ಕೋಟೆ ನಾಡು ಚಿತ್ರದುರ್ಗಕ್ಕೆ ದೊಡ್ಡ ಇತಿಹಾಸವಿದೆ. ಈ ಮಣ್ಣಿನ ಕಣಕಣಗಳಲ್ಲೂ ವೀರರ ರಕ್ತ ಬೆರೆತುಹೋಗಿದೆ. ಅಂಥಾ ಒಬ್ಬ ಮಹಾನ್ ಪುರುಷ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ. ಈತನ ಜೀವನಗಾಥೆಯನ್ನು ಹಿರಿಯ ಕಾದಂಬರಿಕಾರ ಬಿ.ಎಲ್.ವೇಣು ಪುಸ್ತಕರೂಪದಲ್ಲೂ ಹೊರತಂದಿದ್ದರು. ಅದನ್ನು ಆಧರಿಸಿ ಅವರೇ ಬರೆದ ಚಿತ್ರಕತೆಯನ್ನು ನಿರ್ದೇಶಕ ಹರಿ ಸಂತು ಪರಿಣಾಮಕಾರಿಯಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.

ಅರಸೊತ್ತಿಗೆಗಾಗಿ ನಡೆಯುತ್ತಿದ್ದ ಅನಾಚಾರಗಳು, ದೊರೆಯ ವಿರುದ್ಧವೇ ನಡೆಯುತ್ತಿದ್ದ ಸಂಚು, ಅಧಿಕಾರ ಉಳಿಸಿಕೊಳ್ಳಲು ನಡೆಸುತ್ತಿದ್ದ ನೀಚ ಕೃತ್ಯಗಳು, ಆ ಕಾಲದ ರಾಜಕೀಯ, ಕಾದಾಟ, ಕ್ರೌರ್ಯಗಳನ್ನೆಲ್ಲಾ ಸೇರಿಸಿ ರೂಪಿಸಿರುವ ಸಿನಿಮಾ ಬಿಚ್ಚುಗತ್ತಿ. ಗರಡಿ ಮನೆಯ ಕಸ ಬಳಿಯುತ್ತಾ, ತಾಯಿಯನ್ನು ಪೊರೆಯುವ ಮಗ. ಇಂಥ ಹುಡುಗ ಕ್ರಮೇಣ ಕದನ ವಿದ್ಯೆಗಳನ್ನೆಲ್ಲಾ ಕಲಿತು, ತನ್ನದೇ ಸೈನ್ಯವನ್ನೂ ಕಟ್ಟಿಕೊಂಡು, ದುಷ್ಟ ದೊರೆಯ ವಿರುದ್ಧ ಸೆಟೆದುನಿಲ್ಲುತ್ತಾನೆ. ಆ ಮೂಲಕ ನೊಂದ ಜನರ ದನಿಯಾಗುತ್ತಾನಾ – ಅನ್ನೋದೆಲ್ಲಾ ಬಿಚ್ಚುಗತ್ತಿ ಚಿತ್ರದಲ್ಲಿ ಹಂತ ಹಂತವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ರಾಜ್ ವರ್ಧನ್ ಆರಂಭದ ದಿನಗಳಲ್ಲೇ ಇಂಥದ್ದೊಂದು ಸವಾಲಿನ ಪಾತ್ರವನ್ನು ಒಪ್ಪಿಕೊಂಡು, ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕ ಹರಿ ಸಂತು ಕೂಡಾ ಶಕ್ತಿಮೀರಿದ ಪ್ರಯತ್ನ ಮಾಡಿದ್ದಾರೆ. ಕಲಾನಿರ್ದೇಶನ ಅಚ್ಚುಕಟ್ಟಾಗಿದೆ. ಹಿನ್ನೆಲೆ ಸಂಗೀತ ಚೂರು ವೀಕು. ಮೃಗದಂತೆ ಕಾಣುವ ದಳವಾಯಿ ಮುದ್ದಣ್ಣನ ಪಾತ್ರದಲ್ಲಿ ಬಾಹುಬಲಿ ಪ್ರಭಾಕರ್ ಚೆಂದಗೆ ನಟಿಸಿದ್ದಾರೆ. ಆದರೆ, ಅವರದ್ದೇ ದನಿ ಆ ನಟನೆಯನ್ನು ಕೊಂದುಹಾಕಿದೆ. ರೇಖಾ, ಹರಿಪ್ರಿಯಾ, ಶ್ರೀನಿವಾಸ ಮೂರ್ತಿ ಸೇರಿದಂತೆ ಎಲ್ಲ ಕಲಾವಿದರೂ ಅದ್ಭುತ ನಟನೆ ನೀಡಿದ್ದಾರೆ. ಹುಲಿಯೊಂದಿಗೆ ಸೆಣೆಸಾಡುವ ದೃಶ್ಯದಲ್ಲಿ ರಾಜ್ ರೋಮಾಂಚನಗೊಳಿಸಿದ್ದಾರೆ.

ಒಂದಿಷ್ಟು ನ್ಯೂನತೆಗಳ ನಡುವೆಯೂ ಎಲ್ಲರಿಗೂ ಇಷ್ಟವಾಗಬಲ್ಲ ಸಿನಿಮಾ ಬಿಚ್ಚುಗತ್ತಿ. ಚರಿತ್ರೆಯನ್ನು ಮರುಸೃಷ್ಟಿಸುವುದ ಕಷ್ಟದ ಕೆಲಸ. ಅದನ್ನು ಸವಾಲಾಗಿ ಸ್ವೀಕರಿಸಿ ಬಿಚ್ಚುಗತ್ತಿಯನ್ನು ರೂಪಿಸಿದ್ದಾರೆ. ನಮ್ಮದೇ ನೆಲದ ಕತೆ ಹೊಂದಿರುವ ಕಾರಣಕ್ಕೆ, ಚಿತ್ರತಂಡದ ಪರಿಶ್ರಮಕ್ಕೆ ನ್ಯಾಯ ಕೊಡುವ ಕಾರಣಕ್ಕಾದರೂ ಎಲ್ಲರೂ ಈ ಸಿನಿಮಾವನ್ನು ನೋಡಬೇಕು. ಇತಿಹಾಸದ ಬಗ್ಗೆ ಆಸಕ್ತಿ ಇರುವವರು ಮಾತ್ರವಲ್ಲದೆ, ಈ ನಾಡಿನ ಚರಿತ್ರೆಯನ್ನು ಅರಿಯುವ ಕಾರಣಕ್ಕಾದರೂ ಬಿಚ್ಚುಗತ್ತಿಯನ್ನು ನೋಡಲು ಥೇಟರಿಗೆ ಹೋಗಬೇಕು…

CG ARUN

ಬಿಳೀ ಶರ್ಟು ಪಂಚೆಯಲ್ಲಿ ಬಾಸ್ ಫುಲ್ ಮಿಂಚಿಂಗ್!

Previous article

ಮಂಡ್ಯ, ಮುದ್ದೆ ಮತ್ತು ಆನೆ ಬಲ

Next article

You may also like

Comments

Leave a reply

Your email address will not be published. Required fields are marked *