ಸಿನಿಮಾವೊಂದು ಹಿಟ್ ಆಗೋದು ಯಾವಾಗ ಗೊತ್ತಾ? ಯಾರೂ ಹೇಳಿರದ ಕಥೆಯನ್ನು ಹೇಳಿದಾಗ. ಅಥವಾ, ಎಲ್ಲರಿಗೂ ಗೊತ್ತಿದ್ದೂ ಹೇಳಲು ಹಿಂದೇಟು ಹಾಕಿರುತ್ತಾರಲ್ಲಾ? ಅದನ್ನು ತೆರೆದಿಟ್ಟಾಗ. ‘ಬ್ರಹ್ಮಚಾರಿ ಸಿನಿಮಾದ ಟ್ರೇಲರಲ್ಲಿ ಇರೋದು ಈ ಎರಡನೇ ಬಗೆಯ ಕಂಟೆಂಟು!

ಮದುವೆಯಾಗಿಬಿಟ್ಟರೆ ಸಾಕು ಅಂತಾ ಪರಿತಪಿಸುವವರಿರುತ್ತಾರೆ. ಗಂಡು ಹೆಣ್ಣು ಒಟ್ಟು ಸೇರಿಬಿಟ್ಟರೆ ಎಲ್ಲ ಬಾಧೆಗಳೂ ತೀರಿಬಿಡುತ್ತವೆ ಅನ್ನೋ ಕಲ್ಪನೆಯಿದೆ. ಆದರೆ, ಮದುವೆ ಅಂತಾ ಆಗುತ್ತಿದ್ದಂತೇ ಅಸಲೀ ವಿಚಾರಗಳೆಲ್ಲಾ ಹೊರಬರಲು ಶುರುವಾಗುತ್ತವೆ. ಶಕ್ತಿ, ಸಾಮರ್ಥ್ಯ, ಹೊಂದಾಣಿಕೆ, ನಿಜವಾದ ಪ್ರೀತಿ ಎಲ್ಲವೂ ಅನಾವರಣಗೊಳ್ಳುವುದು ಜೊತೆಯಾದಮೇಲೇನೆ. ನಾಲ್ಕು ಗೋಡೆಗಳ ನಡುವೆ ನಡೆಯುವ ಕ್ರಿಯೆಗಳು, ಅದರ ಗೆಲುವು ಸೋಲುಗಳ ಮೇಲೆ ಬದುಕು ನಿಂತಿದೆಯಾ? ಮಂಚ ಶಬ್ದ ಹೊರಹೊಮ್ಮಿಸದಿದ್ದರೆ, ಹಾಸಿಗೆ ಸುಕ್ಕಾಗದಿದ್ದರೆ, ದಿಂಬು ಇಟ್ಟಾಡದಿದ್ದರೆ ಪ್ರೀತಿ ಹುಟ್ಟೋದಿಲ್ಲವಾ? ಚಾದರದ ಮೇಲೆ ಹರವಿದ ಹೂವು ಬಾಡಿದರೆ ಮಾತ್ರ ಮನಸ್ಸುಗಳು ಅರಳೋದಾ? ಇಂತಾ ಸಾವಿರ ಪ್ರಶ್ನೆಗಳು ಪ್ರತಿಯೊಬ್ಬರಲ್ಲೂ ಇತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಯಾವ ಮುಲಾಜೂ ಇಲ್ಲದೆ, ಮುಜುಗರವೂ ಆಗದಂತೆ ‘ಬ್ರಹ್ಮಚಾರಿ ಉತ್ತರ ನೀಡುತ್ತಾನೆ ಅನ್ನೋದು ಈ ಟ್ರೇಲರಿನಲ್ಲಿ ಅನಾವರಣಗೊಂಡಿದೆ.

ಮೇಲ್ನೋಟಕ್ಕೆ ಗಂಡಿನ ಸಂಕಟ, ಹೆಣ್ಣಿನ ತವಕದ ಕತೆ ಇದರಲ್ಲಿ ಬೆಸೆದುಕೊಂಡಂತೆ ಕಾಣುತ್ತದೆ. ಮದುವೆಯಾದ ಹುಡುಗನಿಗೆ ಸಮಸ್ಯೆಯಿದೆ ಅಂತಾ ಹೊರಜಗತ್ತಿಗೆ ಗೊತ್ತಾದರೆ ಅದು ಲೇವಡಿಯ ವಿಚಾರವಾಗಿಬಿಡುತ್ತದೆ. ಹಾಗೆ ಆಡಿಕೊಳ್ಳೋರ ಬಾಯಿಗೆ ಆಹಾರವಾಗುವಂಥಾ ಪಾತ್ರದಲ್ಲಿ ನಟಿಸುವುದೂ ಸವಾಲೇ. ಅದನ್ನು ನೀನಾಸಂ ಸತೀಶ್ ಅನುಭವಿಸಿ ಅನುಕಂಪ ಹುಟ್ಟಿಸೋ ರೇಂಜಿಗೆ ನಟಿಸಿದ್ದಾರೆ. ಅದು ‘ಬ್ರಹ್ಮಚಾರಿಯ ಟ್ರೇಲರಿನಲ್ಲಿ ಗೊತ್ತಾಗುತ್ತದೆ. ಯಾವುದೋ ಒಂದು ಇಮೇಜಿಗೆ ಜೋತುಬೀಳದ ಅಪ್ಪಟ ಕಲಾವಿದನಿಂದ ಮಾತ್ರ ಇದು ಸಾಧ್ಯಾವಾಗುವಂಥದ್ದು. ಅಭಿನಯ ಚತುರ ಇದನ್ನು ಸಾಧಿಸಿದ್ದಾರೆ. ಜಗತ್ತಿನ ಕಣ್ಣಿಗೆ ಗಂಭೀರವೆನಿಸುವ ಸಮಸ್ಯೆಯೊಂದನ್ನು ಹಾಸ್ಯದ ಧಾಟಿಯಲ್ಲಿ ನಿರೂಪಿಸುವುದೂ ಅಷ್ಟೇ ಕಷ್ಟದ ಕೆಲಸ. ಬ್ರಹ್ಮಚಾರಿಯ ಸಣ್ಣದೊಂದು ಟ್ರೇಲರಿನ ಉದ್ದಕ್ಕೂ ಜನ ನಗಾಡುತ್ತಾ ನೋಡುತ್ತಾರಾದರೆ, ಇಡೀ ಸಿನಿಮಾ ನೋಡಿ ಎದ್ದು ಬರೋಹೊತ್ತಿಗೆ ಉಳ್ಳಾಡಿಕೊಂಡು, ಮೈ ಕುಣಿಸಿಕೊಂಡು ನಗುವುದು ಗ್ಯಾರೆಂಟಿ.
ಇದು ಚಂದ್ರಮೋಹನ್ ನಿರ್ದೇಶನದ ಸಿನಿಮಾ. ಸದಾ ಮುನಿಸಿಕೊಂಡವರಂತೆ ಕಾಣುವ ಚಂದ್ರಮೋಹನ್ ಭಯಂಕರ ಕಾಮಿಡಿ ಸೆನ್ಸ್ ಇರೋ ನಿರ್ದೇಶಕ. ಬಹುಶಃ ತುಂಬಾ ಸೀರಿಯಸ್ಸಾಗಿ ಕಾಣೋರು ಮಾತ್ರ ಎಲ್ಲವನ್ನೂ ಗಮನಿಸಿ, ಬೇರೆಲ್ಲರನ್ನೂ ನಗಿಸುವಂತೆ ಮಾಡುವುದು ಒಂಥರಾ ಗುಟ್ಟಿರಬಹುದು. ಈಗಾಗಲೇ ಅವರದ್ದೇ ನಿರ್ದೇಶನದಲ್ಲಿ ಮೂಡಿಬಂದಿರುವ ಬಾಂಬೆ ಮಿಠಾಯ್ ಮತ್ತು ಡಬಲ್ ಇಂಜಿನ್ ಸಿನಿಮಾಗಳು ಇವರ ಹಾಸ್ಯಪ್ರಜ್ಞೆಯನ್ನು ಸಾಬೀತು ಮಾಡಿವೆ. ಈ ಸಲ ಅಭಿನಯ ಚತುರ ನೀನಾಸಂ ಸತೀಶ್ ಮತ್ತು ಕಲಾಶಾರದೆ ಅದಿತಿ ಪ್ರಭುದೇವಾ ಕೂಡಾ ಚಂದ್ರಮೋಹನ್ ಜೊತೆ ಸೇರಿಕೊಂಡಿದ್ದಾರೆ. ಚಂದ್ರಮೋಹನ್ ಸ್ಕ್ರಿಪ್ಟು, ಸತೀಶ್-ಅದಿತಿ ಜೋಡಿಯ ನಟನೆಯ ಟೈಮಿಂಗ್ಸು… ಎಲ್ಲವೂ ಒಟ್ಟಾಗಿರೋದರಿಂದ ಜನರಿಗೆ ಭರಪೂರ ಮನರಂಜನೆ ಸಿಗೋದರಲ್ಲಿ ಡೌಟಿಲ್ಲ.

ಯು ಕೆ ಮೆಹ್ತ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತ ಅವರು ನಿರ್ಮಿಸಿದ್ದಾರೆ. ರವಿಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ, ಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನೀನಾಸಂ ಸಂತೀಶ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ, ಅಶೋಕ್, ಅಕ್ಷತ, ಅಚ್ಯುತಕುಮಾರ್, ಪದ್ಮಜಾರಾವ್, ದತ್ತಣ, ಬಿರಾದಾರ್, ಗಿರಿಜಾ ಲೋಕೇಶ್ ಮುಂತಾದವರ ತಾರಾಬಳಗದ ಜೊತೆಗೆ ‘ಮಜಾಭಾರತ‘ದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪಾತ್ರಧಾರಿಯ ಜೊತೆ ಪವಾಡ ಮಾಡಿದರಾ ಪರ್ಮಿ

Previous article

EXCLUSIVE : Video ಒಳಗಿದೆ!

Next article

You may also like

Comments

Leave a reply

Your email address will not be published. Required fields are marked *