ನಟ, ನಿರ್ದೇಶಕ ರಾಘವ ಲಾರೆನ್ಸ್ ಅತ್ಯುತ್ತಮ ಡ್ಯಾನ್ಸರ್. ನಟನೆಯಲ್ಲೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವ ಅವರೀಗ ’ಮುನಿ’ ಸರಣಿಯ ನಾಲ್ಕನೇ ಹಾರರ್-ಥ್ರಿಲ್ಲರ್ ಚಿತ್ರದೊಂದಿಗೆ ತೆರೆಗೆ ಬರಲಿದ್ದಾರೆ. ’ಕಾಂಚನ೩’ ಶೀರ್ಷಿಕೆಯ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮುಂದಿನ ತಿಂಗಳಲ್ಲಿ ತೆರೆಕಾಣಲಿದೆ. ಏಪ್ರಿಲ್ 18 ಎಂದು ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿತ್ತು. ಅದೀಗ ಲೋಕಸಭಾ ಚುನವಾಣೆ ದಿನಾಂಕ ಎಂದು ಘೋಷಣೆಯಾಗಿದೆ. ಹಾಗಾಗಿ ರಾಘವ ಲಾರೆನ್ಸ್ ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಏಪ್ರಿಲ್ ೧೯ಕ್ಕೆ ಮುಂದೂಡಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಿಸಿರುವ ಈ ಚಿತ್ರ ಸರಣಿಯ ಮೊದಲ ಮೂರು ಚಿತ್ರಗಳಂತೆಯೇ ಹಾರರ್-ಥ್ರಿಲ್ಲರ್ ಜಾನರ್ನದ್ದು. ಜೊತೆಗೆ ಕಾಮಿಡಿಯೂ ಇರುತ್ತದೆ ಎಂದು ಲಾರೆನ್ಸ್ ಹೇಳಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಯಕನಾಗಿ ಲಾರೆನ್ಸ್ ಕಾಣಿಸಿಕೊಂಡಿದ್ದರೆ ಅವರಿಗಿಲ್ಲಿ ಮೂವರು ನಾಯಕಿಯರು. ಸರಣಿಯ ಮೊದಲ ಚಿತ್ರ ’ಮುನಿ’ಯಲ್ಲಿ (2007) ನಟಿಸಿದ್ದ ನಟಿ ವೇದಿಕಾ ಈಗ ಮತ್ತೆ ಲಾರೆನ್ಸ್ಗೆ ಜೊತೆಯಾಗಿದ್ದಾರೆ. ಓವಿಯಾ ಮತ್ತು ನಿಕ್ಕಿ ತಂಬೋಲಿ ಮತ್ತಿಬ್ಬರು ನಾಯಕಿಯರು. ಇತ್ತೀಚೆಗಷ್ಟೇ ತೆರೆಕಂಡ ’೯೦ ಎಂಎಲ್’ ತೆಲುಗು ಚಿತ್ರದಲ್ಲಿ ಓವಿಯಾ ಗಮನಸೆಳೆದಿದ್ದರು. ನವನಟಿ ನಿಕ್ಕಿ ತಂಬೋಲಿ ಸದ್ಯ ’ಇರುಟ್ಟು ಅರೈಯಿಲ್ ಕುತು’ ತಮಿಳು ಚಿತ್ರದ ತೆಲುಗು ಅವತರಣಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.