ಮಿಡಲ್ ಕ್ಲಾಸ್ ಬದುಕಿದೆಯಲ್ಲಾ? ಇದರಲ್ಲಿ ಈಸಿ ಜಯಿಸುವುದು ಬಲು ಕಷ್ಟ. ಅದರಲ್ಲೂ ಸಿಟಿಯಲ್ಲಿ ಸಂಸಾರ ನಿಭಾಯಿಸುವಷ್ಟರಲ್ಲಿ ಜೀವ ಹೈರಾಣಾಗಿರುತ್ತದೆ. ಎದುರಾಗುವ ಕಷ್ಟಗಳು ಆಕಾಶದಗಲ ಕನಸುಗಳನ್ನು ಹಿಂಡಿ ಹಿಡಿಗಾತ್ರ ಮಾಡಿಬಿಡುತ್ತದೆ.

ಆ ಹುಡುಗ ವಾಸು. ಡಾಕ್ಟರ್‌ ಆಗಬೇಕು ಅಂತಾ ಬಯಸಿದ್ದವನು ದವಾಖಾನೆಯ ದಾದಿಯಾಗಲು ಮಾತ್ರ ಸಾಧ್ಯವಾಗಿರುತ್ತದೆ. ಇದ್ದ ಬಾಡಿಗೆ ಮನೆಯನ್ನು ಸ್ವಂತಕ್ಕೆ ಮಾಡಿಕೊಂಡು, ಅಲ್ಲೇ ಕೊನೆಯ ದಿನಗಳನ್ನು ಕಳೆಯಬೇಕು ಅನ್ನೋದು ತಾಯಿಯ ಬಯಕೆ. ಮದುವೆ ಮಾಡಿಕೊಟ್ಟರೂ ಗಂಡನಿಗೊಂದು ಆಟೋ ಕೊಡಿಸುವ ತನಕ ವಾಪಾಸು ಹೋಗಲ್ಲ ಅಂತಾ ತವರಿಗೆ ಬಂದು ಕೂತಿರುವ ತಂಗಿ. ಮತ್ತೊಂದು ಕಡೆ ಇಷ್ಟ ಪಟ್ಟ ಹುಡುಗಿ ಮದುವೆಗಾಗಿ ಕಾದಿರುತ್ತಾಳೆ. ಇವೆಲ್ಲವೂ ಕೈಗೂಡಬೇಕೆಂದರೆ ಕೈತುಂಬಾ ಹಣ ಬೇಕು. ಆಸ್ಪತ್ರೆಯಲ್ಲಿನ ಕೆಲಸ, ಬರುವ ಹದಿಮೂರು ಸಾವಿರ ಸಂಬಳದಲ್ಲಿ ಯಾವ ಕನಸು ತಾನೇ ನೆರವೇರಲು ಸಾಧ್ಯ? ಹೀಗಾಗಿ ದುಬೈನಲ್ಲಿ ಕೆಲಸ ಕೊಡಿಸುತ್ತೇನೆಂದ ನಕಲಿ ಏಜೆಂಟನೊಬ್ಬನನ್ನು ನಂಬಿ ಹಣ ಕೊಟ್ಟು ಅಡಕತ್ತರಿಗೆ ಸಿಕ್ಕಿಕೊಂಡಿರುತ್ತಾನೆ. ಸಾಲ ಕೊಟ್ಟ ಫೈನಾನ್ಷಿಯರ್ ಬೆನ್ನು ಬಿದ್ದಿರುತ್ತಾನೆ. ಈ ಹೊತ್ತಲ್ಲೇ ಪಾರ್ಶ್ವವಾಯು ಪೀಡಿತ ವ್ಯಕ್ತಿಯ ದೇಖರೇಕಿ ನೋಡಿಕೊಳ್ಳುವ ಕೆಲಸ ಸಿಗುತ್ತದೆ. ಇಡೀ ದಿನ ಆ ವ್ಯಕ್ತಿಯ ಶುಶ್ರೂಷೆ ಮಾಡಿ, ಅವರ ಮನೆಯವರು ಕೊಡುವ ಹಣದಲ್ಲಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿರುತ್ತಾನೆ.

ಸದಾ ಕುಂತಲ್ಲೇ ವಟವಟ ಮಾತಾಡಿಕೊಂಡು, ಈ ಹುಡುಗನೊಂದಿಗೆ ವಿಶ್ವಾಸ ಹೆಚ್ಚಿಸಿಕೊಂಡ ಮುದುಕ ಅದೊಂದು ದಿನ ಪಟಕ್ ಅಂತಾ ಜೀವ ಬಿಟ್ಟುಬಿಟ್ಡರೆ, ಗತಿ ಏನಾಗಬೇಡ? ಅಲ್ಲಿಂದ ಶುರುವಾಗುತ್ತದೆ ಡೆಡ್ ಬಾಡಿ ಜೊತೆಗಿನ ಸರ್ಕಸ್ಸು!

ಮುದುಕ ಸತ್ತ ಅಂತಾ ಫಾರಿನ್ನಲ್ಲಿರುವ ಆತನ ಹೆಂಡತಿ, ಮಗನಿಗೆ ಹೇಳಿಬಿಟ್ಟರೆ ಅಲ್ಲಿಗೆ ಕೆಲಸ ಕೂಡಾ ಮುಕ್ತಾಯವಾಗುತ್ತದೆ. ಬರುವ ವರಮಾನವೂ ನಿಲ್ಲುತ್ತದೆ. ಕಷ್ಟ ತೀರುವ ತನಕ ಸಾವಿನ ವಿಚಾರ ತಿಳಿಸಬಾರದು, ಒಂದಷ್ಟು ದಿನಗಳ ಕಾಲ ಹೆಣವನ್ನು ಜೋಪಾನ ಮಾಡಬೇಕೆನ್ನುವ ತೀರ್ಮಾನಕ್ಕೆ ಬರುತ್ತಾನೆ. ಅದಕ್ಕೆ ಬೇಕಿರುವ ಎಲ್ಲ ವ್ಯವಸ್ಥೆ ಮಾಡಿ, ಮುದುಕ ಜೀವಂತವಾಗಿರುವಂತೆ ಡ್ರಾಮಾ ಶುರು ಮಾಡುತ್ತಾನೆ. ಈ ಹಂತದಲ್ಲಿ ಎದುರಾಗುವ ಆತಂಕಗಳು, ಘಟಿಸುವ ಯಡವಟ್ಟುಗಳೇ, ತಮಾಷೆಯ ದೃಶ್ಯಗಳೇ ಬಾಡಿ ಗಾಡ್ ಚಿತ್ರದ ಸಬ್ಜೆಕ್ಟು!

ಈ ಹಿಂದೆ ಜೀವಾ, ಕರಿಯ ೨, ಗಣಪ ಸಿನಿಮಾಗಳನ್ನು ಕೊಟ್ಡಿದ್ದ ಪ್ರಭು ಶ್ರೀನಿವಾಸ್ ಬಾಡಿಗಾಡ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಲ ಬೇರೆಯದ್ದೇ ಜಾನರಿಗೆ ಕೈ ಇಟ್ಟಿರುವ ಪ್ರಭು ಶ್ರೀನಿವಾಸ್ ಬಡಪಾಯಿ ಹುಡುಗನ ಕಷ್ಟ, ಶ್ರೀಮಂತನ ಹೆಣವನ್ನು ಸಮೀಕರಿಸಿ ಭರ್ತಿ ನಗುವನ್ನು ಸೃಷ್ಟಿಸಿ ಮನರಂಜಿಸಿದ್ದಾರೆ.

ಸತ್ತವನ ದೇಹವನ್ನು ವ್ಹೀಲ್ ಚೇರಲ್ಲಿ ಕೂರಿಸಿ ವಾಯು ವಿಹಾರಕ್ಕೆ ಕರೆದೊಯ್ಯುಲಾಗುತ್ತದೆ. ಪಾರ್ಕಲ್ಲಿ ಮಹಿಳೆಯೊಬ್ಬಳ ಸರವನ್ನು ಎಗರಿಸುವ ಕಳ್ಳನನ್ನು ಈ ಹೆಣ ಹಿಡಿಯುತ್ತದೆ. ಕಳ್ಳನೊಂದಿಗೆ ಸಖತ್ತಾಗಿ ಫೈಟ್ ಕೂಡಾ ಮಾಡುತ್ತೆ. ಮತ್ತೂ ಮುಂದುವರೆದು ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತದೆ… ಇವೆಲ್ಲಾ ದೃಶ್ಯಗಳು ಕೃತಕ ಅನ್ನಿಸದೆ ನೋಡುಗರನ್ನು ಉಳ್ಳಾಡಿಕೊಂಡು ನಗುವಂತೆ ಮಾಡುತ್ತದೆ. ಇದು ನಿರ್ದೇಶಕನ ನಿಜವಾದ ಗೆಲುವೆನ್ನಬಹುದು.

ಯಾವ ಫಿಲ್ಟರ್‌ ಎಲ್ಲದೆ ನೇರಾ ನೇರ ಮಾತಾಡಿಬಿಡುವ  ಗುರುಪ್ರಸಾದ್  ಅವರ ವಾಚಾಳಿ ವ್ಯಕ್ತಿತ್ವ ತರೆ ಮೇಲೂ ವರ್ಕೌಟ್‌ ಆಗಿದೆ. ನಿಜಕ್ಕೂ ಅಮಾಯಕನಂತೆ ಕಾಣುವ ಮನೋಜ್‌ ಕುಮಾರ್‌ ಅವರ ಮುಗ್ದ ಫೇಸ್‌ ಕಟ್ಟು ಪಾತ್ರಕ್ಕೆ ಹೇಳಿಮಾಡಿಸಿದಂತಿದೆ.  ಮನೋಜ್‌ ಕುಮಾರ್‌ ಅವರಿಗೆಂದೇ ಈ ಪಾತ್ರ ಸೃಷ್ಟಿಸಿದಂತೆ ಕಾಣುತ್ತದೆ. ಮನೆಗೆಲಸ ಮಾಡುವ ಹುಡುಗಿಯ ಪಾತ್ರದಲ್ಲಿ ತನಿಷ ಕುಪ್ಪುಂದ ಮಾದಕವಾಗಿ ಕಾಣಿಸುತ್ತಾರೆ. ಅಶ್ವಿನ್‌ ಹಾಸನ್‌ ಅವರ ನಟನೆಯ ಸಿನಿಮಾ ಲಿಸ್ಟಿನಲ್ಲಿ ʻಬಾಡಿಗಾಡ್ʼ‌ ಖಂಡಿತಾ ಪ್ರಮುಖ ಸಿನಿಮಾವಾಗಿ ದಾಖಲಾಗುತ್ತದೆ.

ಈ ಚಿತ್ರದಲ್ಲಿ ನಿರ್ದೇಶಕ ಪ್ರಭು ಶ್ರೀನಿವಾಸ್‌ ಸಿಂಕ್‌ ಸೀನಾಗಿ   ಅವತಾರವೆತ್ತಿದ್ದಾರೆ. ಭವಿಷ್ಯದಲ್ಲಿ ನಿರ್ದೇಶನದ ಜೊತೆಗೆ ಪೂರ್ಣ ಪ್ರಮಾಣದ ನಟನಾಗಿಯೂ ಪ್ರಭು ಎದ್ದು ನಿಲ್ಲಬಹುದು. ವಿಲನ್‌, ಕಾಮಿಡಿ ಯಾವುದೇ ಪಾತ್ರಕ್ಕೆ ಮುಲಾಜಿಲ್ಲದೆ ಇವರನ್ನು ಇತರೆ ನಿರ್ದೇಶಕರು ಆಯ್ಕೆ ಮಾಡಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಟನೆಯಲ್ಲಿ ಟೈಮಿಂಗ್‌, ಟ್ಯಾಲೆಂಟು ಪ್ರಭು ಅವರಿಗಿದೆ. ಅಪ್ಪು ಹಾಡಿರುವ ಆರೇಸಾ ಡಂಕಣಕಾ  ಹಾಡು ಕೇಳಲು ಮಜವಾಗಿದ್ದರೂ ಕೊನೆಯಲ್ಲಿ ಸೇರಿಸಿದ್ದಾರಷ್ಟೇ. ವೇಲ್‌ ಮುರುಗನ್‌ ಕ್ಯಾಮೆರಾದೆದುರು ಲೈಟುಗಳನ್ನು ಜೋಡಿಸಿ ಆಟವಾಡಿದ್ದಾರೆ. ಕರಣ್‌ ಕೃಪಾ ಸಂಗೀತ ಹೇಳಲು ಹಿತ-ಮಿತವಾಗಿದೆ. ರವಿವರ್ಮ ಸಂಯೋಜಿಸಿರುವ ಕಾಮಿಡಿ ಸ್ಟಂಟ್‌ ಸಖತ್‌ ಮಜಾ ಕೊಡುತ್ತದೆ.

ಒಟ್ಟಾರೆ,  ಎಲ್ಲರೂ ಕೂತು  ನೋಡಿ, ನಕ್ಕು ನಲಿಯಬಹುದಾದ ಸಿನಿಮಾ ಬಾಡಿ ಗಾಡ್.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ದುಡ್ಡಿನ ಹಿಂದೆ ಬಿದ್ದವರ ದುರಂತ!

Previous article

ನಿವಿನ್ ಪೌಲಿ-ಶಾನ್ವಿ ಶ್ರೀವಾತ್ಸವ್ ನಟನೆಯ ಬಹುಕೋಟಿ  ಸಿನಿಮಾ!

Next article

You may also like

Comments

Leave a reply

Your email address will not be published.