ಗ್ರೀನ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಪವನ್ ಮತ್ತು ಪ್ರಸಾದ್ ನಿರ್ದೇಶಿಸಿರುವ ಚಿತ್ರ ಬಡ್ಡಿಮಗನ್ ಲೈಫು. ಇದೇ ತಿಂಗಳ ೨೭ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾದ ನಾಯಕ ನಟ ಸಚಿನ್ ಶ್ರೀಧರ್ ಬಡ್ಡಿಮಗನ್ ಲೈಫಿನ ಬಗ್ಗೆ ಒಂದಿಷ್ಟು ಮಾತಾಡಿದ್ದಾರೆ. ಅದರ ವಿವರ ಇಲ್ಲಿದೆ…
ಈ ಸಿನಿಮಾದಲ್ಲಿ ಇಬ್ಬರು ನಿರ್ದೇಶಕರುಗಳಿದ್ದಾರೆ, ಪವನ್ ಮತ್ತು ಪ್ರಸಾದ್. ಇಬ್ಬರೂ ಸಂಪೂರ್ಣ ವಿರುದ್ಧ ಸ್ವಭಾವದವರು. ಆದರೆ ಈ ಸಿನಿಮಾದಲ್ಲಿ ಇಬ್ಬರೂ ಬಹಳ ಚೆನ್ನಾಗಿ ಕೊಲ್ಯಾಬ್ರೇಟ್ ಆಗಿ ಚಿತ್ರ ನಿರ್ದೇಶಿಸಿದ್ದಾರೆ. ಸಿನಿಮಾ ಹೇಗೆ ಇರಬೇಕು, ಕಥೆ ಹೇಗೆ ಬರಬೇಕು ಅನ್ನೋದ್ರಲ್ಲಿ ಬಹಳ ಕ್ಲಿಯರ್ ಆಗಿದ್ರು. ನಟರಲ್ಲಿ ಆಗಿರಬಹುದು ಡೈಲಾಗ್ಗಳಲ್ಲಿ ಆಗಿರಬಹುದು ಅವರು ಏನಂದುಕೊಂಡಿದ್ರೋ ಅದು ಬರುವವರೆಗೂ ಎಷ್ಟು ಟೇಕ್ಗಳಾದ್ರೂ ಮಾಡುತ್ತಿದ್ದರು. ಡೈಲಾಗ್ಸ್ಗಳಲ್ಲಿ ತುಂಬಾ ಫ್ರೀಡಂ ಕೊಟ್ಟಿದ್ರು. ನಾವೂ ಹೊಸಬರಾಗಿದ್ದರಿಂದ ಬಹಳ ಸಹಾಯ ಮಾಡಿ ಸಿನಿಮಾನ ಒಳ್ಳೆಯ ರೀತಿಯಲ್ಲಿ ತಂದಿದ್ದಾರೆ.
ಈ ಸಿನಿಮಾದಲ್ಲಿ ಏನು ಹೊಸದಿದೆ? ಏನು ಹೇಳಹೊರಟಿದ್ದೀವಿ ಅನ್ನೋದನ್ನ ಜನ ನೋಡಬೇಕು. ಈ ಸಬ್ಜೆಕ್ಟ್ ತುಂಬಾ ನಾರ್ಮಲ್ ಅಂತನಿಸಬಹುದು. ಒಂದು ಹುಡುಗ ಹುಡುಗಿ ಪ್ರೀತಿಸಿ ಓಡಿಹೋದ್ರೆ, ತಂದೆ ತಾಯಿಗೆ ಎಷ್ಟು ಎಫೆಕ್ಟ್ ಆಗತ್ತೆ, ಎಷ್ಟು ನೋವು ಅನುಭವಿಸುತ್ತಾರೆ, ಓಡಿ ಹೋದವರು ಸಹ ಹೇಗೆ ಕಷ್ಟ ಅನುಭವಿಸುತ್ತಾರೆ ಎಂಬ ಬಗ್ಗೆ ಬೇರೆಯದೇ ರೀತಿಯಲ್ಲಿ ಹೇಳಿ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ. ಬಹಳ ಮುದ್ದಾದ ಕಥೆ ಅಂತ ಹೇಳಬಹುದು.
ಕಥೆ ಕೇಳಿದಾಗ ನನ್ನ ಕ್ಯಾರೆಕ್ಟರ್ ಬಹಳ ನ್ಯಾಚುರಲ್ ಮತ್ತು ಲೈವ್ಲಿಯಾಗಿತ್ತು. ಸುಮಾರು ೨೫ ವರ್ಷದ ಹುಡುಗ ಒಂದು ಮಿಡ್ಲ್ ಕ್ಲಾಸ್ ಟೀನ್ ಏಜ್ ಹುಡುಗ ಊರಿನ ಯಜಮಾನನಾದ ಗೌಡನ ಮಗಳನ್ನು ಪ್ರೀತಿಸುವ ಪಾತ್ರ. ಹಾಗಾಗಿ ಈ ಪಾತ್ರವನ್ನು ಒಪ್ಪಿ ನಟಿಸಿದ್ದೇನೆ. ನಾನು ಈ ಚಿತ್ರಕ್ಕೋಸ್ಕರ ಸುಮಾರು ೧೫ ರಿಂದ ೨೦ ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ.
ನಿರೂಪಣೆ: ಸುಮ .ಜಿ