ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ‘ಬಿಚ್ಚುಗತ್ತಿ’ ಚಿತ್ರದ ಮೂಲಕ ವಿಶಿಷ್ಟವಾದ ಪಾತ್ರವೊಂದರೊಂದಿಗೆ ಪ್ರೇಕ್ಷಕರೆದುರು ಬಂದು ನಿಲ್ಲುತ್ತಿದ್ದಾರೆ. ಹೀರೋ ಆಗಲು ಬೇಕಾದ ಅಷ್ಟೂ ಕ್ವಾಲಿಟಿಗಳಿರುವ ರಾಜವರ್ಧನ್ ನಟಿಸಿದ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರನ್ನು ಬೆರಗಾಗಿಸಿದ್ದ ನಟ.

ಯಾಕೆಂದರೆ ಭರಮಣ್ಣ ನಾಯಕನ ಪಾತ್ರ ಅಂತಿಂಥಾದ್ದಲ್ಲ. ಅದನ್ನು ಮಾಡಬೇಕೆಂದು ಸೂಪರ್ ಸ್ಟಾರ್ ರಜನೀಕಾಂತ್ ಅವರಂಥಾ ನಟರೇ ಆಸೆ ಪಟ್ಟಿದ್ದರು. ಅನೇಕ ಸಂದರ್ಭಗಳಲ್ಲಿ ರಜನೀಕಾಂತ್ ತಾವು ಭರಮಣ್ಣ ನಾಯಕನ ಕಥೆಯಾಧಾರಿತ ಚಿತ್ರದಲ್ಲಿ ನಟಿಸಬೇಕು, ಬರಮಣ್ಣನ ಪಾತ್ರ ಮಾಡಬೇಕೆಂಬ ಅಭಿಲಾಷೆಯನ್ನು ರಜನಿ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿಯೂ ಒಂದಷ್ಟು ನಟರು ಮತ್ತು ನಿರ್ದೇಶಕರು ಅದರ ಮೇಲೆ ಕಣ್ಣಿಟ್ಟಿದ್ದರು. ಆದರೀಗ ಅಂಥಾ ಖದರು ಹೊಂದಿರೋ ರಿಯಲಿಸ್ಟಿಕ್ ಪಾತ್ರದಲ್ಲಿ ರಾಜವರ್ಧನ್ ಈ ವಾರ ತೆರೆಮೇಲೆ ಬರುತ್ತಿದ್ದಾರೆ.

ಬಹುಶಃ ರಾಜವರ್ಧನ್ ಅವರು ಕಳೆದ ಎರಡು ವರ್ಷಗಳಿಂದ ಪ್ರತೀ ದಿನ ಕುದುರೆ ಸವಾರಿ ಕಲಿತು, ಪ್ರತೀ ದಿನವೂ ಕಟ್ಟುನಿಟ್ಟಾಗಿ ಎರಡೆರಡು ಘಂಟೆ ವರ್ಕೌಟ್ ಮಾಡುತ್ತಿದ್ದುದು ಕೂಡಾ ಈ ಪಾತ್ರಕ್ಕಾಗಿಯೇ.  ನಿಜಕ್ಕೂ ಆ ಪಾತ್ರಕ್ಕೆ ರಾಜವರ್ಧನ್ ಫಿಟ್ ಅನ್ನೋದರಲ್ಲಿ ಮಾತ್ರ ಯಾವ ಅನುಮಾನಗಳೂ ಇಲ್ಲ. ಕಳೆದೊಂದು ವರ್ಷದಿಂದ ನನ್ನ ಮಗ ಅನ್ನವನ್ನೇ ಮುಟ್ಟಿಲ್ಲ, ಬರೀ ಸೌತೆಕಾಯಿ, ಚಿಕನ್ ಪೀಸು ತಿನ್ನುತ್ತಾ ದಿನಕ್ಕೆರಡು ಸಲ ಜಿಮ್ ಮಾಡುತ್ತಿದ್ದ. ಈಗ ಅವನು ಪಟ್ಟ ಶ್ರಮವೆಲ್ಲಾ ತೆರೆ ಮೇಲೆ ಕಾಣಿಸುತ್ತಿದೆ ಎಂದು ಸ್ವತಃ ಡಿಂಗ್ರಿ ನಾಗರಾಜ್ ಹೇಳಿಕೊಂಡಿದ್ದಾರೆ.

ನೂರೊಂದು ನೆನಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಜವರ್ಧನ್ ಆ ಮೂಲಕವೇ ಕನ್ನಡತದ ಪ್ರೇಕ್ಷಕರಲ್ಲಿ ಥ್ರಿಲ್ ಮೂಡಿಸಿದ್ದ ನಟ. ಲುಕ್ಕು, ಖದರ್ ಸೇರಿದಂತೆ ಯಾವುದರಲ್ಲಿಯೂ ಬಾಲಿವುಡ್ ನಟರಿಗೆ ಕಡಿಮೆ ಇರದ ರಾಜ್ ನಟನೆಯ ಸಾಕಷ್ಟು ಚಿತ್ರಗಳು ಸೆಟ್ಟೇರಲಿದೆ. ಈ ಹೊತ್ತಿನಲ್ಲಿಯೇ ರಾಜವರ್ಧನ್ ಬಿಚ್ಚುಗತ್ತಿ ಹಿಡಿದುಬಂದಿದ್ದಾರೆ. ಈ ಚಿತ್ರದ ಟ್ರೇಲರಿನಲ್ಲಿ ರಾಜ್ ಹುಲಿಯೊಂದಿಗೆ ಸೆಣೆಸಾಡಿ ಅದನ್ನು ಹೊತ್ತುತರುವ ದೃಶ್ಯವೇ ಸಾಕು ಇದು ಕನ್ನಡದ ಬಾಹುಬಲಿ ಅನ್ನಿಸಿಕೊಳ್ಳಲು!

ಹರಿ ಸಂತೋಷ್ ನಿರ್ದೇಶನದ ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಹೆಸರಾಂತ ಕಾದಂಬರಿಕಾರ ಬಿ ಎಲ್ ವೇಣು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿ ಆಧರಿಸಿದ ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿ ಸಿದ್ದಾಂಬೆ ಪಾತ್ರ ನಿರ್ವಹಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್ ಈ ಚಿತ್ರದ ಪ್ರಮುಖ ವಿಲನ್. ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ, ಕಲ್ಯಾಣಿ, ಶಿವರಾಮಣ್ಣ, ರೇಖಾ, ರಮೇಶ್ ಪಂಡಿತ್, ಡಿಂಗ್ರಿ ನಾಗರಾಜ್, ಪ್ರಕಾಶ್ ಹೆಗ್ಗೊಡು, ಸುನೇತ್ರ ಪಂಡಿತ್, ಉಗ್ರಂ ಮಂಜು  ತಾರಾಗಣದಲ್ಲಿದ್ದಾರೆ. ಆರು ಸಾಹಸ ಸನ್ನಿವೇಶಗಳನ್ನು ಡಾ ರವಿ ವರ್ಮಾ, ವಿಜಯ್, ವಿನೋದ್. ಸಣ್ಣಪ್ಪ ಹಾಗೂ ವಿಕ್ರಮ್ ನಿರ್ವಹಿಸಿದ್ದಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಕ್ಕೆ ಸಂಕಲನ ಕೆ ಎಂ ಪ್ರಕಾಶ್, ಎಡ್ವರ್ಡ್ ಕೆನಡಿ ಕಲಾ ನಿರ್ದೇಶನ, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಗುರು ಪ್ರಶಾಂತ್ ಛಾಯಾಗ್ರಹಣ ಮಾಡಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಚೆಕ್ ಮೇಟ್ ಟೀಸರ್ ಬಂದಿದೆ!

Previous article

ಲೂಸಿಯಾ ಪೂರ್ಣಚಂದ್ರ ತೇಜಸ್ವಿ ಹಾಡುಗಳ ಆನೆಬಲ!

Next article

You may also like

Comments

Leave a reply

Your email address will not be published.