ಹಿರಿಯ ನಟ ಸದಾಶಿವ ಬ್ರಹ್ಮಾವರ್ ಬ್ರಹ್ಮಾವರ್ ನಿಧನ ಹೊಂದಿದ್ದಾರೆ. ಮೂರು ತಲೆಮಾರುಗಳ ನಟರೊಂದಿಗೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದ, ಆರುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾ ಕಾಡುವಂಥಾ ಪಾತ್ರಗಳನ್ನು ನಿರ್ವಹಿಸಿದ್ದ ಅವರು ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದ್ದಾರೆ.
ವಯಸ್ಸು ಬಳಲಿಸಿದರೂ ಬಣ್ಣದ ನಂಟು ಕಳೆದುಕೊಳ್ಳದೆ ಸಕ್ರಿಯರಾಗಿದ್ದವರು ಸದಾಶಿವ ಬ್ರಹ್ಮಾವರ. ಡಾ ರಾಜ್ ಕುಮಾರ್ ಅವರ ಚಿತ್ರಗಳಿಂದ ಮೊದಲ್ಗೊಂಡಿ ಕಿಚ್ಚಾ ಸುದೀಪ್ ಅವರ ಸ್ವಾತಿ ಮುತ್ತು ಚಿತ್ರ ಸೇರಿದಂತೆ ಮೂರು ತಲೆಮಾರುಗಳ ನಟರ ಜೊತೆ ನಟಿಸಿದ್ದ ಹೆಗ್ಗಳಿಕೆ ಸದಾಶಿವರದ್ದು. ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ಆ ಮೂಲಕವೇ ಮನೆ ಮಾತಾಗಿದ್ದ ಅವರ ಕಡೆಗಾಲದ ಬದುಕು ಕಣ್ಣೀರಿನಲ್ಲಿ ಕಳೆದು ಹೋಗಿತ್ತೆಂಬುದು ಮಾತ್ರ ನಿಜವಾದ ದುರಂತ.
ಸದಾಶಿವ ಬ್ರಹ್ಮಾವರ್ ಸ್ವಾಭಿಮಾನಿ. ಆದರೆ ಇಳೀ ವಯಸ್ಸಿನಲ್ಲಿ ಕೈ ಕಾಲು ಸೋತ ಘಳಿಗೆಯಲ್ಲಿ ಯಾರು ಆಸರೆಯಾಗಬೇಕಿತ್ತೋ ಅಂಥಾ ಮಕ್ಕಳೇ ಕೈ ಬಿಟ್ಟಿದ್ದರು. ಅತ್ತ ವಯೋ ಸಹಜವಾಗಿ ಅಂಟಿಕೊಂಡಿದ್ದ ಮರೆವಿನ ಕಾಯಿಲೆ. ಇತ್ತ ಯಾವ ಕೆಲಸ ಮಾಡಲೂ ಕಸುವಿಲ್ಲದ ಕಾಲದಲ್ಲಿ ಹೆತ್ತ ಮಕ್ಕಳೇ ಕೈ ಬಿಟ್ಟ ಕರುಣಾ ಜನಕ ಸ್ಥಿತಿ. ಆದರೆ ಆ ಹಿರಿಯ ಜೀವ ಯಾರ ಮುಂದೆಯೂ ಕೈಯೊಡ್ಡಲಿಲ್ಲ. ಕಷ್ಟವನ್ನೂ ಹೇಳಿಕೊಳ್ಳಲಿಲ್ಲ.
ಸದಾಶಿವ ಬ್ರಹ್ಮಾವರ ಅವರ ಕರುಣಾಕಥೆ ಜಾಹೀರಾಗಿದ್ದು ವರ್ಷಗಳ ಹಿಂದೆ. ಅವರು ಮನೆ ಬಿಟ್ಟು ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ. ಕೈಯಲ್ಲಿ ಬಿಡಿಗಾಸೂ ಇಲ್ಲದೆ ಓಡಾಡುತ್ತಿದ್ದ ಈ ಹಿರಿಯ ನಟನನ್ನು ಸಾರ್ವಜನಿಕರೇ ಗುರುತು ಹಿಡಿದಿದ್ದರು. ಈ ಬಗ್ಗೆ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು. ಆ ಬಳಿಕ ಕಿಚ್ಚಾ ಸುದೀಪ್ ಮುಂತಾದ ನಟರೂ ಇವರ ನೆರವಿಗೆ ಬಂದಿದ್ದರು.
ಆದರೆ ಕಡೆಗಾಲದಲ್ಲಿ ಬಂದೊದಗಿದ ಸಂಕಷ್ಟ ಅವರನ್ನು ಹೈರಾಣು ಮಾಡಿತ್ತು. ದೊಡ್ಡ ಹೆಸರು ಮಾಡಿದ್ದ ಸದಾಶಿವವ ಬ್ರಹ್ಮಾವರ ಅವರ ಜೊತೆ ಕಡೆಗಾಲದಲ್ಲಿದ್ದದ್ದು ಕಣ್ಣೀರು ಮಾತ್ರ. ಆ ಕೊರಗು ಮತ್ತು ವಯೋಸಹಜ ಕಾಯಿಲೆಯಿಂದ ನರಕ ಅನುಭವಿಸಿದ್ದ ಅವರಿಗೆ ಕಡೆಗೂ ಮುಕ್ತಿ ಸಿಕ್ಕಿದೆ.
#