ಈ ಹಿಂದೆ ಪ್ರಜ್ವಲ್ ದೇವರಾಜ್ ಅವರ ಜೀವಾ, ಗಣಪ, ಕರಿಯ-೨ ಸಿನಿಮಾಗಳನ್ನು ನೀಡಿದ್ದವರು ಪ್ರಭು ಶ್ರೀನಿವಾಸ್. ತಮಿಳಿನ ಸಾಕಷ್ಟು ಹಿಟ್ ಹಾಡುಗಳಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿರುವ ಪ್ರಭು ಶ್ರೀನಿವಾಸ್ ಕನ್ನಡದಲ್ಲಿ ಚಿತ್ರ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಈ ಹಿಂದೆ ಕೂಡಾ ಸ್ಟ್ರಾಂಗ್ ಕಂಟೆಂಟ್ ಇರಿಸಿಕೊಂಡು ಸಿನಿಮಾ ಮಾಡಿದ್ದ ಪ್ರಭು ಶ್ರೀನಿವಾಸ್ ಈ ಸಲ ಬಾಡಿಗಾಡ್ ಜೊತೆ ಎಂಟ್ರಿ ಕೊಟ್ಟಿದ್ದಾರೆ.
ಮಠ ಗುರುಪ್ರಸಾದ್, ಮೊಗ್ಗಿನ ಮನಸು ಮನೋಜ್ ಕುಮಾರ್ ಮೊದಲಾದವರು ಪಾತ್ರ ನಿರ್ವಹಿಸಿರುವ ಬಾಡಿಗಾಡ್ ಸಿನಿಮಾದ ಟೀಸರು, ಟ್ರೇಲರುಗಳನ್ನೆಲ್ಲಾ ನೋಡಿದರೆ, ನಿಜಕ್ಕೂ ಈ ಸಿನಿಮಾದಲ್ಲಿ ಏನೋ ಇದೆ ಅನ್ನಿಸುವಂತಿದೆ. ವ್ಹೀಲ್ ಚೇರಿನಲ್ಲಿ ಕುಳಿತ ಗುರುಪ್ರಸಾದ್, ಅವರ ಮಾತುಗಳು ಗಮನ ಸೆಳೆಯುತ್ತಿವೆ. ಚಿತ್ರದ ಬಹುತೇಕ ದೃಶ್ಯಗಳಲ್ಲಿ ಗುರುಪ್ರಸಾದ್ ಡೆಡ್ ಬಾಡಿಯಾಗಿ ನಟಿಸಿರೋದು ಗಮನಾರ್ಹ. ಬರೋಬ್ಬರಿ ಎಂಟು ದಿನಗಳ ಕಾಲ ಫ್ರಿಡ್ಜ್ ಒಳಗೆ ಕೂತಲ್ಲೇ ಕೂತು ನಟಿಸಿದ್ದಾರಂತೆ!
2018ರಲ್ಲಿ ಓ ಪ್ರೇಮವೇ ಹೆಸರಿನ ಚೆಂದದ ಸಿನಿಮಾವೊಂದು ತೆರೆಗೆ ಬಂದಿತ್ತು. ಆ ಸಿನಿಮಾವನ್ನು ನಿರ್ದೇಶಿಸಿ, ನಾಯಕನಟನಾಗಿ ನಟಿಸಿದ್ದವರು ಮನೋಜ್ ಕುಮಾರ್. ಅದಕ್ಕೂ ಮುಂಚೆ ಮೊಗ್ಗಿನ ಮನಸು ಸಿನಿಮಾದಲ್ಲೂ ಮನೋಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಹೀರೋ ಆಗಲು ಬೇಕಿದ್ದ ಎಲ್ಲ ಅರ್ಹತೆ ಹೊಂದಿರುವವರು ಮನೋಜ್. ಎಲ್ಲಿ ಹೋದರು ಮನೋಜ್ ಅಂತಾ ಹುಡುಕುವ ಹೊತ್ತಿಗೇ ಈಗ ಬಾಡಿಗಾಡ್ ಜೊತೆ ಪ್ರತ್ಯಕ್ಷರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ಹಾಡಿರುವ ʻಆರೇಸಾ ಡಂಕಣಕಾʼ ಹಾಡು ಎ-೨ ಮ್ಯೂಸಿಕ್ ಚಾನೆಲ್ಲಿನಲ್ಲಿ ಸದ್ದು ಮಾಡಿದೆ.
ಗುರುಪ್ರಸಾದ್, ಮನೋಜ್ ಕುಮಾರ್ ಜೊತೆಗೆ ದೀಪಿಕಾ ಆರಾಧ್ಯ, ಪದ್ಮಜಾ ರಾವ್, ಶಂಕರ್ ಕೃಷ್ಣಮೂರ್ತಿ, ಅಶ್ವಿನ್ ಹಾಸನ್ ತಾರಾಬಳಗ, ವೇಲ್ ಮುರುಗನ್ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ರವಿವರ್ಮಾ, ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕಿದೆ. ಬಾಡಿಗಾಡ್ ಚಿತ್ರದ ನಿರ್ದೇಶನದೊಂದಿಗೆ ನಿರ್ಮಾಣದ ಜವಾಬ್ದಾರಿ ಕೂಡಾ ಪರಭು ಶ್ರೀನಿವಾಸ್ ವಹಿಸಿಕೊಂಡಿದ್ದಾರೆ.
ಇದೇ ವಾರ ʻಬಾಡ್ ಗಾಡ್ ʼ ತೆರೆಗೆ ಬರುತ್ತಿದ್ದು, ಜನರನ್ನು ರಂಜಿಸುವುದರ ಜೊತೆಗೆ ಸೀರಿಯಸ್ಸಾದ ವಿಚಾರವನ್ನೂ ತೆರೆದಿಡಲಿದೆ. ಅದೇನು ಅನ್ನೋದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.
Comments