುವ ಗೈಡ್’ನೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ನಟ ರಿಷಿ ಗೈಡ್ ಆಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ ಬಾಹುಬಲಿ ಎನ್ನುವ ಹುಟ್ಟಾ ಫಟಿಂಗರು. ಕಾಸಿಗಾಗಿ ಏನು ಬೇಕಾದರೂ ಮಾಡುವ ಇವರು ಮನೆಯವರ ಪಾಲಿಗೆ ಕೆಲಸಕ್ಕೆ ಬಾರದವರು. ಇಂಥಾ ಲಂಪಟರು ‘ಮೀಸೆ ಮೊಳೆತ’ ಅಪ್ರಾಪ್ತ ಬಾಲಕನ ಮದುವೆ ಮಾಡಿಸಿದ ತಪ್ಪಿಗೆ ಜೈಲು ಪಾಲಾಗಿರುತ್ತಾರೆ. ಇವರಿಬ್ಬರ ಹಿಸ್ಟರಿ ತಿಳಿದ ಮೇಲೂ ಅವರನ್ನು ಫಾರಿನ್ ಪ್ರಜೆ ಜೈಲಿನಿಂದ ಬಿಡಿಸಿಕೊಳ್ಳುತ್ತಾಳೆ. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದವಳಂತೆ, ತನಗೆ ಬೀಳುತ್ತಿದ್ದ ಬಾವಿ ಕನಸಿನ ಕುರಿತಾಗಿ ರಿಸರ್ಚು ಮಾಡಿಸಲು ಶುರು ಮಾಡುತ್ತಾಳೆ. ಆ ಫಾರಿನ್ ಹುಡುಗಿಗೂ, ಬಾವಿಗೂ ಏನು ಸಂಬಂಧ? ಭರತ ಬಾಹುಬಲಿಯನ್ನು ನಂಬಿದ ಬಿಳೀ ಹುಡುಗಿ ಶ್ರೀ ಕತೆ ಏನಾಗುತ್ತದೆ? ಎಂಬಿತ್ಯಾದಿ ವಿಚಾರಗಳು ಪ್ರಧಾನವಾಗಿ ಸಾಗುತ್ತದೆ.
ಇದು ಬಿಟ್ಟು, ಮತ್ತೊಬ್ಬಳು ಹುಡುಗಿಯ ಹಿಂದೆ ಬೀಳುವ ಸೈಡ್ ಟ್ರ್ಯಾಕು, ಆ ಕಾಲದ ಭರತ & ಬಾಹುಬಲಿಯ ಚರಿತ್ರೆ, ದೇಶಪ್ರೇಮ, ತಂಗಿಯ ಲವ್ವು ಹೀಗೆ ಕಥೆಗೆ ಅಷ್ಟೇನೂ ಪೂರಕವಲ್ಲದ ಹಲವಾರು ಸಂಗತಿಗಳನ್ನು ಕೂಡಾ ಈ ಚಿತ್ರದಲ್ಲಿ ತುರುಕಿದಂತೆ ಕಾಣುತ್ತದೆ. ಸ್ವತಃ ನಿರ್ದೇಶಕ ಮಂಜು ಮಾಂಡವ್ಯ ಇಲ್ಲಿ ಹೀರೋ ಕೂಡಾ ಆಗಿರುವುದರಿಂದ ಸಾಕಷ್ಟು ವಿಚಾರಗಳನ್ನು ಒಂದೇ ಸಿನಿಮಾದಲ್ಲಿ ಹೇರುವ ಪ್ರಯತ್ನ ಮಾಡಿದ್ದಾರೆ. ಮನರಂಜನೆಯನ್ನೇ ಉದ್ದೇಶವಾಗಿಸಿಕೊಂಡಿರುವ ಸಿನಿಮಾದಲ್ಲಿ ತೀರಾ ಲಾಜಿಕ್ಕು ಹುಡುಕೋದು ತಪ್ಪು. ಆದರೆ, ಭಾರತಕ್ಕೆ ಪ್ರವಾಸಕ್ಕೆಂದು ಬಂದ ಜೋಡಿ ಅಪಾಯದಲ್ಲಿದ್ದ ಮಗುವನ್ನು ರಕ್ಷಿಸಿದ್ದೇನೋ ಸರಿ, ಆ ಮಗುವನ್ನು ತಮ್ಮ ದೇಶಕ್ಕೆ ಹೇಗೆ ಕರೆದೊಯ್ದರು ಅನ್ನೋ ಪ್ರಶ್ನೆಗೆ ಮಂಜು ಮಾಂಡವ್ಯ ಅವರೇ ಉತ್ತರಿಸಬೇಕು!
ಹೀರೋ ಆಗಿ ಮೊದಲ ಸಿನಿಮಾ ಆದರೂ ಅನುಭವೀ ನಟನಂತೆ ಮಂಜು ಮಾಂಡವ್ಯ ಪಾತ್ರ ನಿರ್ವಹಿಸಿದ್ದಾರೆ. ಮಾವಿನ ತೋಟದಲ್ಲಿ ಬರುವ ಫೈಟ್ ಮಾತ್ರ ಮೈ ಜುಮ್ಮೆನಿಸುತ್ತದೆ. ನಟ ಹರೀಶ್ ರೈ ಈ ವರೆಗಿನ ತಮ್ಮದೇ ನಟನೆಗೆ ತಾವೇ ಸವಾಲೊಡ್ಡುವಂತೆ ನಟಿಸಿದ್ದಾರೆ. ನಗಿಸುವುದರಲ್ಲಿ ಚಿಕ್ಕಣ್ಣ ಗೆದ್ದರೆ, ಹೆದರಿಸೋದರಲ್ಲಿ ಹರೀಶ್ ರೈ ಗೆಲುವು ಸಾಧಿಸಿದ್ದಾರೆ. ಅಚ್ಯುತ್ ಕುಮಾರ್’ರಂಥ ನಟನ ಪಾತ್ರ ಸೊರಗಿರೋದಕ್ಕೆ ಯಾರು ಹೊಣೆಯೋ ಗೊತ್ತಿಲ್ಲ. ಸಂಗೀತದ ಜೊತೆಗೆ ಪಾತ್ರವನ್ನೂ ನಿರ್ವಹಿಸಿರುವ ಮ್ಯೂಸಿಕ್ ಡೈರೆಕ್ಟರ್ ಮಣಿಕಾಂತ್ ಕದ್ರಿ ಪೂರ್ಣಪ್ರಮಾಣದಲ್ಲಿ ನಟನೆಗಿಳಿಯುವ ಎಲ್ಲ ಅರ್ಹತೆ ಹೊಂದಿದ್ದಾರೆ. ಮೊದಲ ಭಾಗ ಭರತ ಮತ್ತು ಬಾಹುಬಲಿಯ ಪರಿಚಯಕ್ಕೇ ಮೀಸಲಾದರೆ, ದ್ವಿತೀಯಾರ್ಧದ ಕತೆ ಅನೇಕ ತಿರುವುಗಳೊಂದಿಗೆ ಅಚ್ಛರಿ ಮೂಡಿಸುತ್ತದೆ. ಸಿನಿಮಾದಲ್ಲಿ ಸಂಭಾಷಣೆ, ಛಾಯಾಗ್ರಹಣ, ಹಾಡುಗಳು ಹಿನ್ನೆಲೆ ಸಂಗೀತ ಎಲ್ಲವೂ ಅಚ್ಚುಕಟ್ಟಾಗಿದೆ. ಒಮ್ಮೆ ಎಲ್ಲರೂ ಕೂತು ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ ಶ್ರೀ ಭರತ ಬಾಹುಬಲಿ.