ರಥಾವರ, ತಾರಕಾಸುರ ಸಿನಿಮಾಗಳ ಮೂಲಕ ಸಂಗೀತ ನಿರ್ದೇಶಕರಾಗಿ ಖಾತೆ ತೆರೆದವರು ಧರ್ಮ ವಿಶ್. ಸದ್ಯ ಬ್ರಹ್ಮಚಾರಿ, ಕ್ಷತ್ರಿಯ ಸೇರಿದಂತೆ ಇನ್ನೂ ಕೆಲವಾರು ಸಿನಿಮಾಗಳಿಗೆ ಧರ್ಮ ವಿಶ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದಲ್ಲಿ, ಚಿರಂಜೀವಿ ಸರ್ಜಾ ನಟಿಸಿದ್ದ ಸಿನಿಮಾ ಸಿಂಗ. ಈ ಚಿತ್ರಕ್ಕೂ ಧರ್ಮ ವಿಶ್ ಅವರೇ ಸಂಗೀತ ಸಂಯೋಜಿಸಿದ್ದರು. ಸಿಂಗ ಚಿತ್ರ ‘ಶ್ಯಾನೆ ಟಾಪಾಗವ್ಳೆ ಹಾಡು ಇವತ್ತಿಗೂ ಹಿಟ್ ಲಿಸ್ಟಿನಲ್ಲಿ ಟಾಪಲ್ಲೇ ಇದೆ. ಸಿನಿಮಾ ಬಿಡುಗಡೆಯ ನಂತರವೂ ಇನ್ನೂ ಅದೇ ಕ್ರೇಜ಼ು ಉಳಿಸಿಕೊಂಡಿರೋದು ಶ್ಯಾನೆ ಟಾಪಾಗವ್ಳೆ ಹಾಡಿನ ಸಂಗೀತದ ಪವರ್ರು. ಈಗ ಉದಯ್ ಕೆ. ಮೆಹ್ತಾ ಅವರೇ ನಿರ್ಮಿಸಿ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ನಟಿಸುತ್ತಿರುವ ‘ಬ್ರಹ್ಮಚಾರಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.
ಧರ್ಮ ವಿಶ್ ಸಂಗೀತ ನೀಡಿರುವ ‘ಬ್ರಹ್ಮಚಾರಿ ಚಿತ್ರದ ‘ಹಿಡ್ಕೊ ಹಿಡ್ಕೊ ಹಿಡ್ಕೊ ವಸಿ ತಡ್ಕೊ ತಡ್ಕೊ ಎನ್ನುವ ಹಾಡು ಈಗಾಗಲೇ ರಿಲೀಸಾಗಿದ್ದು ಶ್ಯಾನೆ ಟಾಪಾಗವ್ಳೆಯನ್ನು ಮೀರಿಸುವಂತೆ ಸೌಂಡು ಮಾಡುತ್ತಿದೆ. ಈ ಹಾಡು ಕೂಡಾ ಡಬ್ ಸ್ಮ್ಯಾಶ್ ಮಾಡೋರಿಗೆ ಹಾಟ್ ಫೇವರಿಟ್ ಆಗಿದೆ. ಶ್ಯಾನೆ ಟಾಪಾಗವ್ಳೆ ಮತ್ತು ಈಗ ಸದ್ದು ಮಾಡುತ್ತಿರುವ ಹಿಡ್ಕೊ ಹಿಡ್ಕೊ – ಎರಡೂ ಹಾಡುಗಳಲ್ಲಿ ಅದಿತಿಯೇ ನಾಯಕಿಯಾಗಿ ಕಾಣಿಸಿರೋದು ವಿಶೇಷ. ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಕೊರಿಯೋಗ್ರಫಿ ಮಾಡಿದ್ದಾರೆ. ನೀನಾಸಂ ಸತೀಶ್ ಮತ್ತು ನೃತ್ಯ ನಿರ್ದೇಶಕ ಮುರಳಿ ಇಬ್ಬರದ್ದೂ ಹಿಟ್ ಕಾಂಬಿನೇಶನ್. ಡ್ರಾಮಾ ಚಿತ್ರದ ತುಂಡ್ ಹೈಕ್ಳ ಸಾವಾಸ, ಲೂಸಿಯಾದ ಜಮ್ಮ ಜಮ್ಮ, ಲವ್ ಇನ್ ಮಂಡ್ಯ ಮತ್ತು ಅಯೋಗ್ಯ ಸೇರಿದಂತೆ ಸತೀಶ್ ಅವರ ಬಹುತೇಕ ಹಿಟ್ ಹಾಡುಗಳಿಗೆ ಮುರಳಿ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ.
ಇದು ಚಂದ್ರಮೋಹನ್ ನಿರ್ದೇಶನದ ಸಿನಿಮಾ. ಈ ಹಿಂದೆ ಬಾಂಬೆ ಮಿಠಾಯ್ ಮತ್ತು ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ‘ಬ್ರಹ್ಮಚಾರಿಯನ್ನು ಬಲು ಪ್ರೀತಿಯಿಂದ ರೂಪಿಸಿದ್ದಾರೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರ ಘಜಿನಿ ಚಿತ್ರದಿಂದ ಹಿಡಿದು ತುಪಾಕಿ ತನಕ ಸರಿ ಸುಮಾರು ಇಪ್ಪತ್ತು ಸಿನಿಮಾಗಳಿಗೆ ಧರ್ಮ ವಿಶ್ ಅವರು ಕೀಬೋರ್ಡ್ವಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದಲ್ಲದೇ ಕನ್ನಡ ಸಾಕಷ್ಟು ಸ್ಟಾರ್ ಸಂಗೀತ ನಿರ್ದೇಶಕರ ಸಿನಿಮಾಗಳಿಗೂ ಕೀ ಬೋರ್ಡ್ ಅರೇಂಜ್ಮೆಂಟ್ ಕೆಲಸ ನಿರ್ವಹಿರುವವರು ಧರ್ಮ ವಿಶ್. ಸದ್ಯ ಕನ್ನಡದಲ್ಲಿ ಹೆಸರು ಮಾಡಿರುವ ಬಹುತೇಕ ಸಂಗೀತ ನಿರ್ದೇಶಕರು ಆರಂಭದಲ್ಲಿ ಕೀಬೋರ್ಡ್ ಪ್ಲೇಯರುಗಳಾಗಿ ಕೆಲಸ ಮಾಡಿದ್ದವರು. ಧರ್ಮ ವಿಶ್ ಕೂಡಾ ಅದೇ ಹಾದಿಯಲ್ಲಿ ಸಾಗಿ ಹಂತ ಹಂತವಾಗಿ ತಮ್ಮ ಇರುವಿಕೆಯನ್ನು ತೋರುತ್ತಿದ್ದಾರೆ.
ಈ ಹಿಂದೆ ಸಾಕಷ್ಟು ಹಿಂದಿ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದ ಧರ್ಮವಿಶ್ ತಿಗ್ಮಾನ್ಷು ಧೂಲಿಯ ನಿರ್ದೇಶನದ ‘ರಾಗ್ ದೇಶ್ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನೂ ನೀಡಿದ್ದರು. ಮೂಲತಃ ಕನ್ನಡಿಗರೂ, ಬೆಂಗಳೂರಿನವರೂ ಆದ ಧರ್ಮ ವಿಶ್ ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ವಿ. ಮನೋಹರ್ ಅವರ ಸಿನಿಮಾಗಳಲ್ಲಿ ಆರಂಭಿಸಿ ಕನ್ನಡದ ಬಹುತೇಕ ಎಲ್ಲ ಸಂಗೀತ ನಿರ್ದೇಶಕರ ಹಾಡುಗಳಿಗೆ ಧರ್ಮ ವಿಶ್ ಕೀಬೋರ್ಡ್ ಪ್ಲೇಯರ್ ಆಗಿ ಮತ್ತು ಮ್ಯೂಸಿಕ್ ಅರೇಂಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.