ಭ್ರಮೆ ಮತ್ತು ವಾಸ್ತವದ ರೋಚಕ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ರಂಜಿಸಿ ಗಮನ ಸೆಳೆದ ಚಿತ್ರ ‘ಲೂಸಿಯಾ’. ಇದೀಗ ಅಂತಹದೇ ಒಂದು ವಿಭಿನ್ನ ಲುಸಿಡ್ ಡ್ರಿಮಿಂಗ್ ಪರಿಕಲ್ಪನೆಯ ಕಥಾ ಹಂದರದ ಸಿನಿಮಾ ಬರಲಿದೆ. ಅದರ ಹೆಸರು ‘ಬ್ಲಾಂಕ್’. ನಾಯಕಿ ಕೃಷಿ ತಾಪಂಡ ಹೊರತು ಪಡಿಸಿದರೆ ಇಲ್ಲಿರುವವರೆಲ್ಲರೂ ಹೊಸಬರು. ಚಿಕ್ಕಮಗಳೂರು ಮೂಲದ ಉದ್ಯಮಿ ಎಸ್.ಪಿ. ಮಂಜುನಾಥ್ ಪ್ರಸನ್ನ ನಿರ್ಮಾಣದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ಯುವ ನಿರ್ದೇಶಕ ಎಸ್.ಜೈ. ಮೈಸೂರು ಮೂಲದ ಎಸ್.ಜೈಗೆ ಇದು ಮೊದಲ ಸಿನಿಮಾ. ಎಂಜಿನಿಯರಿಂಗ್ ಪದವಿ ಮುಗಿಸಿ, ಕಿರುಚಿತ್ರಗಳ ಮೂಲಕ ಚಿತ್ರರಂಗಕ್ಕೆ ಬಂಗದವರು. ಚಿತ್ರತಂಡ ಈಗ ಟೀಸರ್ ಲಾಂಚ್ ಮೂಲಕ ಮಾಧ್ಯಮದ ಮುಂದೆ ಬಂತು.
ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಭರತ್ ಹಾಗೂ ತಮಿಳು ನಾಡು ಮೂಲದ ರಷ್ ಮಲ್ಲಿಕ್ ಈ ಚಿತ್ರದ ಪ್ರಧಾನ ಪಾತ್ರಧಾರಿಗಳು. ಮೂವರು ನಾಯಕರು, ಒಬ್ಬಳು ನಾಯಕಿ ಮೂಲಕ ವಿಭಿನ್ನ ಕತೆಯನ್ನು ತೆರೆ ಮೇಲೆ ತೋರಿಸಲು ಹೊರಟಿರುವ ನಿರ್ದೇಶಕ ಎಸ್.ಜೈ ಹೇಳುವ ಹಾಗೆ ಇದೊಂದು ಲುಸಿಡ್ ಡ್ರೀಮಿಂಗ್ ಕಾನ್ಸೆಪ್ಟ್ ಸಿನಿಮಾ. ‘ಸಿನಿಮಾದ ಕತೆ ಕನಸು ಮತ್ತು ವಾಸ್ತವಕ್ಕೆ ಸಂಬಂಧಿಸಿದ್ದು ಅಂದಾಕ್ಷಣ ಎಲ್ಲರೂ ಇದೊಂದು ಲೂಸಿಯಾ ಶೈಲಿಯ ಸಿನಿಮಾವೇ ಅಂದುಕೊಳ್ಳುವುದು ಸಹಜ. ಆದರೆ ಆ ಸಿನಿಮಾಕ್ಕೂ, ಇದಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಇದು ಡ್ರಗ್ಸ್ಗೆ ಈಡಾದವರ ಕತೆ. ಇಂದಿನ ಯುವ ಪೀಳಿಗೆಯ ಮೇಲೆ ಡ್ರಗ್ಸ್ ಹೇಗೆಲ್ಲ ಪ್ರಭಾವ ಬೀರುತ್ತಿದೆ ಎನ್ನುವ ಸಣ್ಣ ಎಳೆಯು ಚಿತ್ರದ ಪ್ರಧಾನ ಅಂಶ’
ಎಂಬುದಾಗಿ ಟೀಸರ್ ಲಾಂಚ್ ಸಂದರ್ಭ ವಿವರ ಕೊಟ್ಟರು. ಕತೆ ಕೇಳಿಯೇ ಇಂತಹದೊಂದು ಸಿನಿಮಾಕ್ಕೆ ಬಂಡವಾಳ ಹೂಡುವುದಕ್ಕೆ ಖುಷಿ ಆಯಿತು ಅಂತ ನಿರ್ಮಾಪಕ ಮಂಜುನಾಥ್ ಪ್ರಸನ್ನ ಹೇಳಿಕೊಂಡರೆ, ಮೂರು ಶೇಡ್ಸ್ ಇರುವ ಪಾತ್ರದಲ್ಲಿ ಇದೇ ಮೊದಲು ಅಭಿನಯಿಸಿದ್ದೇನೆ ಅಂತ ನಾಯಕಿ ಕೃಷಿ ತಾಪಂಡ ಹೇಳಿದರು. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಟೀಸರ್ ಲಾಂಚ್ಗೆ ಕೆಜಿಎಫ್ಖ್ಯಾತಿಯ ಖಳ ನಟ ಗರುಡ ರಾಮ್ ಬಂದಿದ್ದರು. ಹೊಸಬರ ಸಿನಿಮಾ ಬದ್ಧತೆಗೆ ಬೆಲೆ ಕೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದಾಗಿ ಹೇಳಿಕೊಂಡರು.
No Comment! Be the first one.