ಕೆಲವೊಂದು ಸಿನಿಮಾಗಳು ಶುರುವಿನಿಂದಲೇ ಒಂದು ರೀತಿಯ ಪಾಸಿಟೀವ್ ಫೀಲ್ ಹುಟ್ಟುಹಾಕುತ್ತವೆ. ‘ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತದೆ ಅಂತಾ ಅನ್ನಿಸಲು ಶುರುವಾಗುತ್ತದೆ. ಹೀಗೆ ಆರಂಭದಿಂದಲೇ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಾ, ಹಂತ ಹಂತವಾಗಿ ಗೆಲುವು ಕಾಣುತ್ತಿರುವ ಸಿನಿಮಾ ಬ್ರಹ್ಮಚಾರಿ.
ಉದಯ್ ಮೆಹ್ತಾ ಅವರ ಕೈಗುಣದೊಂದಿಗೆ ಚಂದ್ರಮೋಹನ್ ಕ್ರಿಯಾಶೀಲತೆ, ಧರ್ಮವಿಶ್ ನಿಖರತೆ, ಚೇತನ್ ಕುಮಾರ್ ಬುದ್ದಿವಂತಿಕೆ, ನೀನಾಸಂ ಸತೀಶ್, ಅದಿತಿ ಪ್ರಭುದೇವ ಅವರ ಪ್ರತಿಭೆ ಎಲ್ಲವೂ ಸೇರಿ ನೋಡುಗರ ಕಣ್ಣಿಗೆ ಬ್ರಹ್ಮಚಾರಿ ಅದೃಷ್ಟವಂತನ ಹಾಗೆ ಗೋಚರಿಸುತ್ತಿದ್ದಾನೆ!
ಧರ್ಮ ವಿಶ್ ಸಂಗೀತ ಸಂಯೋಜನೆಯಲ್ಲಿ ಭರಾಟೆ ಚೇತನ್ ಕುಮಾರ್ ಬರೆದಿದ್ದ ‘ಹಿಡ್ಕ ಹಿಡ್ಕ ವಸಿ ತಡ್ಕ ಅನ್ನೋ ಮೊದಲ ಹಾಡು ಅತ್ಯದ್ಭುತ ಪ್ರತಿಕ್ರಿಯೆ ಪಡೆದು ಹಿಟ್ ಆಗಿದೆ. ನಂತರ ರಿಲೀಸಾದ ಟ್ರೇಲರಂತೂ ಬೆರಗಾಗುವ ರೀತಿಯಲ್ಲಿ ಗೆದ್ದಿದೆ. ಈಗ ಬ್ರಹ್ಮಚಾರಿ ಚಿತ್ರತಂಡ ಎರಡನೇ ಹಾಡನ್ನು ಈ ವರೆಗೂ ಯಾರೂ ಪ್ರಯತ್ನಿಸದ ರೀತಿಯಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ನವೆಂಬರ್ ಇಂದು (೧೫ನೇ ತಾರೀಖು) ಮಂತ್ರಿ ಮಾಲ್ ನಲ್ಲಿ ಒಂದು ಗಂಟೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಸಂಜಿತ್ ಹೆಗಡೆ, ಸುಪ್ರಿಯ ಲೈವ್ ನಲ್ಲಿ ಹಾಡುವ ಮುಖಾಂತರ ‘ಆರಂಭ ಆರಂಭ ಎನ್ನುವ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ. ಸಾವಿರಾರು ಜನರ ಸಮ್ಮುಖದಲ್ಲಿ ಸುಮಾರು ಒಂದು ಗಂಟೆಯ ಕಾರ್ಯಕ್ರಮ ನಡೆಯಲಿದೆ. ಈ ಹಾಡು ಯಾವ ವೆರೈಟಿಯದ್ದು? ಯಾವ ಮಟ್ಟಿಗೆ ಮೋಡಿ ಮಾಡುತ್ತದೆ ಅನ್ನೋದು ಗೊತ್ತಾಗಲಿದೆ.
ಇದೆಲ್ಲಾ ಒಂದು ಕಡೆಯಾದರೆ ಸದ್ಯ ಕನ್ನಡ ಚಿತ್ರರಂಗದ ಹೆಸರಾಂತ ವಿತರಣಾ ಸಂಸ್ಥೆ ಕೆ.ಆರ್.ಜಿ. ಸ್ಟುಡಿಯೋ ‘ಬ್ರಹ್ಮಚಾರಿಯ ಪೂರ್ತಿ ಕರ್ನಾಟಕದ ವಿತರಣೆ ಹಕ್ಕನ್ನು ಭಾರೀ ಮೊತ್ತ ನೀಡಿ ಕೊಂಡುಕೊಂಡಿದೆ. ಅಲ್ಲಿಗೆ ನಿರ್ಮಾಪಕ ಉದಯ್ ಮೆಹ್ತಾ ವ್ಯಾವಹಾರಿಕವಾಗಿ ಮೊದಲ ಹಂತದ ಗೆಲುವು ಕಂಡಂತಾಯಿತು. ಇನ್ನು ನೀನಾಸಂ ಸತೀಶ್ ನಟನೆಯ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ವ್ಯಾಪಾರ ಕುದುರಿಸುತ್ತಿರುವುದರಿಂದ ಅವರು ಇಷ್ಟು ದಿನವಿದ್ದ ಜಾಗದಿಂದ ಮತ್ತೊಂದಿಷ್ಟು ಹೆಜ್ಜೆ ಮುಂದೆ ಸಾಗಿ ಟಾಪ್ ಸ್ಟಾರ್ಗಳ ಲಿಸ್ಟಿಗೆ ಸೇರುತ್ತಿದ್ದಾರೆ. ಅದಕ್ಕೇ ಹೇಳಿದ್ದು ಕೆಲವು ಸಿನಿಮಾಗಳು ಗೆಲ್ಲುವ ಸೂಚನೆಯನ್ನು ಆರಂಭದಲ್ಲೇ ನೀಡಿರುತ್ತವೆ ಅಂತಾ. ಇಷ್ಟೆಲ್ಲಾ ಮೇಲಿಂದ ಮೇಲೆ ದಾಖಲೆ ಪುಸ್ತಕದಲ್ಲಿ ರುಜು ಮಾಡುತ್ತಿರುವ ಬ್ರಹ್ಮಚಾರಿ ಬಿಡಗಡೆಯ ನಂತರ ಎಂಥಾ ಇತಿಹಾಸ ಸೃಷ್ಟಿಸಬಲ್ಲ? ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ!!