ಕನ್ನಡದಲ್ಲೀಗ ಏಳನೇ ಆವೃತ್ತಿಯ ಬಿಗ್‌ಬಾಸ್ ಶೋ ಆರಂಭಕ್ಕೆ ಪ್ರಚಾರ ಕಾರ್ಯ ಶುರುವಾಗಿದೆ. ಸುಳ್ಳೇ ಸೆಲೆಬ್ರಿಟಿ ಅಂದುಕೊಂಡವರ ಖಾಸಗೀ ತೆವಲು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕರ್ಮ ಕನ್ನಡದ ಪ್ರೇಕ್ಷಕರಿಗೆ ಬಂದೊದಗೋ ಕ್ಷಣಗಳೂ ಹತ್ತಿರಾಗಿವೆ. ಬಿಗ್‌ಬಾಸ್ ಮನೆಗೆ ಒಮ್ಮೆ ಎಟ್ರಿ ಕೊಟ್ಟರೆ ಆ ಕೋಟೆಯಿಂದ ಹೊರ ಬರಲು ಸಾಧ್ಯವೇ ಇಲ್ಲ, ಅಲ್ಲಿನ ಸ್ಪರ್ಧಿಗಳು ಏನೇ ಮಾಡಿದರೂ ಕ್ಯಾಮೆರಾಗಳು ಸೆರೆ ಹಿಡಿಯುತ್ತವೆ, ಆ ಸ್ಪರ್ಧಿಗಳನ್ನು ಹೊರ ಜಗತ್ತಿನ ಸೊಳ್ಳೆಗಳೂ ಮೀಟ್ ಮಾಡೋಕೂ ಛಾನ್ಸಿಲ್ಲ…. ಎನ್ನುವಂತಾ ಮೂಢ ನಂಬಿಕೆ ಬಿಗ್‌ಬಾಸ್ ಶೋನ ಸಾಮಾನ್ಯ ಪ್ರೇಕ್ಷಕರಲ್ಲಿದೆ. ಬಿಗ್‌ಬಾಸ್ ಮನೆಯಲ್ಲಿ ಎಲ್ಲವೂ ನಲವತ್ತೂ ಚಿಲ್ಲರೆ ಕ್ಯಾಮೆರಾ ಮುಂದೆಯೇ ನಡೆಯುತ್ತದೆ ಎಂಬ ಸುಳ್ಳಿನ ತಲೆಗೆ ಹೊಡೆದಂತೆ ಬಿಗ್‌ಬಾಸ್ ಮನೆಯಲ್ಲಿ ಆಫ್ ಕ್ಯಾಮೆರಾ ಝೋನ್ ಕೂಡಾ ಇದೆ. ಇಲ್ಲಿ ಕ್ಯಾಮೆರಾ ಕಣ್ಗಾವಲಿರೋದಿಲ್ಲ. ಇಲ್ಲಿ ಸ್ಪರ್ಧಿಗಳ ಸಿಗರೇಟು, ಎಣ್ಣೆ ಮುಂತಾದ ಸಮಾರಾಧನೆಗಳು ನಡೆಯುತ್ತವೆ. ಸಿಕ್ರೇಟ್ ರೂಟಿನ ಮೂಲಕ ವಾಹಿನಿ ಮಂದಿಯೂ ಸ್ಪರ್ಧಿಗಳನ್ನು ಭೇಟಿಯಾಗುತ್ತಾರೆ. ಬೇಕು ಅನಿಸಿದಾಗ ಓಡೋಡಿ ಬಂದು ತಾವೇ ಕಳಿಸಿರುವ ಸ್ಪರ್ಧಿಗಳಿಗೆ ಲೊಚ ಲೊಚ ಮುತ್ತಿಕ್ಕಿ ಮಾಯವಾಗುತ್ತಾರೆ!! ಇರಲಿಬಿಡಿ, ಅವರವರ ಇಷ್ಟ.

ಈ ಸಾರಿ ಬಿಗ್ ಬಾಸ್ ಮನೆಗೆ ಸಿನಿಮಾ, ಧಾರಾವಾಹಿ, ಸಂಗೀತ, ಮಾಧ್ಯಮ ಕ್ಷೇತ್ರದಿಂದ ಒಟ್ಟು ೧೮ ಜನ ಸೆಲೆಬ್ರಿಟಿಗಳು ಪ್ರವೇಶಿಸಿzರೆ. ಮೊದಲ ಸ್ಪರ್ಧಿಯಾಗಿ ನಟ ಕುರಿ ಪ್ರತಾಪ್ ಮನೆಗೆ ಪ್ರವೇಶಿಸಿದರೆ, ಅಗ್ನಿಸಾಕ್ಷಿ ಖ್ಯಾತಿಯ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ ೨ನೇ ಸ್ಪರ್ಧಿಯಾಗಿ ಪ್ರವೇಶಿಸಿzರೆ. ಇನ್ನು ೩ನೇ ಸ್ಪರ್ಧಿಯಾಗಿ ಪತ್ರಕರ್ತ ರವಿ ಬೆಳಗೆರೆ, ನಾಲ್ಕನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಎಂಟ್ರಿ ಕೊಟ್ಟಿದ್ದಾರೆ. ಐದನೇ ಸ್ಪರ್ಧಿಯಾಗಿ ಸಂಗೀತ ನಿರ್ದೇಶಕ ವಾಸುಕಿ ವೈಭವ್, ಆರನೇ ಸ್ಪರ್ಧಿಯಾಗಿ ನಟಿ ದೀಪಿಕಾದಾಸ್, ಏಳನೇ ಸ್ಪರ್ಧಿಯಾಗಿ ನಟ ಜೈಜಗದೀಶ್ ಅಲ್ಲದೆ ಹಾವೇರಿಯ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ನಟಿ ಭೂಮಿಶೆಟ್ಟಿ, ಡಾನ್ಸರ್ ಕಿಶನ್ ಬೆಳಗಲಿ, ದುನಿಯಾ ರಶ್ಮಿ, ನಟ ಚಂದನ್‌ಆಚಾರ್, ನಟಿ ಸುಜಾತಾ, ರಾಜು ತಾಳಿಕೋಟೆ, ನಿರೂಪಕಿ ಚೈತ್ರಾ ವಾಸುದೇವ್, ನಟ ಶೈನ್ ಶೆಟ್ಟಿ ಹಾಗೂ ಹರೀಶ್‌ರಾಜ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ಪ್ರಮುಖರಾಗಿದ್ದಾರೆ.

ಪ್ರತೀ ಸೀಜನ್ನಿನಲ್ಲೂ ಜನರಿಗೆ ಮನರಂಜನೆ ನೀಡುವ, ಹೆಚ್ಚು ಹೊತ್ತು ಟೀವಿ ನೋಡುತ್ತಾ ಎಂಗೇಜ್ ಮಾಡಿಸಬಲ್ಲ ಒಬ್ಬಿಬ್ಬರು ಅಭ್ಯರ್ಥಿಗಳು ಇದ್ದೇ ಇರುತ್ತಿದ್ದರು. ಈ ಬಾರಿ ರಾಜು ತಾಳಿಕೋಟೆ, ಕುರಿ ಪ್ರತಾಪ ಮತ್ತು ಹರೀಶ್ ರಾಜ್ – ಈ ಮೂರು ಜನ ಸಿನಿಮಾ ಕಲಾವಿದರಿದ್ದಾರೆ. ಆದರೆ ಇವರು ಸ್ಕ್ರಿಪ್ಟ್ ಇಲ್ಲದೇ ಜನರನ್ನು ರಂಜಿಸುವುದು ಕಷ್ಟ. ಅಲ್ಲಿಗೆ ಇಡೀ ಬಿಗ್ ಬಾಸ್ ಅನ್ನು ಕಳೆಕಟ್ಟಿಸುವ ತಾಕತ್ತಿದ್ದದ್ದು ಸಕಲಕಲಾವಲ್ಲಭ ರವಿ ಬೆಳಗೆರೆ ಅವರಿಗೆ ಮಾತ್ರ.

ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ, ಅದರ ಕೋಟಿಗಟ್ಟಲೇ ಇನ್ವೆಸ್ಟ್ಮೆಂಟು ಎಲ್ಲವೂ ರವಿಬೆಳಗೆರೆಯವರನ್ನು ನಂಬಿಯೇ ಶುರುವಾದಂತಿತ್ತು. ಇಲ್ಲೀವರೆಗೆ ಬಿಗ್ ಬಾಸ್ಗೆ ಬಂದವರಲ್ಲಿ ಫಿಸಿಕಲ್ ಫಿಟ್ನೆಸ್ ಇಲ್ಲದವರೆಂದರೆ ಮೊದಲಿಗೆ ಓಂ ಪ್ರಕಾಶ್ ರಾವ್ ಈಗ ರವಿ ಬೆಳಗೆರೆ ಮಾತ್ರ. ರವಿ ಬೆಳಗೆರೆ ಅವರಿಂದ ಡ್ಯಾನ್ಸು, ಟಾಸ್ಕು, ದೈಹಿಕ ಕಸರತ್ತು, ಉಪವಾಸ- ಇವನ್ನೆಲ್ಲಾ ಮಾಡಿಸಲು ಸಾಧ್ಯವಾ? ಆದರೂ ಯಾಕೆ ರವಿ ಅವರ ಬೆನ್ನುಬಿದ್ದು ಶೋಗೆ ಒಪ್ಪಿಸಿದರು? ಟಿ.ಆರ್.ಪಿ. ಅಂತೇನಾದರೂ ಹುಟ್ಟಿದರೆ ಅದು ರವಿ ಬೆಳಗೆರೆ ಅವರಿಂದ ಮಾತ್ರ ಸಾಧ್ಯ. ದುರಂತವೋ? ವಾಹಿನಿಯವರ ಟೈಮು ಸರಿಯಿಲ್ಲವೋ? ಬೆಳಗೆರೆ ಎಂಟ್ರಿಕೊಟ್ಟ ಮೊದಲ ದಿನವೇ ಜಾರಿಬಿದ್ದು, ಮರುದಿನ ಬೆಳಗಾಗೋ ಹೊತ್ತಿಗೆ ಪದ್ಮನಾಭನಗರದ ತಮ್ಮ ಹಾಯ್ ಬೆಂಗಳೂರ್ ಕಛೇರಿಗೆ ಬಂದು ಮಲಗಿದ್ದರು!

ಅಲ್ಲಿಗೆ ಈ ಸಲದ ಬಿಗ್ ಬಾಸ್ ಶೋ ಕತೆ ಮುಗೀತು ಅಂತಲೇ ಎಲ್ಲರೂ ಭಾವಿಸಿದ್ದರು. ಅದೇನೇನು ಪ್ಲಾನು ಮಾಡಿದರೋ ಪರಮು ಗೊತ್ತಿಲ್ಲ. ಈ ವರೆಗಿನ ಬಿಗ್ ಬಾಸ್ ರೂಲ್ಸುಗಳನ್ನೆಲ್ಲಾ ಬ್ರೇಕು ಮಾಡಿ, ಮಲಗಿದ್ದ ಬೆಳಗರೆಯವರನ್ನು ಮತ್ತೆ ಎತ್ತಾಕಿಕೊಂಡು ಹೋಗಿ ಬಿಗ್ ಬಾಸ್ ಮನೆಯೊಳಗೆ ಬಿಟ್ಟಿದ್ದಾರೆ. ಒಂದು ವಾರದ ಗೆಸ್ಟು ಅಂತಾ ಸದ್ಯಕ್ಕೆ ಹೇಳುತ್ತಿದ್ದಾರಾದರೂ ಶೋ ಮುಗಿಯೋತನಕ ರವಿ ಬೆಳಗೆರೆಯನ್ನು ಮತ್ತೆ ಮತ್ತೆ ಪರದಾಡಿಸೋದು ಗ್ಯಾರೆಂಟಿ. ಈ ವರೆಗೂ ಯಾರಿಗೂ ಕೊಡದಷ್ಟು ವಾರದ ಸಂಭಾವನೆಯನ್ನು ಬೆಳಗೆರೆಗೆ ನೀಡಲು ಈ ಶೋ ಮಾಡುವ ಮಂದಿ ಒಪ್ಪಿದ್ದಾರೆ. ಮೂಲಗಳ ಪ್ರಕಾರ ವಾರಕ್ಕೆ ಐದರಿಂದ ಏಳು ಲಕ್ಷ ರುಪಾಯಿ ಸಂಭಾವನೆ ನೀಡಿಯೇ ರವಿ ಬೆಳಗೆರೆಯನ್ನು ಬಿಗ್ಬಾಸ್ ಮನೆಯೊಳಗೆ ಕರೆದುಕೊಂಡು ಹೋಗಿರೋದು!

ನಾನೇ ಬಾಸು ಅಂದ್ರು ರವಿ ಬೆಳಗೆರೆ!

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಸ್ವತಃ ರವಿ ಬೆಳಗೆರೆ ಪತ್ರವೊಂದನ್ನು ಓದುಗರಿಗೆ ರವಾನಿಸಿದ್ದಾರೆ. ಅದು ಹೀಗಿದೆ; “ಸಾಮಾನ್ಯರಲ್ಲಿ ಸಾಮಾನ್ಯನಾದ ಬಾಸ್ ಹೋಗ್ತಿರೋದು ‘ಬಿಗ್ ಬಾಸ್’ ಮನೆಗೆ… ಕಲರ್ಸ್ ಕನ್ನಡ ಈ ಬಾರಿ ತನ್ನ ಎಂದಿನ ಸಂಚಲನವಾದ ಬಿಗ್ ಬಾಸ್ – ೭ನೇ ಸೀಸನ್ ಆರಂಭಿಸಿದೆ. ಉಳಿದೆಲ್ಲ ರಿಯಾಲಿಟಿ ಶೋಗಳಿಗಿಂತ ಬಿಗ್ ಬಾಸ್ ಭಾರತದ ಬಹುತೇಕ ಭಾಷೆಗಳಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದಿದೆ. ಒಂದು ಅಂದಾಜಿನ ಪ್ರಕಾರ ಬಿಗ್ ಬಾಸ್ ಶೋ ಪ್ರತಿನಿತ್ಯ ಒಂದು ಕೋಟಿ ವೀಕ್ಷಕರನ್ನು ತಲುಪುತ್ತದೆ. ನಿಮಗೆ ಗೊತ್ತಿರುವಂತೆ ನಾನು ಟಿವಿ ನೋಡುವುದಿಲ್ಲ. ನಾನೇ ನಟಿಸಿದ ಒಂದಷ್ಟು ಸಿನೆಮಾಗಳನ್ನು ನಾನೇ ನೋಡಿಲ್ಲ. ಅವೆರಡೂ ನನ್ನ ಪಾಲಿಗೆ uninteresting. ನನ್ನದೇನಿದ್ದರೂ ಅಕ್ಷರ ಉಂಟು ಪುಸ್ತಕ ಉಂಟು. ಆ ಪ್ರೀತಿಯಿಂದಲೇ ನಾನು ಇಪ್ಪತ್ತೈದು ವರ್ಷ ಅವಿಚ್ಛಿನ್ನವಾಗಿ ‘ಹಾಯ್ ಬೆಂಗಳೂರ್!’ ಪತ್ರಿಕೆ ನಡೆಸಿದೆ. ಅದು ನನಗೆ ಅನ್ನ ಕೊಟ್ಟಿತು. ಆತ್ಮ ಸಮಾಧಾನ ಕೊಟ್ಟಿತು.

ಅಂತೆಯೇ ನನ್ನ ಅನೇಕ ವರ್ಷಗಳ ಕನಸಾದ ‘ಓ ಮನಸೇ’ ಪಾಕ್ಷಿಕವನ್ನು ಆರಂಭಿಸಿದೆ. ಈ ತೆರನಾದ ಪತ್ರಿಕೆ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟವಾಗುತ್ತದೋ ಎಂಬ ಆತಂಕವಿತ್ತು. ಇವತ್ತಿಗದು ೧೫೫ ಸಂಚಿಕೆ ದಾಟಿದೆ. ಕನ್ನಡದ ಮನೆ ಮಾತಾಗಿದೆ. ಇವತ್ತು ಅದನ್ನು ಪ್ರತಿ ಹೆಣ್ಣು ಮಗಳು, ಪ್ರತಿ ಹುಡುಗಿಯು, ಪ್ರತಿ ಯುವಕನು ಸಂತೋಷದಿಂದ ಆತ್ಮವಿಶ್ವಾಸಕ್ಕಾಗಿ ಓದುತ್ತಿದ್ದಾರೆ. ಸಂತೋಷದ ಸಂಗತಿ ಎಂದರೆ ರವಿ ಅಜ್ಜೀಪುರ ಅದರ ಸಂಪಾದಕತ್ವವನ್ನು ತುಂಬ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಇದೆಲ್ಲದರ ಮಧ್ಯೆ ನನಗೆ ಬಿಗ್ ಬಾಸ್ ಬೇಕಾಗಿತ್ತಾ? ಎಂಬುದು ಪ್ರಶ್ನೆ. ಇತ್ತೀಚೆಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಬಂದು ಅಕ್ಕರೆಯಿಂದ ಲೋಕಾಭಿರಾಮವಾಗಿ ಮಾತನಾಡಿ, ಮಾತಿನ ಮಧ್ಯೆ “ನಮ್ಮ ‘ಬಿಗ್ ಬಾಸ್’ ರಿಯಾಲಿಟಿ ಶೋಗೆ ನೀವೇಕೆ ಬರಬಾರದು?” ಅಂದರು. ನನ್ನನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಸಿಬ್ಬಂದಿ ಮತ್ತು ಗೆಳೆಯರು ‘ಬಾಸ್’ ಅಂತಲೇ ಕರೆಯುತ್ತಾರೆ. “ಈಗೊಮ್ಮೆ ‘ಬಿಗ್ ಬಾಸ್’ ಆಗಿ ನೋಡಿ” ಅಂತ ನಕ್ಕರು ಪರಂ. ಯಾಕೋ ಇಲ್ಲವೆನ್ನಲಾಗಲಿಲ್ಲ. ಅಲ್ಲಿ ದಿನಗಟ್ಟಲೆ ನ್ಯೂಸ್ ಪೇಪರ್ ಸಿಗುವುದಿಲ್ಲ. ನನ್ನ ಪರಮ ಪ್ರೀತಿಯ ಕಾಫಿ ಸಿಗುವುದಿಲ್ಲ. ಪೀಡೆಯಂತಹ ಮೊಬೈಲ್ ಸಿಗುವುದಿಲ್ಲ. ಒಂದಷ್ಟು ದಿನ ನನಗೆ ಪರಿಚಯವೇ ಇಲ್ಲದ ‘ಸೆಲೆಬ್ರಿಟಿಗಳ’ ನಡುವೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುವ ಅವಕಾಶ ನನಗೆ ದೊರೆತಿದೆ. ಪರಂ ಆಗ್ರಹಕ್ಕೆ ಇಲ್ಲವೆನ್ನಲಾಗದೆ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ. ಒಂದು ಮಾತಿನ ಪ್ರಕಾರ ಬಾಸ್ ಈಸ್ ಆಲ್ವೇಸ್ ರೈಟ್! ಎಂದಿನಂತೆ ನಿಮ್ಮ ಹಾರೈಕೆ ಇರಲಿ.

ಇದು ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ರವಿ ಬೆಳಗೆರೆ ಬರೆದಿದ್ದ ಪತ್ರ. ಸದ್ಯ ಈ ಪ್ರೋಗ್ರಾಮು ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ದಿನಕಳೆದಂತೆ ನಡೆಯಬಾರದ್ದು ಏನೇನೇ ಘಟಿಸುತ್ತದೋ ನೋಡಬೇಕು…!!

CG ARUN

ಕರಡಿ ಗುಹೆಯಲ್ಲಿ ಏನಿದೆ?

Previous article

ನಿರ್ದೇಶಕ ಜೇಕಬ್ ವರ್ಗೀಸ್ ನಗುವಿನ ಸವಾರಿ!

Next article

You may also like

Comments

Leave a reply

Your email address will not be published. Required fields are marked *