ಪ್ರತಿಭಾವಂತ ಹೀರೋ, ಹೀರೋಯಿನ್, ಟ್ಯಾಲೆಂಟೆಡ್ ಡೈರಕ್ಟರ್ ಸಂಗೀತ ನಿರ್ದೇಶಕ ಜೊತೆಗೆ ಅಭಿರುಚಿ ಹೊಂದಿರುವ ನಿರ್ಮಾಪಕ… ಹೀಗೆ ಎಲ್ಲರೂ ಒಟ್ಟಿಗೇ ಸೇರಿದರೆ ಏನಾಗಬಹುದು? ಅನ್ನೋ ಪ್ರಶ್ನೆಗೆ ‘ಬ್ರಹ್ಮಚಾರಿಯಂಥಾ ಸಿನಿಮಾ ರೂಪುಗೊಳ್ಳಬಹುದು ಅನ್ನೋ ಉತ್ತರ ಮಾತ್ರ ಸರಿಹೊಂದಬಲ್ಲದು!
ನಿಜ ನೀನಾಸಂ ಸತೀಶ್ ಯಾವತ್ತು ತೆರೆ ಮೇಲೆ ಕಾಣಿಸಿಕೊಂಡರೋ ಆವತ್ತೇ ಅವರ ನಟನೆಯ ತಾಕತ್ತು ಸಾಬೀತಾಗಿ ಹೋಗಿದೆ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅದಿತಿ ಪ್ರಭುದೇವ ಧೈರ್ಯ ಸಿನಿಮಾ ಮಾಡಿದಾಗಲೇ ‘ಈಕೆ ಕನ್ನಡ ಚಿತ್ರರಂಗಕ್ಕೆ ದಕ್ಕಿದ ಕೊಡುಗೆ ಅಂತಾ ಜನ ನಿರ್ಧರಿಸಿದ್ದಾರೆ. ಇನ್ನು ನಿರ್ದೇಶಕ ಚಂದ್ರಮೋಹನ್ ಅವರು ಮೊದಲ ಸಲ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನ ಮಾಡಿ ನಟಿಸಿದ್ದ ಏಕಾಂಗಿ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಚಂದ್ರ ಮೋಹನ್ ಆ ನಂತರದಲ್ಲಿ ಹಲವಾರು ನಿರ್ದೇಶಕರ ಜೊತೆ ಕೆಲಸ ಮಾಡಿದ್ದವರು. ನಂತರ ಬಾಂಬೆ ಮಿಠಾಯಿ ಸಿನಿಮಾದ ಮೂಲಕ ನಿರ್ದೇಶನ ಆರಂಭಿಸಿ, ‘ಡಬಲ್ ಎಂಜಿನ್ ಅನ್ನು ಗೆಲ್ಲಿಸಿ ಈಗ ‘ಬ್ರಹ್ಮಚಾರಿಯನ್ನು ರೆಡಿ ಮಾಡಿದ್ದಾರೆ. ಇನ್ನು ನಿರ್ಮಾಪಕ ಉದಯ್ ಮೆಹ್ತಾ ಮುಟ್ಟಿದ ಸಿನಿಮಾಗಳೆಲ್ಲಾ ಚಿನ್ನವಾಗಿವೆ.
ಸದ್ಯ ಕೇಳಿಬರುತ್ತಿರುವ ವಿಚಾರವೆಂದರೆ, ಬ್ರಹ್ಮಚಾರಿ ನವೆಂಬರ್ 15ಕ್ಕೆ ತೆರೆಗೆ ಅಪ್ಪಳಿಸಲಿದ್ದಾನೆ ಅನ್ನೋದು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡಿರುವ ಬ್ರಹ್ಮಚಾರಿಯನ್ನು ನವೆಂಬರ್ 15ಕ್ಕೆ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡವಿನ್ನೂ ಮಾಹಿತಿ ಹೊರಹಾಕಿಲ್ಲ.
ಯು ಕೆ ಮೆಹ್ತ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಬಾಂಬೆ ಮಿಠಾಯಿ‘ ಹಾಗೂ ‘ಡಬ್ಬಲ್ ಇಂಜಿನ್‘ ಹಾಗೂ ಚಿತ್ರಗಳನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ. ಕಾಮಿಡಿ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ರವಿಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ, ಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನೀನಾಸಂ ಸಂತೀಶ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ, ಅಶೋಕ್, ಅಕ್ಷತ, ಅಚ್ಯುತಕುಮಾರ್, ಪದ್ಮಜಾರಾವ್, ದತ್ತಣ, ಬಿರಾದಾರ್, ಗಿರಿಜಾ ಲೋಕೇಶ್ ಮುಂತಾದವರ ತಾರಾಬಳಗದ ಜೊತೆಗೆ ‘ಮಜಾಭಾರತ‘ದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.