ಚಿಕ್ಕಬಳ್ಳಾಪುರದ ರಂಗಸ್ಥಳಂ ದೇವಸ್ಥಾನದ ಬಳಿ ನೂರಾರು ಜನ ನೆರೆದಿದ್ದಾರೆ. ಮದುವೆಯಾಗಲು ಬಂದ ಉಪೇಂದ್ರ ಮತ್ತು ಸೋನಾಲ್ ಅವರನ್ನು ತಡೆಯಲೋ ಏನೋ ಎನ್ನುವಂತೆ ನಲವತ್ತೈವತ್ತು ಮಂದಿ ಧಾಂಡಿಗ ರೌಡಿಗಳು ಅಡ್ಡಗಟ್ಟಿಕೊಂಡಿದ್ದಾರೆ. ಹಾಗೆ ಅಡ್ಡಿ ಪಡಿಸಲು ಬಂದವರನ್ನು ರಿಯಲ್ ಸ್ಟಾರ್ ಉಪ್ಪಿ ಮಾರಾಮಾರಿ ಬಡಿದೆಸೆಯುತ್ತಿದ್ದಾರೆ…
ಇದು ಬುದ್ಧಿವಂತ-೨ ಚಿತ್ರದ ಚಿತ್ರೀಕರಣದಲ್ಲಿ ಕಂಡುಬಂದ ದೃಶ್ಯ!
ಟಿ.ಆರ್. ಚಂದ್ರಶೇಖರ್ ಅವರ ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ನ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ಹೆಚ್ಚು ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಬುದ್ಧಿವಂತ-2.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಎಂ.ಜಯರಾಮ್ ‘ಬುದ್ಧಿವಂತ-2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಶಿವಮೊಗ್ಗ ಕಾರಾಗೃಹದಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದ್ದ ಚಿತ್ರತಂಡ ಈಗ ಚಿಕ್ಕಬಳ್ಳಾಪುರದಲ್ಲಿ ನೆಲೆಸಿದೆ. ನೂರು ಜನ ಜೂನಿಯರ್ಗಳು 40ಮಂದಿ ಫೈಟರ್ಸ್ ಪಾಲ್ಗೊಂಡಿರುವ ಪ್ರೀ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನೆರವೇರುತ್ತಿದೆ. ಸಿನಿಮಾಗೆ ಬೇಕಿರುವ ಸಕಲವನ್ನೂ ಒದಗಿಸುತ್ತಿರುವ ನಿರ್ಮಾಪಕ ಚಂದ್ರಶೇಖರ್ ಅವರ ಕಾರಣದಿಂದ ನಿರ್ದೇಶಕ ಜಯರಾಮ್ ನಿರಾಂತಕವಾಗಿ ಸಿನಿಮಾ ರೂಪಿಸುತ್ತಿದ್ದಾರೆ.