ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಹದಗೆಟ್ಟಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರಿಯಾಟಿಕ್ ಸರ್ಜರಿ ಮಾಡಿಸಿಕೊಂಡು ಸಣ್ಣಗಾದ ನಂತರ ಮೇಲಿಂದ ಮೇಲೆ ಬುಲೆಟ್ ಪ್ರಕಾಶ್ ಅನಾರೋಗ್ಯಕ್ಕೀಡಾಗುತ್ತಲೇ ಇದ್ದಾರೆ. ವರ್ಷಕ್ಕೆ ಮುಂಚೆ ಜಾಂಡೀಸ್ ಶುರುವಾಗಿದ್ದರಿಂದ ೧೦೫ ದಿನಗಳ ಕಾಲ ವಿಕ್ರಂ ಆಸ್ಪತ್ರೆಯಲ್ಲಿದ್ದರು. ಆ ನಂತರ ಕಾಲಿಗೂ ಸಮಸ್ಯೆಯಾಗಿ, ಬೆರಳನ್ನು ಆಪರೇಷನ್ ಮಾಡಿದ್ದರು. ತೀರಾ ಇತ್ತೀಚೆಗೆ ಕಳಸದಲ್ಲಿ ಗಾಳಿಪಟ-೨ ಚಿತ್ರೀಕರಣ ಮುಗಿಸಿಕೊಂಡುಬಂದ ನಂತರ ಹಿಮ್ಮಡಿಯಲ್ಲಿ ಅಲರ್ಜಿಯಾಗಿ, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಆ ನಂತರ ಮತ್ತೆ ಆರೋಗ್ಯ ತಪ್ಪಿದ್ದರಿಂದ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಬಂದು, ಅಲ್ಲಿ ಐಸಿಯೂ ಫೆಸಿಲಿಟಿ ಇಲ್ಲವೆಂದು ಫೋರ್ಟಿಸ್ಗೆ ದಾಖಲು ಮಾಡಿದ್ದಾರಂತೆ.
ಈ ವಿಚಾರವಾಗಿ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಹೇಳುತ್ತಿರುವುದೇ ಬೇರೆ. “ಮೊನ್ನೆಯಷ್ಟೇ ಗ್ಯಾಸ್ಟ್ರಿಕ್ ಸಮಸ್ಯೆಯಾಗಿತ್ತು. ಅದಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಗಾಳಿಪಟ ಶೂಟಿಂಗ್ ಮುಗಿಸಿಕೊಂಡು ಬಂದ ನಂತರ ಸ್ವಲ್ಪ ಹೆಲ್ತ್ ಪ್ರಾಬ್ಲಮ್ ಆಗಿತ್ತು ಅಷ್ಟೇ. ಈಗ ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ.” ಅನ್ನೋದು ಬುಲೆಟ್ ಮಗನ ಪ್ರತಿಕ್ರಿಯೆ.
ನಿಜಕ್ಕೂ ಬುಲೆಟ್ ಪ್ರಕಾಶ್ಗೆ ಏನಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಅನ್ನೋದಂತೂ ನಿಜ. ಏನಾದರೂ ಆಗಲಿ ಬುಲೆಟ್ ಪ್ರಕಾಶ್ ಆದಷ್ಟು ಬೇಗ ನಟನೆಗೆ ಮರಳುವಂತಾಗಲಿ.