ಶ್ರೀರಾಮಚಂದ್ರನ ಹಾಗೆ ಬದುಕಬೇಕು, ಹೆಣ್ಮಕ್ಕಳನ್ನು ಕಣ್ಣೆತ್ತಿಯೂ ನೋಡಬಾರದು. ಮದುವೆಗೆ ಮುಂಚೆ ಪ್ರೀತಿಸಬಾರದು. ಪ್ರೀತಿ ಮಾಡೋದಿದ್ದರೆ ಅದು ಮದುವೆಯ ನಂತರ ಮಾತ್ರ… ಇಂಥಾ ನಿಬಂಧನೆಗಳನ್ನು ಹಾಕಿಯೇ ಮಕ್ಕಳನ್ನು ಬೆಳೆಸುವವರಿದ್ದಾರೆ. ಎಷ್ಟೋ ಜನ ಮಕ್ಕಳು ಪೋಷಕರ ರೂಲ್ಸು ಮೀರದವರಂತೆ ತೋರ್ಪಡಿಸುತ್ತಲೇ ಮನಸ್ಸಲ್ಲಿ ಬೇರೆಯದ್ದೇ ಲೆಕ್ಕ ಹಾಕೋದೂ ಇದೆ. ಆದರೆ ಎಲ್ಲೋ ಕೆಲವರು ತಂದೆ ತಾಯಿ, ಅಜ್ಜಿ ತಾತ ಹೇಳಿದ್ದನ್ನೇ ಮನಸ್ಸಲ್ಲಿಟ್ಟುಕೊಂಡು ಅದನ್ನೇ ಶಿರಸಾವಹಿಸಿ ಪಾಲಿಸುವವರೂ ಇದ್ದಾರೆ. ದೇಹ ಮತ್ತು ಮನಸ್ಸಿನ ಸ್ವಾಭಾವಿಕ ಗುಣ ಲಕ್ಷಣಗಳಿಗೆ, ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಅಂಥವರು ಜಗತ್ತಿನ ಕಣ್ಣಿಗೆ ಅಸಹಜವಾಗಿ ಕಾಣುವಂತಾಗಿರುತ್ತದೆ.
ತನ್ನ ಮಗ ಮಾಡಬಾರದ್ದು ಮಾಡಿ, ಪರಸ್ತ್ರೀ ಹಿಂದೆ ಹೋಗಿ, ಸೊಸೆಯ ಸಾವಿಗೂ ಕಾರಣನಾಗಿರುತ್ತಾನೆ. ತನ್ನ ಮೊಮ್ಮಗ ಮಾತ್ರ ಆ ಹಾದಿ ಹಿಡಿಂiಬಾರದು ಅಂತಾ ಅಜ್ಜಿ ಬರೀ ಪುಣ್ಯಪುರುಷರ ಕಥೆಗಳನ್ನೇ ಹೇಳಿ ಬೆಳೆಸಿರುತ್ತಾಳೆ. ನಾನು ಶ್ರೀ ರಾಮಚಂದ್ರನಂತೆಯೇ ಜೀವಿಸುತ್ತೇನೆ ಅಂತಾ ತೀರಾ ಸಣ್ಣ ವಯಸ್ಸಿಗೇ ಹುಡುಗ ಕೂಡಾ ಆಣೆ ಮಾಡಿರುತ್ತಾನೆ. ಬೆನ್ನತ್ತಿ ಬಂದ ಹುಡುಗಿಯರನ್ನೂ ಎಡಗಾಲಲ್ಲಿ ಒದ್ದು ಮುನ್ನಡೆದಿರುತ್ತಾನೆ. ದೇಹಪರಿಸರ ಬದಲಾದಮೇಲೂ ಆತ ಹಳೇ ಗುಣವನ್ನೇ ಮುಂದುವರೆಸಿರುತ್ತಾನೆ. ಇಬ್ಬರು ಅಪ್ಪಾಪೋಲಿ ಸ್ನೇಹಿತರ ಸಹವಾಸ ಬಿಟ್ಟರೆ ಮಿಕ್ಕಂತೆ ಈತ ಥೇಟು ಶ್ರೀ ರಾಮಚಂದ್ರನ ತುಂಡು!
ಇವೆಲ್ಲದರ ನಡುವೆ ಮದುವೆಗಾಗಿ ಹೆಣ್ಣು ಹುಡುಕಾಟ, ಅವಸ್ತೆಗಳೆಲ್ಲಾ ಎದುರಾಗುತ್ತವೆ. ಈತನಿಗೆ ಎಲ್ಲ ರೀತಿಯಲ್ಲೂ ಸರಿಹೊಂದುವ ಯುವ ಬರಹಗಾರ್ತಿಯ ಪರಿಚಯವೂ ಬೆಳೆಯುತ್ತದೆ. ಸರ್ಕಾರಿ ಕೆಲಸ, ಕಾಸು, ಮನೆ, ಹೊದ್ದು ಮಲಗಿಸಿದ ಕಾರು ಎಲ್ಲವನ್ನೂ ಕೂಡಿಟ್ಟ ಮಾವ, ಸೀರಿಯಲ್ ಪ್ರಿಯೆ ಅತ್ತೆ, ಮುದ್ದುಮುದ್ದಾದ ಹೆಂಡತಿ ಎಲ್ಲವೂ ಫಾಸ್ಟಾಗೇ ದಕ್ಕಿಬಿಡುತ್ತದೆ. ಆದರೆ ಸಚ್ಚಾರಿತ್ರ್ಯವೇ ಸೈಡ್ ಎಫೆಕ್ಟಿನಂತೆ ಬಾಧೆ ಕೊಡಲು ಶುರು ಮಾಡುತ್ತದೆ. ನಲ್ಲಿ ತಿರುಗಿಸೋ ಮುಂಚೆಯೇ ನೀರು ತೊಟ್ಟಿಕ್ಕಿದಂತೆ ವೈವಾಹಿಕ ಬದುಕು ಸಡಿಲವಾಗಿಬಿಡುತ್ತದೆ!
ಸಾಮಾನ್ಯಕ್ಕೆ ಗಂಡುಕುಲ ಎದುರಿಸುವ ಸಹಜ ಮಾನಸಿಕ ಸಮಸ್ಯೆಯಿದು. ಏನಾಗಿಬಿಡುತ್ತೋ ಅನ್ನೋ ಭಯದಲ್ಲಿ ಅಥವಾ ಏನೇನೋ ಆಗಬೇಕೆನ್ನುವ ಅತಿಯಾದ ಬಯಕೆಯಲ್ಲಿ ಏನೇನೂ ಆಗದ ಪರಿಸ್ಥಿತಿಗೆ ಸಿಲುಕಿ ತೊಳಲಾಡುವ ಸಂದಿಗ್ಧತೆ. ಸಂಗಾತಿ ತನ್ನ ಬಗ್ಗೆ ಏನಂದುಕೊಂಡುಬಿಡುವಳೋ ಅನ್ನೋ ಕೀಳರಿಮೆ. ಅದರಿಂದ ಎದುರಾಗುವ ಖಿನ್ನತೆ… ಇವೆಲ್ಲಾ ಅಂಶಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡುವುದೆಂದರೆ ಸುಲಭದ ಮಾತಲ್ಲ. ಲೋಕದ ಕಣ್ಣಿಗೆ ತೀರಾ ಗಂಭೀರವಾದ ಸಮಸ್ಯೆ ಎನ್ನಿಸಿಕೊಂಡು, ಗಂಡಸರ ಮನೋಸ್ಥೈರ್ಯವನ್ನು ಮಣ್ಣುಪಾಲು ಮಾಡುವ ವಿಚಾರವನ್ನು ನಿರ್ದೇಶಕ ಚಂದ್ರಮೋಹನ್ ತಿಳಿ ಹಾಸ್ಯದ ಲೇಪನದೊಂದಿಗೆ ಅಚ್ಚುಕಟ್ಟಾಗಿ ರೂಪಿಸಿದ್ದಾರೆ.
ನೀನಾಸಂ ಸತೀಶ್ ಕಮರ್ಷಿಯಲ್, ಆಕ್ಷನ್, ಲವ್ ಸಿನಿಮಾಗಳ ಜೊತೆಜೊತೆಗೇ ಹಾಸ್ಯ ಪ್ರಧಾನ ಸಿನಿಮಾಗಳಲ್ಲೂ ನಟಿಸುತ್ತಾ ಬಂದವರು. ಅಲ್ಲದೆ, ಇಂಥದ್ದೇ ಇಮೇಜಿಗೆ ಜೋತು ಬಿದ್ದವರಲ್ಲ. ಈ ಕಾರಣದಿಂದಲೇ ಸತೀಶ್ ‘ಬ್ರಹ್ಮಚಾರಿಗೆ ಒಂದು ಹಿಡಿ ಹೆಚ್ಚು ಬಲ ತಂದುಕೊಟ್ಟಿದ್ದಾರೆ. ನಾಯಕಿಯರ ವಿಚಾರದಲ್ಲಿ ಅದಿತಿ ಕೂಡಾ ಇದೇ ಫಾರ್ಮುಲಾ ಕಾಯ್ದುಕೊಂಡುಬಂದವರು. ಪಾತ್ರ ಯಾವುದಾದರೂ ಸರಿ ಅದನ್ನು ತನ್ಮಯತೆಯಿಂದ ನಿಭಾಯಿಸುತ್ತಿರುವವರು. ಹೀಗಾಗಿ ಬ್ರಹ್ಮಚಾರಿ ಸಿನಿಮಾದ ಹೀರೋ ಹೀರೋಯಿನ್ ಪಾತ್ರಕ್ಕೆ ಇವರಿಬ್ಬರನ್ನು ಬಿಟ್ಟು ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಸತೀಶ್-ಅದಿತಿ ಕಾಂಬಿನೇಷನ್ನು ತೆರೆ ಮೇಲೆ ವರ್ಕೌಟ್ ಆಗಿದೆ. ಗಂಡುಮಕ್ಕಳ ಸಂಕಟವನ್ನು ಮತ್ತು ಹೆಣ್ಣಿನ ಬಯಕೆಯನ್ನು ಇವರಿಬ್ಬರು ಅಭಿವ್ಯಕ್ತಿಗೊಳಿಸಿರುವ ರೀತಿಯೇ ಚೆಂದ.
ಶಿವರಾಜ್ ಕೆ.ಆರ್. ಪೇಟೆ ಎಂದಿನಂತೆ ನಗಿಸಿದ್ದಾರೆ. ಯುವ ನಟ ಅಶೋಕ್ ಕಾಮಿಡಿ ಪಾತ್ರದಲ್ಲಿ ಇಷ್ಟು ಚೆಂದಗೆ ನಟಿಸುತ್ತಾರೆ ಅನ್ನೋದು ಬ್ರಹ್ಮಚಾರಿಯಲ್ಲಿ ಸಾಬೀತಾಗಿದೆ. ಇನ್ನು ಅಚ್ಯುತ್ ಕುಮಾರ್, ಪದ್ಮಜಾ, ದತ್ತಣ್ಣ ಸಲೀಸಾಗಿ ಪಾತ್ರ ನಿರ್ವಹಿಸಿದ್ದಾರೆ. ಅಕ್ಷತಾ ಮಾದಕತೆ ಪರಸಂಗವನ್ನು ಮೀರಿಸುತ್ತದೆ. ಒಂದೇ ಒಂದು ದೃಶ್ಯದಲ್ಲಿ ಬಂದುಹೋಗಿರುವ ನಿರ್ದೇಶಕ ಶಿವಮೂರ್ತಿ (ಶಿವತೇಜಸ್) ನಟನೆಯನ್ನು ಧಾರಾಳವಾಗಿ ಮುಂದುವರೆಸಬಹುದು. ಧರ್ಮ ವಿಶ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಹಿಡ್ಕಂಡು ಮುದ್ದು ಮಾಡುವಂತಿದೆ. ಹಿಡ್ಕ ಹಿಡ್ಕ ಹಾಡಿಗೆ ಮುರಳಿ ಹಾಕಿಸಿರುವ ಸ್ಟೆಪ್ಸು ಮಜವಾಗಿದೆ. ನವೀನ್ ಸಜ್ಜು ದನಿ ಕೂಡಾ ಪರ್ಫೆಕ್ಟು!
ಉದಯ್ ಮೆಹ್ತಾ ಮತ್ತು ನೀನಾಸಂ ಸತೀಶ್ ಜೋಡಿ ಲವ್ ಇನ್ ಮಂಡ್ಯ ನಂತರ ಬ್ರಹ್ಮಚಾರಿಯಲ್ಲೂ ಕಮಾಲ್ ಮಾಡಿದೆ. ಸಣ್ಣ ಸಮಸ್ಯೆಗಳನ್ನೇ ದೊಡ್ಡದು ಮಾಡಿ ಇವತ್ತಿನ ಪೀಳಿಗೆ ಬದುಕು ಕೆಡಿಸಿಕೊಳ್ಳುತ್ತಿದೆ. ಕಾರಣವಲ್ಲದ ಕಾರಣಗಳಿಗೆ ಸಂಬಂಧಗಳು ಶಿಥಿಲವಾಗುತ್ತಿವೆ. ಇಂಥ ಸಂದರ್ಭದಲ್ಲಿ ಬ್ರಹ್ಮಚಾರಿ ಅಗತ್ಯದ ಸಿನಿಮಾ ಕೂಡಾ ಹೌದು. ಪ್ರತಿಯೊಬ್ಬರೂ ನೋಡಿ ಎಂಜಾಯ್ ಮಾಡಲೂಬಹುದು!