bullet prakash

ತಮ್ಮ ಕಾಮಿಡಿ ನಟನೆಯಿಂದಲೇ ಅಗಣಿತ ಅಭಿಮಾನಿಗಳನ್ನು ಹೊಂದಿದ್ದವರು ಬುಲೆಟ್ ಪ್ರಕಾಶ್. ಇನ್ನೂ ಸಾಕಷ್ಟು ಕಾಲ ಬದುಕಿಬಾಳಬೇಕಿದ್ದ ಪ್ರಕಾಶ್ ಅನಾರೋಗ್ಯದ ಕಾರಣಕ್ಕೆ ಜೀವ ತೊರೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಇವರ ನಿರ್ಗಮನದ ನೋವು ಸಹಿಸುವ ಶಕ್ತಿ ಅವರ ಮನೆಯವರು ಮತ್ತು ಅಭಿಮಾನಿಗಳಿಗೆ ಸಿಗುವಂತಾಗಲಿ…

ಒಂದು ಕಾಲಕ್ಕೆ ಕಾಟನ್ ಪೇಟೆಯ ಗಲ್ಲಿಗಳಲ್ಲಿ ಪೋಲಿ ಅಲೆದುಕೊಂಡಿದ್ದ ಪ್ರಕಾಶ್ ಬುಲೆಟ್ ಪ್ರಕಾಶ್ ಅಂತಾ ಮಾರ್ಪಾಟು ಹೊಂದಿದ್ದರ ಹಿಂದೆ ಸಾಕಷ್ಟು ಕಥೆಗಳಿವೆ. ಇವರ ತಂದೆ ಆರಂಭದಲ್ಲಿ ಬಿಟಿಎಸ್ ಕೆಲಸದಲ್ಲಿದ್ದರಂತೆ. ಅಲ್ಲಿ ಕೆಲಸದಿಂದ ತೆಗೆದ ಮೇಲೆ ಆಟೋ ಓಡಿಸಿಕೊಂಡು, ನಂತರ ರಿಯಲ್ ಎಸ್ಟೇಟ್ ಉದ್ಯೋಗ ಮಾಡಿಕೊಂಡು ಮಕ್ಕಳನ್ನು ಸಾಕಿದ್ದರಂತೆ. ಇವರ ತಾಯಿ ಗೌರಮ್ಮ ಕಾಟನ್ ಪೇಟೆ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು.

ಸಣ್ಣವನಿದ್ದಾಗ ಸರಿಯಾಗಿ ಓದೋದಿಲ್ಲ ಅನ್ನೋ ಕಾರಣಕ್ಕೆ ಮಂಡ್ಯ ಬಳಿಯ ಹಾಸ್ಟೆಲ್ಲಿಗೆ ಪ್ರಕಾಶನನ್ನು ಸೇರಿದ್ದರು. ನಂತರ ಬೆಂಗಳೂರಿಗೆ ಬಂದಮೇಲೆ ಕಲಾ ವಿಭಾಗದಲ್ಲಿ ಓದಿ ಪೊಲೀಸ್ ಆಗಬೇಕು ಅನ್ನೋದು ಪ್ರಕಾಶ್ ಬಯಕೆಯಾಗಿತ್ತು. ಆದರೆ, ಅವರ ತಂದೆಯ ಒತ್ತಾಸೆಯ ಮೇರೆಗೆ ಡಿಪ್ಲೊಮಾ ಕೋರ್ಸಿಗೆ ಸೇರಿದ್ದರು. ಅಲ್ಲಿ ಒಂದು ವರ್ಷ ಮುಗಿದಿತ್ತು. ಬರೆದಿದ್ದ ಪರೀಕ್ಷೆಯಲ್ಲಿ ಹದಿಮೂರಕ್ಕೆ ಹದಿಮೂರರಲ್ಲೂ ಪ್ರಕಾಶ್ ಫೇಲಾಗಿದ್ದರು. ನಿಮ್ಮ ಮಗನಿಂದ ಕಾಲೇಜು ಕೆಡುತ್ತಿದೆ ಅಂತಾ ಪ್ರಿನ್ಸಿಪಾಲರು ಟಿಸಿ ಕೊಟ್ಟು ಕಳಿಸಿದ್ದರು. ಈ ನಡುವೆ ೧೯೯೪ರಲ್ಲಿ ಜೀವರಾಜ್ ಆಳ್ವಾ ಚಿಕ್ಕಪೇಟೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಎಲೆಕ್ಷನ್ ಹೆಸರಿನಲ್ಲಿ ಒಂದಷ್ಟು ದಿನ ಓಡಾಡಿಕೊಂಡು ಕಾಲ ಕಳೆದಿದ್ದರು ಪ್ರಕಾಶ್. ಆ ನಂತರ ಎನ್.ಜಿ.ಎಫ್ ಫ್ಯಾಕ್ಟರಿಯಲ್ಲಿ ಸಣ್ಣದೊಂದು ಕೆಲಸ ಸಿಕ್ಕಿತ್ತು. ಅದು ಜೆಲ್ಲಿಕಲ್ಲುಗಳನ್ನು ತಳ್ಳುಗಾಡಿಯಲ್ಲಿ ತುಂಬಿ ಸಾಗಿಸುವ ಕಾಯಕ. ಪೇಟೆ ಬೀದಿಯಲ್ಲಿ ಅಲೆದಾಡಿಕೊಂಡು, ಬಿರಿಯಾನಿ, ಎಣ್ಣೆ ಸಮಾರಾಧನೆಯಲ್ಲಿ ತೊಡಗಿದ್ದ ಜೀವ ಹೀಗೆ ಮೈ ಬಗ್ಗಿ ದುಡಿಯೋದಾದರೂ ಎಲ್ಲಿ? ನೆಟ್ಟಗೆ ಕೆಲಸಕ್ಕೆ ಹೋಗದೇ ಅಲ್ಲಿಂದಲೂ ಹೊರಬಂದಿದ್ದರು. ಅದೇ ಹೊತ್ತಿಗೆ ಪುಟ್ಮಲ್ಲಿ ಚಿತ್ರ ಸೆಟ್ಟೇರುತ್ತಿತ್ತು. ಪ್ರಕಾಶ್ ಅವರ ತಂದೆಗೆ ಆ ಚಿತ್ರದ ಮುಹೂರ್ತ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಲು ನಂಜುಂಡಿ ನಾಗರಾಜ್ ಮತ್ತವರ ಭಾವಮೈದ ಬಂದಿದ್ದರಂತೆ. ಹಾಗೆ ಅವರನ್ನು ಪರಿಚಯಿಸಿಕೊಂಡು, ಸಿನಿಮಾ ವಠಾರಕ್ಕೆ ಕಾಲಿಟ್ಟಿದ್ದರು ಪ್ರಕಾಶ್. ಡಾ. ರಾಜ್ ಮತ್ತು ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿ ಅವರ ಚಿತ್ರಗಳು ತೆರೆಗೆ ಬರೋ ಹೊತ್ತಿನಲ್ಲಿ ಕಟೌಟು ಕಟ್ಟುತ್ತಾ ಸಂಭ್ರಮಿಸುತ್ತಿದ್ದ ಪ್ರಕಾಶ್ ಕ್ರಮೇಣ ಶಿವಣ್ಣನ ಸಿನಿಮಾಗಳಲ್ಲೇ ಛಾನ್ಸು ಗಿಟ್ಟಿಸಿಕೊಂಡಿದ್ದರು. ರವಿಚಂದ್ರನ್ ಅವರ ಶಾಂತಿ ಕ್ರಾಂತಿಯಲ್ಲಿ ಸಾವಿರಾರು ಶಾಲಾ ಮಕ್ಕಳಲ್ಲಿ ಪ್ರಕಾಶ್ ಕೂಡಾ ಒಬ್ಬರಾಗಿದ್ದರಂತೆ. ಆ ಸಂದರ್ಭದಲ್ಲೇ ರವಿಚಂದ್ರನ್ ಅವರ ಬಳಿ ಹೋಗಿ ನನ್ನನ್ನೂ ಸಿನಿಮಾಗೆ ಸೇರಿಸಿಕೊಳ್ಳಿ ಅಂತಾ ಕೇಳಿದಾಗ ‘ಮೊದಲು ಡಿಗ್ರಿ ಮುಗಿಸಿಕೊಂಡು ಬಾ ಹೋಗೋ’ ಅಂತಾ ರವಿಮಾಮ ಗದರಿದ್ದರಂತೆ!

ಆ ನಂತರ ಕಾಕತಾಳೀಯವೆನ್ನುವಂತೆ ಪ್ರೀತ್ಸು ತಪ್ಪೇನಿಲ್ಲ  ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ನಟಿಸುವ ಅವಕಾಶ ಪ್ರಕಾಶ್ ಪಾಲಿಗೆ ಒದಗಿಬಂದಿತ್ತು. ಅಹಂ ಪ್ರೇಮಾಸ್ಮಿ ಚಿತ್ರದ ಸುಲೇಮಾನ್ ಕ್ಯಾರೆಕ್ಟರ್ರು ಬುಲೆಟ್‌ಗೆ ಬ್ರೇಕ್ ನೀಡಿತ್ತು. ಕಾಟನ್ ಪೇಟೆ ಪ್ರಕಾಶ ಅಂತಲೇ ಗುರುತಿಸಿಕೊಂಡಿದ್ದ ಇವರ ಹೆರಸಿನ ಜೊತೆ ಬುಲೆಟ್ ಅಂತಾ ಸೇರಿಸಿದ್ದು ಕೂಡಾ ಕ್ರೇಜ಼ಿ ಸ್ಟಾರ್ ರವಿಚಂದ್ರನ್ ಅವರೇ. ಓ ನನ್ನ ನಲ್ಲೆ ಚಿತ್ರದ ಟೈಟಲ್ ಕಾರ್ಡಿನಲ್ಲಿ ಮೊದಲ ಬಾರಿಗೆ ಪ್ರಕಾಶನ ಹೆಸರಿನ ಜೊತೆ ಬುಲೆಟ್ ಕೂಡಾ ಸೇರಿಕೊಂಡಿತ್ತು. ಆ ನಂತರ ಸತತ ಒಂಭತ್ತು ಸಿನಿಮಾಗಳಲ್ಲಿ ಕನಸುಗಾರನ ಜೊತೆ ನಟಿಸುವ ಛಾನ್ಸು ಬುಲೆಟ್ಟಿಗೆ ಸಿಕ್ಕಿತ್ತು.

ದಿನಕಳೆಂದಂತೆ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಬುಲೆಟ್ಟು ಅವಕಾಶ ಪಡೆಯುತ್ತಾ ಬಂದರು. ದರ್ಶನ್ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡರು. ಈ ನಡುವೆ ರಾಜಕೀಯಕ್ಕೂ ಕಾಲಿರಿಸಿ ಹೆಸರು ಮಾಡುವ ಕನಸು ಬುಲೆಟ್ ಅವರದ್ದಾಗಿತ್ತು. ಆದರೆ ಸಿನಿಮಾದಷ್ಟು ಸಲೀಸಾಗಿ ರಾಜಕೀಯ ಪ್ರಕಾಶ್ ಕೈ ಹಿಡಿಯಲಿಲ್ಲ. ಸಿನಿಮಾದಲ್ಲಿ ದಿನಕ್ಕೆ ಹೆಚ್ಚು ಸಂಭಾವನೆ ಪಡೆಯುವ ನಟ ಅನ್ನೋ ಹೆಗ್ಗಳಿಕೆಯ ಜೊತೆಗೆ ಪತ್ನಿ ಮಂಜು, ಮಗಳು ಮೋನಿಕಾ ವರ್ಷಿಣಿ ಮತ್ತು ರಕ್ಷಕ್ ಸೇನಾರೊಂದಿಗೆ ಪ್ರಕಾಶ್ ನೆಮ್ಮದಿಯ ಬದುಕು ರೂಪಿಸಿಕೊಂಡಿದ್ದರು. ದಿನೇ ದಿನೇ ಹೆಚ್ಚುತ್ತಿದ್ದ ದೇಹ ತೂಕ ಅವರನ್ನು ಹೈರಾಣಾಗಿಸಿತು. ಆ ಸಂದರ್ಭದಲ್ಲೇ ಬೇರಿಯಾಟಿಕ್ ಸರ್ಜರಿ ಮಾಡಿಕೊಂಡಿದ್ದರು. ಇಂಥ ಸರ್ಜರಿಗಳನ್ನೆಲ್ಲಾ ಮಾಡಿದಮೇಲೆ ಕುಡಿತ ಇತರೆ ಚಟಗಳಿಂದ ದೂರವಿದ್ದು ಕಟ್ಟುನಿಟ್ಟಿನ ಜೀವನ ನಡೆಸಬೇಕು. ಆದರೆ ಆರೋಗ್ಯದ ವಿಚಾರವನ್ನು ಪ್ರಕಾಶ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಕಾರಣ ಪದೇ ಪದೇ ಹೆಲ್ತ್ ಪ್ರಾಬ್ಲಮ್ಮು ಶುರುವಾಯಿತು. ಹೀಗಾಗಿ ಸಿನಿಮಾ ಜನ ಕೂಡಾ ಅವಕಾಶಗಳನ್ನು ಕೊಡಲು ಯೋಚಿಸುವಂತಾಯಿತು.

ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಬುಲೆಟ್ ಪ್ರಕಾಶ್ ಯಶಸ್ವೀ ನಿರ್ಮಾಪಕನ ಸ್ಥಾನವನ್ನಾದರೂ ಅಲಂಕರಿಸಬಹುದಿತ್ತು. ಸರಿ ಸುಮಾರು ಒಂಭತ್ತು ವರ್ಷಗಳ ಹಿಂದೆ  ಬುಲೆಟ್ ತಮ್ಮ ಸ್ನೇಹಿತರೊಂದಿಗೆ ಸೇರಿ ಐತಲಕಡಿ  ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಅದು ಅಷ್ಟಕ್ಕಷ್ಟೇ ಅನ್ನುವಂತಾಯಿತು. ಆ ಹೊತ್ತಿಗಾಗಲೇ ಪ್ರಕಾಶ್ ಬಹುತೇಕ ಹೀರೋಗಳ ಸ್ನೇಹ ಸಂಪಾದಿಸಿದ್ದರು. ಆದರೆ ಐತಲಕಡಿ ಚಿತ್ರಕ್ಕೆ ಬಂದು ನಟಿಸಿ ಸಪೋರ್ಟ್ ಮಾಡಿದ್ದು ಸುದೀಪ್ ಮತ್ತು ರವಿಚಂದ್ರನ್ ಮಾತ್ರ. ಮಂಜಿನ ಹನಿ ಚಿತ್ರಕ್ಕೆಂದು ಶೂಟ್ ಮಾಡಿದ್ದ  ಬಾಬಾರೋ ಬೈರಾಗಿ ಹಾಡನ್ನು ಸ್ವತಃ ರವಿಚಂದ್ರನ್ ಐತಲಕಡಿ ಸಿನಿಮಾಗಾಗಿ ನೀಡಿ ಸಹಕರಿಸಿದ್ದರು.

ಸ್ನೇಹದಿಂದ ಇದ್ದ ಕಾರಣಕ್ಕೆ ದರ್ಶನ್ ಕೂಡಾ ಬುಲೆಟ್ ಪ್ರಕಾಶ್‌ಗೆ ಸಿಕ್ಕಾಪಟ್ಟೆ ಸಹಾಯ ಮಾಡಿದ್ದರು. ಅದೊಂದು ದಿನ ಬುಲೆಟ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗಿದ್ದಾಗ ನೋಡಲು ಬಂದಿದ್ದ ದರ್ಶನ್ ಯಾವ ಸೂಚನೆಯನ್ನೂ ನೀಡದೆ ಹಣದ ಕಂತೆಯನ್ನು ತಲೆದಿಂಬಿನ ಕೆಳಗೆ ಇಟ್ಟು ಹೋಗಿದ್ದರು. ನೇರವಾಗಿ ಕೊಟ್ಟರೆ ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಅನ್ನೋ ಮನಸ್ಥಿತಿ ದರ್ಶನ್ ಅವರದ್ದಾಗಿತ್ತು. ತಮಿಳಿನ ಪೂಜೈ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಿ, ಅದರಲ್ಲಿ ನಟಿಸಲು ಕಾಲ್ ಶೀಟ್ ಕೂಡಾ ನೀಡಿದ್ದರು. ಅಷ್ಟರಲ್ಲಿ ಸ್ವತಃ ಬುಲೆಟ್ ಪ್ರಕಾಶ್ ಆತುರಕ್ಕೆ ಬಿದ್ದು ಯಡವಟ್ಟು ಮಾಡಿಕೊಂಡರು. ಆಗಬೇಕಿದ್ದ ಕೆಲಸವೂ ಹಾಳಾಯಿತು, ಸಂಬಂಧವೂ ಮುರಿದುಬಿತ್ತು. ಜೊತೆಗೆ ಮೇಲಿಂದ ಮೇಲೆ ಎದುರಾದ ಆರೋಗ್ಯ ಸಮಸ್ಯೆ ಬುಲಟ್ ಪ್ರಕಾಶ್ ಬದುಕನ್ನೇ ತಿಂದುಹಾಕಿತು. ಈ ನಡುವೆ ಪ್ರಕಾಶ್ ಹೆಬ್ಬಾಳ ಬಳಿಯೆಲ್ಲೋ ಮನೆಯನ್ನೂ ನಿರ್ಮಿಸಿಕೊಂಡಿದ್ದರು. ತೀರಾ ಚೆಂದದ ಬದುಕು ಸಾಗಿಸಬೇಕಿದ್ದ ದಿನಗಳಲ್ಲಿ ತಮ್ಮ ಸ್ವಯಂಕೃತ ಅಪರಾಧಗಳ ಕಾರಣಕ್ಕೆ ಬುಲೆಟ್ಟು ಸದ್ದಡಗಿದ್ದು ದುರಂತ!

CG ARUN

ಮಜವಾಗಿರುವ ಸಿನಿಮಾ ಮಿಸ್ ಮಾಡದೇ ನೋಡಿ!

Previous article

ಕೊರೊನಾ ಲಾಕ್ ಡೌನ್: ಮುಂದೇನು?

Next article

You may also like

Comments

Leave a reply

Your email address will not be published. Required fields are marked *