ತಮಿಳುನಾಡಿನಲ್ಲೂ ದೊಡ್ಡ ಮಟ್ಟದ ಸ್ಟಾರ್ ವಾರ್ ಬುಗಿಲೆದ್ದಿದೆ. ಇಳಯದಳಪತಿ ವಿಜಯ್ ನಟನೆಯ ಬಿಗಿಲ್ ಮತ್ತು ಕಾರ್ತಿ ನಟನೆಯ ಕೈದಿ ಎರಡೂ ಸಿನಿಮಾಗಳು ನಾಳೆ ರಿಲೀಸಾಗುತ್ತಿವೆ. ತಮಿಳುನಾಡಲ್ಲಿ ದೀಪಾವಳಿಗೆ ಸ್ಟಾರ್ ಸಿನಿಮಾಗಳು ಥಿಯೇಟರಿಗೆ ಬಂದೇ ಬರುವುದು ವಾಡಿಕೆ. ಈ ಸಲ ಇಬ್ಬರು ಸ್ಟಾರ್ಗಳ ಸಿನಿಮಾ ಬರುತ್ತಿರುವುದು ಖುದ್ದು ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆಗೂ ತಲೆನೋವಾಗಿಬಿಟ್ಟಿದೆ.
ವಿಜಯ್ ಮೊದಲಿಂದಲೂ ದೊಡ್ಡ ಮಟ್ಟದ ಅಭಿಮಾನಿ ಪಡೆ ಹೊಂದಿರುವ ನಟ. ಇನ್ನು ಕಾರ್ತಿ ನಟ ಸೂರ್ಯನ ಖಾಸಾ ತಮ್ಮ. ಸೂರ್ಯನ ಅಭಿಮಾನಿಗಳಿಗೂ ವಿಜಯ್ ಫ್ಯಾನ್ಸಿಗೂ ಮೊದಲಿಂದಲೂ ಅಷ್ಟಕ್ಕಷ್ಟೇ. ಅಲ್ಲಿನ ಅಭಿಮಾನಿಗಳು ಇಲ್ಲಿನಂತೆ ಮತ್ತೊಬ್ಬ ಹೀರೋನನ್ನು ಲೇವಡಿ ಮಾಡುವುದು, ಕಾಲೆಳೆಯುವುದು ಮಾಡೋದಿಲ್ಲ. ಬದಲಿಗೆ ತಮ್ಮ ಇಷ್ಟದ ಹೀರೋ ಸಿನಿಮಾದ ಕಲೆಕ್ಷನ್ ಹೆಚ್ಚಿಸುವುದು ಹೇಗೆ ಎಂದು ಚಿಂತಿಸುತ್ತವೆ. ಈ ಮಧ್ಯೆ ಅಲ್ಲಿನ ನಿರ್ಮಾಪಕರು ಈ ಎರಡೂ ಸಿನಿಮಾಗಳ ವಿಶೇಷ ಪ್ರದರ್ಶನಕ್ಕೆ ಅನುಮತಿ ಕೇಳಿದ್ದವು. ಎಲ್ಲಿ ಸಿನಿಮಾ ಬಿಡುಗಡೆ ಸಂದರ್ಭ ಲಾ ಅಂಡ್ ಆರ್ಡರ್ ಸಮಸ್ಯೆಯಾಗಿ ಪರಿಣಮಿಸುತ್ತದೋ ಅನ್ನೋ ಭಯ ಅಲ್ಲಿನ ಪೊಲೀಸ್ ಇಲಾಖೆಗೆ. ಕಡೆಗೂ ಸ್ಪೆಷಲ್ ಶೋಗೆ ಪರ್ಮಿಷನ್ ಸಿಕ್ಕಿದೆ.
ಕಾರ್ತಿ ಕೂಡಾ ಉದಯೋನ್ಮುಖ ನಟ. ಆತ ನಟಿಸಿದ ಬಹುತೇಕ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಬಾಕ್ಸಾಫೀಸಿನಲ್ಲಿ ಎರಡೂ ಚಿತ್ರಗಳು ಗಳಿಕೆ ಮಾಡೋದು ಗ್ಯಾರೆಂಟಿ. ಇಲ್ಲಿನಂತೆ ಅಲ್ಲಿ ಥಿಯೇಟರುಗಳ ಸಮಸ್ಯೆಯಿಲ್ಲ. ಜನ ಸಿನಿಮಾವನ್ನು ಟೀವಿಯಲ್ಲಿ ಹಾಕುವ ತನಕ ಕಾಯೋದಿಲ್ಲ. ಎಂಥದ್ದೇ ಹಬ್ಬವಿರಲಿ, ಅಲ್ಲಿನ ಜನ ನುಗ್ಗಿಕೊಂಡು ಬಂದು ಥಿಯೇಟರಿನಲ್ಲಿ ಸಿನಿಮಾ ನೋಡುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಎರಡು ಸಿನಿಮಾಗಳು ಬರುತ್ತಿರುವುದರಿಂದ ಈ ಬಾರಿ ತಮಿಳುನಾಡಿನಲ್ಲಿ ದೀಪಾವಳಿ ರಂಗು ಹೆಚ್ಚಾಗಿದೆ.