ಬುದ್ದಿವಂತ-೨ ಸಿನಿಮಾದ ನಿರ್ದೇಶಕರು ಬದಲಾಗಿರೋ ವಿಷಯ ಜಗತ್ತಿಗೇ ಗೊತ್ತಾಗಿದೆ. ಆದರೆ ಈ ವಿಚಾರದ ಸುತ್ತ ಇಲ್ಲಸಲ್ಲದ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಹಾಗಾದರೆ, ನಿಜಕ್ಕೂ ನಡೆದಿದ್ದಾರೂ ಏನು? ಈ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾದರೂ ಯಾಕೆ? ಇಲ್ಲಿದೆ ನೋಡಿ ವಾಸ್ತವದ ವಿವರ…
ಬುದ್ಧಿವಂತ-೨ ಪೂಜೆ ಮುಗಿಸಿಕೊಂಡು, ಶಿವಮೊಗ್ಗ ಜೈಲು ಸೇರಿದಂತೆ ಇನ್ನೂ ಒಂದಷ್ಟು ಕಡೆಗಳಲ್ಲಿ ಶೂಟಿಂಗ್ ಸಹಾ ನಡೆಯಿತು. ಈ ನಡುವೆ ಚಿತ್ರದ ಕತೆ, ಚಿತ್ರಕತೆಯ ವಿಚಾರವಾಗಿ ಒಂದಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಮೊದಲಿದ್ದ ನಿರ್ದೇಶಕ ಮೌರ್ಯರನ್ನು ಈ ಕುರಿತು ಕೇಳಿದಾಗಲೆಲ್ಲಾ ‘ಡೌಟ್ ಕ್ಲಿಯರ್ ಮಾಡ್ತೀನಿ’ ಅಂತಲೇ ಹೇಳುತ್ತಾ ಬರುತ್ತಿದ್ದರು. ನಿರ್ಮಾಪಕರು ಮತ್ತೆ ಆ ವಿಚಾರವಾಗಿ ಪ್ರಸ್ತಾಪಿಸಿದರೂ ‘ಉಪ್ಪಿ ಸರ್ ಹತ್ರಾ ಎಲ್ಲವನ್ನೂ ವಿವರಿಸಿದ್ದೀನಿ. ಅವರು ಒಪ್ಪಿದ್ದಾರೆ’ ಎಂದುಬಿಟ್ಟಿದ್ದರಂತೆ. ಕಡೆಗೆ ಉಪ್ಪಿಯವರ ಬಳಿ ವಿಚಾರಿಸಲಾಗಿ ‘ನನ್ನ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ’ ಎಂಬ ಪ್ರತಿಕ್ರಿಯೆ ಬಂದಿತ್ತು. ಕಡೆಗೊಂದು ದಿನ ಈ ವಿಚಾರವಾಗಿ ನೇರ ಚರ್ಚೆಗಳೂ ನಡೆದವು. ಉಪೇಂದ್ರ ಅವರು ನನಗಿರುವ ಅನುಮಾನಗಳು ಕ್ಲಿಯರ್ ಆಗಲೇಬೇಕು ಎಂದಿದ್ದರು. ನಿರ್ದೇಶಕ ಮೌರ್ಯ ಕೂಡಾ ‘ಆಯ್ತು ಒಂದಿಷ್ಟು ಬದಲಾವಣೆಗಳನ್ನು ಮಾಡುತ್ತೇನೆ’ ಎಂದು ಹೇಳಿ ಉಪೇಂದ್ರರೊಂದಿಗೆ ಚರ್ಚಿಸಿ ಸಾಕಷ್ಟು ತಿದ್ದುಪಡಿಯನ್ನೂ ಮಾಡಿದ್ದರು. ಇನ್ನೇನು ಚಿತ್ರೀಕರಣಕ್ಕೆ ತಯಾರಾಗಬೇಕು ಅನ್ನುವಷ್ಟರಲ್ಲಿ ಮತ್ತೆ ಬಂದು ‘ಹಳೇ ಕತೆಯನ್ನು ಮಾಡೋದಿದ್ದರೆ ನಾನು ನಿರ್ದೇಶನವನ್ನು ಮುಂದುವರೆಸುತ್ತೀನಿ. ಬದಲಾವಣೆಗಳ ಪ್ರಕಾರವಾದರೆ ನಾನು ಈ ಸಿನಿಮಾವನ್ನು ಮಾಡೋದಿಲ್ಲ’ ಎಂದಿದ್ದರು. ಹೇಗೂ ಸಿನಿಮಾ ಶುರುವಾಗಿಬಿಟ್ಟಿದೆ ನನ್ನ ಹಠವೇ ಗೆಲ್ಲುತ್ತದೆ ಅನ್ನೋ ಅಭಿಪ್ರಾಯ ನಿರ್ದೇಶಕರದ್ದಾಗಿತ್ತೋ ಏನೋ ಗೊತ್ತಿಲ್ಲ.
ಯಾವಾಗ ನನ್ನ ಮಾತೇ ನಡೀಬೇಕು ಅಂತಾ ಡೈರೆಕ್ಟರ್ರು ಪಟ್ಟು ಹಿಡಿದು ಕುಂತರೋ ಆಗ ನಿರ್ಮಾಪಕ ಚಂದ್ರಶೇಖರ್, ನಾಯಕನಟ ಉಪೇಂದ್ರ ಎಲ್ಲರೂ ಸೇರಿ ಬೇರೆ ತೀರ್ಮಾನಕ್ಕೆ ಬರಲೇಬೇಕಾಯಿತು. “ನಿರ್ದೇಶಕರು ಹೇಳಿದಂತೆ ಹಳೇ ಕತೆಯನ್ನೇ ಮುಂದುವರೆಸುವುದಾದರೆ ನನ್ನ ಅಭ್ಯಂತರವೇನೂ ಇಲ್ಲ. ನನ್ನ ಪಾಡಿಗೆ ಬಂದು ನಟಿಸಿ ಹೋಗುತ್ತೀನಿ. ನಾಳೆ ದಿನ ಸಿನಿಮಾ ಮುಗಿದ ಮೇಲೆ ನನ್ನನ್ನು ಯಾವುದಕ್ಕೂ ಜವಾಬ್ದಾರನನ್ನಾಗಿ ಮಾಡಬೇಡಿ” ಅಂತಾ ಉಪ್ಪಿ ಕಟ್ಟುನಿಟ್ಟಾಗಿ ಹೇಳಿಬಿಟ್ಟರು. ಎಷ್ಟೇ ಆದರೂ ಉಪೇಂದ್ರ ಅನುಭವೀ ತಂತ್ರಜ್ಞ, ನಟ. ಹೊಸ ತಲೆಮಾರಿನ ನಿರ್ದೇಶಕರಿಗೇ ನಿರ್ದೇಶಕವ ಎನಿಸಿಕೊಂಡಿರುವವರು. ಎಷ್ಟೋ ಜನ ಯುವ ನಿರ್ದೇಶಕರು ಹುಟ್ಟಿಕೊಳ್ಳಲು ಕಾರಣರಾದವರು. ಕನ್ನಡ ಚಿತ್ರರಂಗಕ್ಕೆ ಹೊಸತನವನ್ನು ಪರಿಚಯಿಸಿದವರು. ಹೀಗಿರುವಾಗ, ಉಪ್ಪಿಯ ಮಾತನ್ನು ತೆಗೆದುಹಾಕಿ ನಿರ್ದೇಶಕರ ಹಠಕ್ಕೆ ಮಣಿಯುವ ಮನಸ್ಸು ನಿರ್ಮಾಪಕರಿಗೂ ಇರಲಿಲ್ಲ. ಅದೂ ಅಲ್ಲದೆ, ಅಷ್ಟರಲ್ಲಾಗಲೇ ತಂತ್ರಜ್ಞರು ಕಲಾವಿದರಿಗೆಲ್ಲಾ ಅಡ್ವಾನ್ಸ್ ಕೂಡಾ ಕೊಟ್ಟಾಗಿತ್ತು. ಇನ್ನು ವಿಧಿಯೇ ಇಲ್ಲ ಎನ್ನುವಾಗ ಚಿತ್ರತಂಡದ ಎಲ್ಲರೂ ಸೇರಿ ನಿರ್ದೇಶಕರನ್ನು ಬದಲಿಸುವುದೇ ಒಳ್ಳೇದು ಅನ್ನೋ ತೀರ್ಮಾನಕ್ಕೆ ಬಂದಿದ್ದರು. ಆಗ ಉಪೇಂದ್ರ ಅವರೊಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದ ಜಯರಾಮ್ ಅವರನ್ನು ಕರೆತಂದು ಡೈರೆಕ್ಟರ್ ಸೀಟಿನಲ್ಲಿ ಕೂರಿಸಲಾಯಿತು. ಒಲ್ಲದ ಗಂಡನ ಜೊತೆ ಬದುಕೋದಕ್ಕಿಂತಾ ಬಿಟ್ಟು ನಡೆಯೋದೇ ವಾಸಿ ಎನ್ನುವಂತೆ ಮೊದಲ ನಿರ್ದೇಶಕರನ್ನು ಕೈಬಿಟ್ಟಮೇಲೆ ಈಗ ಎಲ್ಲವೂ ಅಂದುಕೊಂಡಂತೇ ಸಾಗುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ.
ಇದು ನಿಜಕ್ಕೂ ‘ಬುದ್ಧಿವಂತ’ ನಡೆ, ಈಗ ಚಿತ್ರೀಕರಣಗೊಳ್ಳಲಿರುವ ಚಿತ್ರ ಸುಸೂತ್ರವಾಗಿ ಕೆಲಸ ಮುಗಿಸಿಕೊಳ್ಳುವಂತಾಗಲಿ…