ಭಾರತದ ಯಾವುದೇ ಭಾಷೆಯ ಸಿನಿಮಾಗಳಿಗೆ ಹೊಂದುವ ನಟ ದುನಿಯಾ ವಿಜಯ್. ಈಗಾಗಲೇ ತೆಲುಗಿನ ವೀರಸಿಂಹ ರೆಡ್ಡಿಯಲ್ಲಿ ಬಾಲಯ್ಯನ ಮುಂದೆ ಅಬ್ಬರಿಸಿ ಬಂದಿರುವ ವಿಜಯ್ ಅವರಿಗೆ ಸೌತ್ ಇಂಡಿಯಾದಿಂದ ಸಾಕಷ್ಟು ಸಿನಿಮಾಗಳ ಆಫರ್ ಬಂದಿವೆ. ವಿಜಯ್ ಅವರು ಒಪ್ಪಿದ್ದಿದ್ದರೆ ಈ ಹೊತ್ತಿಗೆ ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಬರಬಹುದಿತ್ತು.
ಹಾಗೆ ನೋಡಿದರೆ, ಇವರಿಗಿರುವ ಮಾರ್ಕೆಟ್ ವ್ಯಾಲ್ಯೂಗೆ ಪರಭಾಷೆಗಳಲ್ಲಿ ಕೇಳಿದಷ್ಟು ಸಂಭಾವನೆ ಕೊಡುವವರಿದ್ದಾರೆ. ಕಾಸೇ ಮುಖ್ಯ ಅಂತಾ ಭಾವಿಸಿದ್ದರೆ ಕೋಬ್ರಾ ಎಷ್ಟು ಬೇಕೋ ಬಾಚಿಕೊಳ್ಳಬಹುದಿತ್ತು. ಆದರೆ ವಿಜಯ್ ಅವರಿಗೆ ಕನ್ನಡ ಸಿನಿಮಾ ಮೊದಲ ಆಧ್ಯತೆಯಾಗಿದೆ. ಹಾಗೆ ನೋಡಿದರೆ, ಭೀಮ ಚಿತ್ರವನ್ನು ಭಾರತದ ಎಲ್ಲ ಭಾಷೆಗಳಲ್ಲಿ ಡಬ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾ ಅನ್ನಿಸಿಕೊಳ್ಳೋದು ದೊಡ್ಡ ವಿಚಾರವಾಗಿರಲಿಲ್ಲ. ಸಲಗ ಹೇಳುವ ಪ್ರಕಾರ ಅವರಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟಿನ ಮೇಲೆ ನಂಬಿಕೇನೆ ಇಲ್ಲವಂತೆ. ʻಸಿನಿಮಾ ಚನ್ನಾಗಿದೆ ಅನ್ನಿಸಿಕೊಂಡರೆ ಮೂಲ ಭಾಷೆಯಲ್ಲೇ ಜನ ನೋಡ್ತಾರೆʼ ಅನ್ನೋದು ಅವರ ಅಭಿಪ್ರಾಯ.
ವಿಜಯ್ ಅವರು ಬಾಲಯ್ಯನ ಸಿನಿಮಾದಲ್ಲಿ ನಟಿಸಿದ ಮೇಲೆ ಇನ್ನೂ ಸಾಕಷ್ಟು ಸಿನಿಮಾಗಳ ಆಫರ್ ಬಂದಿರೋದು ನಿಜ. ʻಹೊಸ ಹುಡುಗರ ಜೊತೆ ನಾನು ನಟಿಸೋದಿಲ್ಲ. ಒಳ್ಳೇ ಪಾತ್ರಗಳು ಬಂದು, ಆ ಪಾತ್ರ ನನ್ನನ್ನೇ ಬೇಡಿದರೆ ಮಾತ್ರ ಒಪ್ಪಿಕೊಳ್ತೀನಿ. ಇಲ್ಲವಾದಲ್ಲಿ ಬೇಡ. ನನಗೆ ಕನ್ನಡ ಸಿನಿಮಾನೇ ಸಾಕು. ಇಲ್ಲೇ ಇನ್ನೂ ಸಾಕಷ್ಟು ಪ್ರಯೋಗ ಮಾಡುವುದಿದೆ.ʼ ಎನ್ನುವ ವಿಜಯ್ ಅವರ ಮಾತಿನಲ್ಲಿ ಕ್ಲಾರಿಟಿಯಿದೆ.
ಸದ್ಯಕ್ಕೆ ಸಲಗ ವಿಜಯಕುಮಾರ ʻಭೀಮʼನ ಬಗ್ಗೆ ಹೆಚ್ಚು ಗಮನಕೊಟ್ಟಿದ್ದಾರೆ. ಭೀಮನ ಬರುವಿಕೆಗಾಗಿ ಬಾಗಿಲು ಮುಚ್ಚಿದ್ದ ಸಾಕಷ್ಟು ಚಿತ್ರಮಂದಿರಗಳು ಬೀಗ ತೆರೆಯುತ್ತಿವೆ. ಒಂದು ಕಡೆ ಕನ್ನಡ ಚಿತ್ರರಂಗ ತೀರಾ ಸೊರಗಿದೆ. ಈ ಹೊತ್ತಿನಲ್ಲಿ ನಿರೀಕ್ಷೆಯಂತೇ ಭೀಮ ಗೆದ್ದರೆ, ಸ್ಯಾಂಡಲ್ʼವುಡ್ʼನಲ್ಲಿ ದುನಿಯಾ ವಿಜಯ್ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ. ಆಗಸ್ಟ್ 9ನೇ ತಾರೀಖು ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲಿ ಮತ್ತೊಂದು ದಾಖಲೆಗೆ ಮುನ್ನುಡಿ ಬರೆಯುವಂತಾಗಲಿ…!
No Comment! Be the first one.