ಖ್ಯಾತ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್. ಅಜಾನುಬಾಹು ಎತ್ತರ, ಅದಕ್ಕೆ ಸರಿಗಟ್ಟುವ ಕಂಠ, ಚೆಂದದ ಅಭಿನಯ – ಹೀಗೆ ಎಲ್ಲವನ್ನೂ ಹೊಂದಿರುವ ಪ್ರತಿಭಾವಂತ ನಟ ರಾಜ್.
ಸದ್ಯ ರಾಜವರ್ಧನ್ ನಟನೆಯಲ್ಲಿ, ಅಲೆಮಾರಿ ಸಂತು ನಿರ್ದೇಶನದ ಬಿಚ್ಚುಗತ್ತಿ ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಬಿ.ಎಲ್.ವೇಣು ಅವರ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಐತಿಹಾಸಿಕ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ರೂಪುಗೊಳ್ಳುತ್ತಿದೆ.
ಇಂಥಾ ಸಿನಿಮಾ ಮತ್ತದರ ಪ್ರಧಾನ ಪಾತ್ರದಲ್ಲಿ ಯಾರು ನಟಿಸಿರುತ್ತಾರೋ ಅವರದ್ದೇ ದನಿ ಇದ್ದರೆ ಮಾತ್ರ ತೆರೆಮೇಲೆ ಸಿನಿಮಾ ಫೀಲು ಕೊಡಲು ಸಾಧ್ಯ. ಭರಮಣ್ಣನಾಯಕನ ಪಾತ್ರಕ್ಕೆ ಹೇಳಿಮಾಡಿಸಿದಂತಾ ಫಿಸಿಕ್ಕು, ವಾಯ್ಸುಗಳೆಲ್ಲವೂ ಈ ಚಿತ್ರದ ಹೀರೋ ರಾಜವರ್ಧನ್ ಅವರಿಗಿದೆ. ಆದರೆ, ಇವರ ದನಿಯನ್ನು ಬದಲಿಸಿ ಬೇರೆ ಯಾರೋ ಡಬ್ಬಿಂಗ್ ಕಲಾವಿದನ ದನಿ ಸೇರಿಸುವ ಹುನ್ನಾರ ನಡೆದಿರುವ ಸುದ್ದಿಯೊಂದು ಕೇಳಿಬರುತ್ತಿದೆ. “ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡುತ್ತೇನೆ. ಬೇರೆ ಯಾರೂ ಎಬ್ಬಿಂಗ್ ಮಾಡಲು ಒಪ್ಪಬೇಡಿ” ಎಂದು ಖುದ್ದು ರಾಜವರ್ಧನ್ ಡಬ್ಬಿಂಗ್ ಕಲಾವಿದರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡಾ ಹರಿದಾಡುತ್ತಿದ್ದು, ಅದಿನ್ನೂ ನಿಖರವಾಗಿಲ್ಲ.
ಇದೆಲ್ಲ ಏನೇ ಇದ್ದರೂ ಒಳ್ಳೇ ದನಿ ಹೊಂದಿರುವ ಕಲಾವಿದನೊಬ್ಬನಿಂದ ಡಬ್ಬಿಂಗ್ ಮಾಡಿಸುವ ಬದಲು ಯಾಕೆ ಪರ್ಯಾಯ ಮಾರ್ಗಕ್ಕಾಗಿ ಚಿತ್ರತಂಡ ಹುಡುಕಾಡುತ್ತಿದೆಯೋ ಗೊತ್ತಿಲ್ಲ. ನಿರ್ದೇಶಕ ಸಂತು ಅವರನ್ನು ಕೇಳಿದರೆ “ಈಗಾಗಲೇ ರಾಜ್ ಅವರಿಂದಲೇ ಒಂದು ರೌಂಡು ಡಬ್ಬಿಂಗ್ ಮಾಡಿಸಿದ್ದೇವೆ. ಇದನ್ನು ಹೊರತುಪಡಿಸಿ ನಿರ್ಮಾಪಕರು ಏನು ತೀರ್ಮಾನ ಮಾಡುತ್ತಾರೋ ನೋಡಬೇಕು” ಎನ್ನುತ್ತಿದ್ದಾರೆ.
ಒಂದು ವೇಳೆ ಚಿತ್ರ ರಿಲೀಸಾದಮೇಲೆ ಈ ಪಾತ್ರಕ್ಕೇನಾದರೂ ಪ್ರಶಸ್ತಿಯಂಥಾದ್ದೇನಾದರೂ ಬರೋ ಸಾಧ್ಯತೆಯಿದ್ದರೆ ಅದು ಅವರದ್ದೇ ದನಿ ಇದ್ದರೆ ಮಾತ್ರ ದಕ್ಕೋದು. ಇದನ್ನು ನಿರ್ಮಾಪಕರ ಆದಿಯಾಗಿ ಎಲ್ಲರೂ ತಿಳಿದುಕೊಂಡು ಕಲಾವಿದನ ಕಂಠಕ್ಕೆ ನ್ಯಾಯ ದೊರಕಿಸುವಂತಾಗಲಿ.