ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ರಾಂಧವ. ಪೋಸ್ಟರ್, ಟೀಸರ್, ಟ್ರೇಲರ್, ಆಡಿಯೋ ಮೂಲಕ ಸಾಕಷ್ಟು ಭರವಸೆಯನ್ನು ಮೂಡಿಸಿರುವ ರಾಂಧವ ಸ್ವಾತಂತ್ರ್ಯೋತ್ಸವಕ್ಕೆ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮಧ್ಯೆ ರಾಂಧವ ಚಿತ್ರದ ಮತ್ತೊಂದು ಕಲರ್ ಫುಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಮೆಚ್ಚುಗೆಯನ್ನು ಗಳಿಸಿದೆ.
ಎಲ್ಲಿ ನೋಡಲಲ್ಲೆಲ್ಲಾ ಎಂದು ಆರಂಭವಾಗುವ ಈ ಹಾಡಿನಲ್ಲಿ ಭುವನ್ ರಾಜನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರೆ, ನಾಯಕಿ ಅಪೂರ್ವ ಶ್ರೀನಿವಾಸ್ ಕೃಷ್ಣನ ಭಕ್ತೆಯಾಗಿ ಹೆಜ್ಜೆ ಹಾಕಿದ್ದಾರೆ. ಭುವನ್ ಚೊಚ್ಚಲ ಚಿತ್ರವಾದರೂ ಕಳೆ ಕಟ್ಟುವಂತಹ ನಟನೆಯನ್ನು ಮಾಡಿದ್ದು, ಈ ಹಾಡಿನ ಮೂಲಕ ಕಾಣಿಸುತ್ತಿದೆ. ಈ ಹಾಡಿನ ಸಾಹಿತ್ಯವನ್ನು ನಾಗೇಂದ್ರ ಪ್ರಸಾದ್ ಬರೆದಿದ್ದು, ಶ್ವೇತ ಮೋಹನ್ ಹಾಗೂ ಶಶಾಂಕ್ ಶೇಷಗಿರಿ ಅವರ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.
ಈ ಹಿಂದೆ ಕರ್ನಾಟಕದ ವೈಭವದ ಕುರಿತಾಗಿ ಒಂದು ಹಾಡು, ಟೈಟಲ್ ಟ್ರಾಕನ್ನು ಬಿಡುಗಡೆ ಮಾಡಿಕೊಂಡಿದ್ದ ಚಿತ್ರತಂಡ ಸಾಕಷ್ಟು ಪ್ರಶಂಸೆಯನ್ನು ಗಳಿಸಿಕೊಂಡಿತ್ತು. ರಾಂಧವ ಚಿತ್ರವನ್ನು ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದು, ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
No Comment! Be the first one.