ತೇರಿ ಮತ್ತು ಮೆರ್ಸಲ್ ಎಂಬೆರಡು ಸಿನಿಮಾಗಳ ಮೂಲಕ ಹಿಟ್ ಕಾಂಬಿನೇಷನ್ ಅನ್ನಿಸಿಕೊಂಡಿದ್ದ ನಟ ವಿಜಯ್ ಮತ್ತು ನಿರ್ದೇಶಕ ಅಟ್ಲಿ ಜೋಡಿಯ ಮೂರನೇ ಸಿನಿಮಾ ಬಿಗಿಲ್. ಇತ್ತೀಗೆ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರ ನೆನ್ನೆ ಜಗತ್ತಿನಾದ್ಯಂತ ತೆರೆಗೆ ಬಂದಿದೆ.
ಒಬ್ಬ ರೌಡಿ, ಆತನ ಮಗ ಜೊತೆಗೆ ಫುಟ್ ಬಾಲ್ ಆಟದ ಸುತ್ತ ಸೃಷ್ಟಿಯಾಗಿರುವ ಕತೆ ಈ ಚಿತ್ರದ್ದು. ಲಾಂಗು ಮಚ್ಚು ಹಿಡಿದು ಓಡಾಡುವ ಕಾಯಕ ನನ್ನ ತಲೆಮಾರಿಗೇ ಕೊನೆಯಾಗಲಿ ಎಂದು ಬಯಸುವ ತಂದೆ. ತಾನು ಬೆಳೆದ ಸ್ಲಂನಲ್ಲೇ ಹುಡುಗರನ್ನು ದಂಡು ಕಟ್ಟಿಕೊಂಡು ಸ್ಟೇಟ್ ಲೆವೆಲ್ ಫುಟ್ ಬಾಲ್ ಟೋರ್ನಮೆಂಟಲ್ಲಿ ಗೆಲ್ಲುವ ಮಗ. ಹೋದಲ್ಲೆಲ್ಲಾ ಕಪ್ಪು ಗೆದ್ದುಕೊಂಡುಬರುವ ಮಗ ನ್ಯಾಷನಲ್ ಲೆವೆಲ್ಲಿನಲ್ಲೂ ಮಿಂಚಲಿ ಅನ್ನೋದು ತಂದೆಯ ಬಯಕೆ. ಆದರೆ ಅದಕ್ಕೆ ಅಡ್ಡಿಯಾಗೋದು ಈತನ ರೌಡಿಸಂ ಹಿನ್ನೆಲೆ. ಎಲ್ಲವೂ ಬಗೆಹರಿದು ಮಗ ರಾಷ್ಟ್ರಮಟ್ಟದ ಸ್ಪರ್ಧೆಗೆ ಹೊರಟು ನಿಲ್ಲುತ್ತಾನೆ. ಟ್ರೈನು ಹತ್ತಿ ಕೈ ಬೀಸುತ್ತಿದ್ದಂತೇ ತಂದೆಯ ಬೆನ್ನಿಗೆ ಶತ್ರುಗಳು ಇರಿದುಬಿಡುತ್ತಾರೆ. ಅಲ್ಲಿಗೆ ಅಪ್ಪ ಮಗನ ಕನಸೆಲ್ಲವೂ ನುಚ್ಚುನೂರಾಗುತ್ತದೆ.
ಫುಟ್ ಬಾಲ್ ಚಾಂಪಿಯನ್ ಆಗಬೇಕಿದ್ದ ಮಗ, ತಂದೆಯನ್ನು ಕೊಂದವರ ವಿರುದ್ಧ ಸೇಡು, ಕೊಲೆ, ಪಾತಕಗಳಲ್ಲಿ ಮುಳುಗಿಹೋಗುತ್ತಾನೆ. ಆರೇಳು ವರ್ಷಗಳು ಉರುಳಿಹೋಗುತ್ತವೆ. ಅಷ್ಟರಲ್ಲಿ ಮತ್ತೊಂದು ಘಟನೆ ಎದುರಾಗುತ್ತದೆ. ಯಾವ ಫುಟ್ ಬಾಲನ್ನು ದೂರಕ್ಕೆ ಒದ್ದಿರುತ್ತಾನೋ? ಮತ್ತದೇ ಫುಟ್ ಬಾಲ್ ಕಾಲಡಿ ಬಂದು ನಿಲ್ಲುತ್ತದೆ. ಫುಟ್ ಬಾಲ್ ಆಡುವ ಮನಸ್ಸಿದ್ದು ಕೋಚ್ ಇಲ್ಲದೇ ಪರದಾಡುತ್ತಿದ್ದ ವಿವಿಧ ಸ್ತರದ ಹೆಣ್ಣುಮಕ್ಕಳಿಗೆ ಬಿಗಿಲ್ ತರಬೇತುದಾರನಾಗುತ್ತಾನೆ. ಆರಂಭದಲ್ಲಿ ಈತ ರೌಡಿ ಅನ್ನೋ ಕಾರಣಕ್ಕೆ ಆ ಹುಡುಗಿಯರು ಬಿಗಿಲ್ನನ್ನು ಅವಮಾನಿಸುತ್ತಾರೆ. ನಂತರ ಗೊತ್ತಾಗುತ್ತದೆ ಈತ ಭಾರತದ ಶ್ರೇಷ್ಠ ಫುಟ್ ಬಾಲ್ ಆಟಗಾರ ಅನ್ನೋದು. ಜೊತೆಗೆ ಇಂಥದ್ದೊಂದು ಮಹಿಳಾ ತಂಡ ರಚನೆಯಾಗಲು ಮೂಲ ಕಾರಣ ಈತನೇ ಅನ್ನೋದು ಆ ಮಹಿಳಾ ತಂಡದ ಆಟಗಾರ್ತಿಯರಿಗೆ ಅರಿವಾಗುತ್ತದೆ. ಈ ನಡುವೆ ರಾಷ್ಟ್ರೀಯ ಮಟ್ಟದ ಫುಟ್ ಬಾಲ್ ಆಟದಲ್ಲಿ ಈ ತಂಡ ಸ್ಪರ್ಧಿಸುತ್ತದಾ? ಅದಕ್ಕೆ ಏನೆಲ್ಲಾ ಅಡ್ಡಿ ಎದುರಾಗುತ್ತದೆ? ಅದನ್ನೆಲ್ಲಾ ಮೀರಿ ಹೀರೋ ಹೇಗೆ ತಂಡಕ್ಕೆ ಬಲ ನೀಡಿ ನಿಲ್ಲಿಸುತ್ತಾನೆ? ಎಂಬೆಲ್ಲಾ ಅಂಶಗಳು ಬಿಗಿಲ್ ಸಿನಿಮಾದಲ್ಲಿ ಹಂತ ಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಫುಟ್ ಬಾಲ್ ಆಟ ಮತ್ತದರ ಒಳಸುಳಿಗಳು, ರಾಜಕೀಯ, ಅನ್ಯಾಯ, ಕ್ರೌರ್ಯ ಎಲ್ಲವನ್ನೂ ನಿರ್ದೇಶಕರು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ರಾಯಪ್ಪ ಮತ್ತು ಮೈಕೆಲ್ ಬಿಗಿಲ್- ಎರಡೂ ಪಾತ್ರವನ್ನು ನಟ ವಿಜಯ್ ನಿರ್ವಹಿಸಿದ್ದಾರೆ. ಹಾಗೆ ನೋಡಿದರೆ ಇದರ ಅಗತ್ಯವೇ ಇರಲಿಲ್ಲ. ಯಾರಾದರೂ ಹಿರಿಯ ನಟರಿಗೆ ಅಪ್ಪನ ಪಾತ್ರ ನೀಡಬಹುದಿತ್ತು. ಬಿಗಿಲ್ ಪಾತ್ರವೊಂದೇ ಸಾಕಿತ್ತು ವಿಜಯ್ ನಟನೆಯನ್ನು ಎತ್ತಿಹಿಡಿಯಲು. ಎರಡೂ ಪಾತ್ರವನ್ನು ಹೀರೋ ಒಬ್ಬರೇ ನಿಭಾಯಿಸಿರುವುದು ಯಾರ ದುರಾಸೆಯೋ ಗೊತ್ತಿಲ್ಲ!
ಇನ್ನು ಸಿನಿಮಾ ಅಲ್ಲಲ್ಲಿ ಎಳೆದಂತಿದೆ. ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಇನ್ನೂ ಸಲೀಸಾಗಿ ನೋಡಬಹುದಿತ್ತು. ನಿರ್ದೇಶಕ ಅಟ್ಲಿ ಕೆಲಸ ಮಾತ್ರ ಅಚ್ಚುಕಟ್ಟಾಗಿದೆ. ಎಂದಿನಂತೆ ಎಮೋಷನ್ಸ್ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಬಿಗಿಲ್ ಪಾತ್ರದಲ್ಲಿ ವಿಜಯ್ ಮತ್ತು ನಾಯಕಿ ನಯನತಾರಾ ಅಮೋಘವಾಗಿ ನಟಿಸಿದ್ದಾರೆ. ಹಿಂದಿ ನಟ ಜಾಕಿಶ್ರಾಫ್ ಖಳನಾಗಿ ಗಮನ ಸೆಳೆಯುತ್ತಾರೆ. ಮಾಜಿ ವಿಲನ್ ಆನಂದ್ ರಾಜ್ಗೆ ಕಾಮಿಡಿ ರೋಲು ಕರೆಕ್ಟಾಗಿ ಮ್ಯಾಚ್ ಆಗಿದೆ. ಎ.ಆರ್. ರೆಹಮಾನ್ ಸಂಗೀತ ಎಂದಿನಂತೆ ಇಂಪು ಇಂಪು…