ತಲೆಗೆ ವಿದ್ಯೆ ಹತ್ತದಿದ್ದರೂ ಫಿಟಿಂಗು, ಫಟಿಂಗ ಕೆಲಸಗಳಲ್ಲಿ ಎತ್ತಿದ ಕೈ. ಬೈ ಟೂ ಬ್ರದರ್ಸ್ ಅಂತಾ ಕರೆಸಿಕೊಂಡು ಊರಿಗೇ ಫೇಮಸ್ಸಾದ ಹುಡುಗರು ಶಾಲೆಯ ಮೇಷ್ಟ್ರು ಬಿಲ್’ಗೇಟ್ಸ್ ಸಾಧನೆ ಬಗ್ಗೆ ಹೇಳುತ್ತಿದ್ದಂತೇ, ಆ ಹೆಸರನ್ನು ಎರಡು ಪಾಲು ಮಾಡಿಕೊಂಡು ತಮಗೆ ತಾವೇ ಸ್ವಯಂ ಘೋಷಿಸಿಕೊಳ್ಳುತ್ತಾರೆ. ಬೆಳೆದು ದೊಡ್ಡವರಾದಮೇಲೂ ಅದೇ ಭಳಾಂಗು ಕೆಲಸವನ್ನೇ ಮುಂದುವರೆಸುತ್ತಾರೆ. ಎಂಟನೇ ಕ್ಲಾಸು ಓದಿದ್ದರೂ, ಇವರು ಬಯಸಿದಂತೇ ಅಚಾನಕ್ಕಾಗಿ ಸಾಫ್ಟ್’ವೇರ್ ಕಂಪನಿ ಉದ್ಯೋಗವೂ ಸಿಕ್ಕಿಬಿಡುತ್ತದೆ. ಆಮೇಲೆ ಇವರು ಆಡುವ ಆಟ, ಕೊಡುವ ಕ್ವಾಟಲೆಗಳಿವೆಯಲ್ಲಾ? ಅದು ನೋಡಿದರೇನೇ ಅನುಭವಕ್ಕೆ ಸಿಕ್ಕೋದು!
ಇದು ಈಗಷ್ಟೇ ಬಿಡುಗಡೆಯಾಗಿರುವ ಬಿಲ್-ಗೇಟ್ಸ್ ಬಗೆಗಿನ ಆರಂಭಿಕ ಪರಿಚಯವಷ್ಟೇ. ಶಿಶಿರ್ ಮತ್ತು ಚಿಕ್ಕಣ್ಣ ಪ್ರಧಾನವಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ಉದ್ದೇಶ ನಗಿಸುವುದೊಂದೇ. ಹೀಗಾಗಿ ಇಲ್ಲಿ ಯಾವ ಲಾಜಿಕ್ಕುಗಳಿಗೂ ಜಾಗವಿಲ್ಲ. ನಗುವಿನ ಮ್ಯಾಜಿಕ್ಕೇ ಎಲ್ಲಾ!
ಸಿನಿಮಾವೊಂದು ಆರಂಭವಾಗುತ್ತಿದ್ದಂತೇ, ಇದು ಹೀಗೀಗೆ ಆಗಬಹುದು ಅನ್ನೋ ಸಣ್ಣ ಅಂದಾಜಾದರೂ ಸಿಕ್ಕಿಬಿಡುತ್ತದೆ. ಆದರೆ, ಬಿಲ್-ಗೇಟ್ಸ್ ಚಿತ್ರದ ಪಾತ್ರಗಳಂತೇ ಸಿನಿಮಾಗೂ ನಿರ್ದಿಷ್ಟವಾದ ಚೌಕಟ್ಟಿಲ್ಲ. ಮಕ್ಕಳ ಹಾಡಿನೊಂದಿಗೆ ಶುರುವಾದ ಚಿತ್ರ ಪಾಕಡಾ ಹುಡುಗರನ್ನು ಕೇಂದ್ರವಾಗಿಸಿಕೊಳ್ಳುತ್ತದೆ. ಕಥೆ ಹಳ್ಳಿಯಿಂದ ಸಿಟಿಗೆ ಶಿಫ್ಟ್ ಆಗುತ್ತದೆ. ಅಲ್ಲಿಂದ ಸೀದಾ ಯಾವುದೋ ಬಂಗಲೆಯೊಳಗೆ ಹೋಗಿ ಕೂರುತ್ತದೆ. ಅಲ್ಲಿ ಯಾರೂ ಊಹಿಸಲೂ ಸಾಧ್ಯವಾಗದ ಹಾರರ್ ಚಿತ್ರಣ ಬಿಚ್ಚಿಕೊಳ್ಳುತ್ತದೆ. ಇದೇನಿದು ಅಂತಾ ಯೋಚಿಸೋ ಹೊತ್ತಿಗೇ ಯಮಲೋಕದಂತಾ ಫ್ಯಾಂಟಸಿ ಜಗತ್ತು ತೆರೆದುಕೊಳ್ಳುತ್ತದೆ. ಲೊಕೇಶಷನ್ನು, ಬರುವ ಪಾತ್ರಗಳು ಬದಲಾದರೂ ಉಳಿದುಕೊಳ್ಳುವುದು ಮಾತ್ರ ಅದೇ ತಮಾಷೆ ಮತ್ತದರಿಂದ ಉತ್ಪತ್ತಿಯಾಗುವ ನಗು ಮಾತ್ರ!
ಬಿಡಿಬಿಡಿಯಾದ ಎಪಿಸೋಡುಗಳು ಕಳೆದು, ನಕ್ಕು ಸುಸ್ತಾಗೋ ಹೊತ್ತಿಗೆ ಮತ್ತೆ ಕಥೆ ಒಂದಕ್ಕೊಂದು ಬೆಸೆದುಕೊಂಡು ಹೊಸ ತಿರುವು ಮತ್ತು ತೀರ್ಮಾನಕ್ಕೆ ಬಂದು ನಿಲ್ಲುತ್ತದೆ.
ರಂಜನೆಯೆನ್ನೋದು ಯಾವುದೇ ಸಿನಿಮಾದ ಮೂಲ ಉದ್ದೇಶ. ಇಲ್ಲಿ ಅತಿರಂಜಕ ವಸ್ತುಗಳನ್ನಿಟ್ಟು ವಸಿ ಹೆಚ್ಚೇ ನಕ್ಕುನಗಿಸುವ ಪ್ರಯತ್ನವನ್ನು ನಿರ್ದೇಶಕ ಸಿ.ಶ್ರೀನಿವಾಸ ಯಶಸ್ವಿಯಾಗಿ ಮಾಡಿಮುಗಿಸಿದ್ದಾರೆ.
ಮುಗ್ಧರಂತೆ ಕಂಡರೂ ಕಿಲಾಡಿತನಗಳಿಂದ ನಗಿಸುತ್ತಾ ಗಮನಸೆಳೆಯುವಲ್ಲಿ ಶಿಶಿರ್ ಮತ್ತು ಚಿಕ್ಕಣ್ಣ ಗೆದ್ದಿದ್ದಾರೆ. ಗಿರೀಶ್, ಕುರಿ ಪ್ರತಾಪ ಎಂಟ್ರಿ ಕೊಟ್ಟಮೇಲೆ ನಗುವಿಗೂ ಬೋನಸ್. ಸಿನಿಮಾದ ಚಿತ್ರಕಥೆ ಬರೆಯುವುದರೊಂದಿಗೆ ಪಾತ್ರವನ್ನೂ ನಿರ್ವಹಿಸಿರುವ ಮಜಾ ಟಾಕೀಸ್ ಖ್ಯಾತಿಯ ರಾಜಶೇಖರ್ ಅವರೊಳಗೆ ಅಗಾಧವಾದ ಹಾಸ್ಯಕಲೆ ಇದೆ ಅನ್ನೋದು ಇಲ್ಲಿ ಮತ್ತೊಂದು ಬಾರಿ ಋಜುವಾತಾಗಿದೆ. ಬೇರೆ ಸಿನಿಮಾಗಳಿಗೆ ಹೋಲಿಸಿದರೆ ನಟ ಯತಿರಾಜ್’ಗೆ ಗುರುತಿಸಿಕೊಳ್ಳುವಂತಾ ಪಾತ್ರ ಇಲ್ಲಿ ದಕ್ಕಿದೆ. ಯತಿ ಕೂಡಾ ಭಿನ್ನ ಬಗೆಯ ನಟನೆ ನೀಡುವಲ್ಲಿ ಶ್ರಮಿಸಿದ್ದಾರೆ ಮತ್ತು ಸಫಲರಾಗಿದ್ದಾರೆ. ರಾಜೇಶ್, ಅಕ್ಷರಾ ರೆಡ್ಡಿ, ರೋಜಾ ಮುಂತಾದವರು ಕೂಡಾ ತಮ್ಮ ಪಾತ್ರಗಳನ್ನು ಜೋಪಾನವಾಗಿ ನಿರ್ವಹಿಸಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತ ಶ್ರೀಮಂತವಾಗಿದೆ. ಕಾಮಿಡಿ ಜಾನರಿನ ಸಿನಿಮಾಗಳಿಗೆ ನಿರ್ದೇಶಕ ಸಿ. ಶ್ರೀನಿವಾಸ ಹೇಳಿಮಾಡಿಸಿದಂತಾ ತಂತ್ರಜ್ಞರೆನ್ನುವುದಕ್ಕೆ ಬಿಲ್ ಗೇಟ್ಸ್ ಗಿಂತಾ ಬೇರೆ ಸಾಕ್ಷಿ ಬೇಕಿಲ್ಲ!.
ಕೆಲಸದ ಒತ್ತಡಗಳು, ಇತರೇ ಕಾರಣಗಳಿಗಾಗಿ ಮನಸ್ಸು ವ್ಯಾಕುಲಗೊಂಡಿದ್ದರೆ ಒಮ್ಮೆ ಬಿಲ್-ಗೇಟ್ಸ್ ನೋಡಿ ಬನ್ನಿ. ನಗುವಿನಿಂದ ಹೃದಯ ಪ್ರಪುಲ್ಲವಾಗುತ್ತದೆ…