ತಮಿಳು ನಟ, ಇಳಯ ದಳಪತಿ ಬಿರುದಾಂಕಿದ ವಿಜಯ್ ಸಿನಿಮಾಗಳು ರಿಲೀಸಿಗೆ ರೆಡಿಯಾಗುತ್ತಿದ್ದಂತೇ ಅದರ ವಿರುದ್ಧ ದನಿಯೆತ್ತುವವರು ಗಂಟಲು ಸರಿಮಾಡಿಕೊಳ್ಳೋಕೆ ಶುರು ಮಾಡುತ್ತಾರೆ!

ಸದ್ಯ ವಿಜಯ್ ನಟನೆಯ ‘ಬಿಗಿಲ್’ ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಲಾಂಗು ಹಿಡಿದ ವಿಜಯ್ ಮಾಂಸ ಕತ್ತರಿಸುವ ಮರದ ದಿಮ್ಮಿಯ ಮೇಲೆ ಕಾಲಿಟ್ಟುಕೊಂಡು ಕೂತ ಪೋಸ್ಟರೊಂದು ತಮಿಳುನಾಡಿನಾದ್ಯಂತ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಕೊಯಂಬತ್ತೂರಿನಲ್ಲಿ ಮಾಂಸ ಮಾರಾಟಗಾರನೊಬ್ಬ ಪೊಲೀಸ್ ಠಾಣೆಯೊಳಗೆ ಹೋಗಿ ‘ಬಿಗಿಲ್’ ಚಿತ್ರದ ಪೋಸ್ಟರನ್ನು ಚಿಂದಿ ಮಾಡುವ ಮೂಲಕ ಪ್ರತಿಭಟಿಸಿದ್ದ. ಈ ಪ್ರತಿರೋಧ ಹೆಚ್ಚಿತ್ತಿರೋದನ್ನು ಕಂಡು ಖುದ್ದು ವಿಜಯ್ ಅಭಿಮಾನಿಗಳು ಮಾಂಸ ಮಾರಾಟಗಾರರಿಗೆಲ್ಲಾ ಹೊಸಾ ಮರದ ದಿಮ್ಮಿಯನ್ನು ಕೊಡುವ ಮೂಲಕ ಸಮಾಧಾನಿಸಿದ್ದರು!

ಮಾಂಸ ಕಡಿಯುವ ಮರದ ದಿಮ್ಮಿಮೇಲೆ ಕಾಲಿಟ್ಟ ಕಾರಣಕ್ಕೆ ಜನ ರೊಚ್ಚಿಗೇಳುತ್ತಾರಾ? ಅದರಲ್ಲೇನಿದೆ ಅಂತಾ ಮಹಾಪರಾಧ ಅಂತಾ ಪ್ರಶ್ನೆಯೇಳುವುದು ಸಹಜ. ಮರದ ದಿಮ್ಮಿ, ಅದರ ಮೇಲೆ ಕಾಲಿಟ್ಟಿರೋದೆಲ್ಲಾ ನೆಪ ಮಾತ್ರ. ಅಸಲಿಗೆ ಈ ಸಿನಿಮಾದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷ ಮತ್ತದರ ನೇತಾರರ ವಿರುದ್ಧದ ಕತೆಯಿದೆಯಂತೆ. ಈ ಕಾರಣಕ್ಕೆ ಅಲ್ಲಿನ ಸರ್ಕಾರವೇ ವಿಜಯ್ ಸಿನಿಮಾದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಅಟ್ಲಿ ನಿರ್ದೇಶನದ ‘ಬಿಗಿಲ್’ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದು, ಬರುವ ದೀಪಾವಳಿಗೆ ತೆರೆಗೆ ಬರಲು ರೆಡಿಯಾಗುತ್ತಿದೆ. ಇದರ ಬೆನ್ನಿಗೇ ತಂತ್ರ, ಪ್ರತಿತಂತ್ರಗಳೂ ಶುರುವಾಗಿದೆ. ತಮಿಳುನಾಡಿನಲ್ಲಿ ರಾಜಕೀಯಕ್ಕೂ, ಸಿನಿಮಾರಂಗಕ್ಕೂ ವಿಪರೀತ ನಂಟು. ಅದು ಇಂಥಾ ವಿವಾದದ ಘಾಟುಗಳಿಗೂ ಕಾರಣವಾಗುತ್ತಿರುತ್ತದೆ!

No Comment! Be the first one.