ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ತೆರೆಗೆ ಬರಲು ಸರ್ವರೀತಿಯಲ್ಲೂ ಸನ್ನದ್ದವಾಗಿದೆ. ‘ಜೇಮ್ಸ್’ ಬಿಡುಗಡೆಯಾದ ಎಲ್ಲಾ ಪರದೆಗಳಲ್ಲೂ ‘ಬೈರಾಗಿ’ ಟೀಸರ್ ದರ್ಶನವಾಗಿತ್ತು. ಪ್ರೇಕ್ಷಕರೆಲ್ಲಾ ಥ್ರಿಲ್ ಆಗಿದ್ದರು. ಈಗ ಅಂತೋಣಿ ದಾಸನ್ ಹಾಡಿರುವ ಚೆಂದದ ಹಾಡೊಂದು ಲೋಕಾರ್ಪಣೆಗೊಂಡಿದೆ. ಟಗರು ಟೈಟಲ್ ಸಾಂಗ್ ಮೂಲಕ ಕನ್ನಡಕ್ಕೆ ಪರಿಚಯಗೊಂಡ ಅಂಥೋಣಿ ದಾಸನ್ ಹಾಡಿರುವ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.
ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಹಾಡನ್ನು ಸ್ಯಾಂಡಲ್’ವುಡ್ ‘ಭೀಮ’ನಿಂದ ಅನಾವರಣಗೊಳಿಸಿದೆ ಚಿತ್ರತಂಡ. ಸಿನಿಮಾದಲ್ಲಿ ಈ ಹಾಡು ಶಿವಣ್ಣನ ಎಂಟ್ರಿ ಸಾಂಗ್ ಆಗಿದ್ದು ಸಖತ್ ಮಾಸ್ ಆಗಿ ಮೂಡಿಬಂದಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳಿನ್ ಬ್ಯಾಂಡು ಬಜಾಯಿಸಿರುವ ಈ ಹಾಡಿಗೆ ಆ್ಯಂಥೋನಿ ದಾಸನ್ ದನಿಗೂಡಿಸಿದ್ದಾರೆ.
‘ನಕ್ಕರನಖ ನಕ್ಕರನಖ ನುಗ್ಗಿಬಂತೋ ನಾಡಹುಲಿ…’ ‘ಟಕರಟಕ ಟಕರಟಕ ಎಗರಿಬಂತೋ ಕಾಡಹುಲಿ…’ ಎಂಬ ಹಾಡು ಅಕ್ಷಯ ತೃತೀಯ ವಿಶೇಷ ದಿನದಂದು ವಿಜಯ್ ಕುಮಾರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಮಾಸ್ ಬೀಟ್, ಕೇಳಿದಾಕ್ಷಣ ಕುಣಿಸುವ ಸಂಗೀತ ಈ ಹಾಡಿನಲ್ಲಿದೆ. ಆ್ಯಂಥೋನಿ ದಾಸ್ ವಾಯ್ಸ್ ಕೇಳಿದಾಕ್ಷಣ ಥ್ರಿಲ್ ಆಗಿಹೋದೆ. ಶಿವಣ್ಣನ ಎನರ್ಜಿಗೆ ಸರಿದೂಗುವಂಥ ಹಾಡಿದು. ನಾನಂತೂ ಸಖತ್ ಎಂಜಾಯ್ ಮಾಡಿದೆ. ಈ ಹಾಡನ್ನು ಕೇಳಿದವರೂ ಇಷ್ಟಪಡುತ್ತಾರೆ ಎಂಬ ಭರವಸೆಯಿದೆ’ ಅನ್ನೋದು ವಿಜಿ ಮಾತು.
‘ನೂರಾರು ಡಾನ್ಸರ್ಸ್, ಬೃಹತ್ ಸೆಟ್, ಕಲರ್’ಫುಲ್ ಕಾಸ್ಟ್ಯೂಮ್’ನಲ್ಲಿ ಶಿವಣ್ಣಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬನೇರುಘಟ್ಟ ಸಮೀಪದ ದೇವಸ್ಥಾನವೊಂದರ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು. ದೊಡ್ಡ ಮಟ್ಟದಲ್ಲಿ ಈ ಹಾಡು ಮೂಡಿಬಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್. ವಿಜಯ್ ಮಿಲ್ಟನ್ ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಈ ಸಿನಿಮಾಕ್ಕೆ ಅವರೇ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ‘ಬೈರಾಗಿ’ ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಗೌಡ ಈ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.
ಸದ್ಯ ತಮಿಳಿನಲ್ಲಿ ಭಾರೀ ಪ್ರಸಿದ್ಧಿ ಪಡೆದಿರೋ ಹಿನ್ನೆಲೆ ಗಾಯಕ ಅಂತೋಣಿ. ಕಲಾವಿದನಾದವನಿಗೆ ಭಾಷೆಯ ಗಡಿ ಇಲ್ಲ ಎಂಬಂತೆ ಕನ್ನಡದ ಬಗ್ಗೆಯೂ ಪ್ರೀತಿಯಿಂದಲೇ ಮಾತಾಡೋ ಅಪ್ಪಟ ದೇಸೀ ಪ್ರತಿಭೆಯಾದ ಅಂತೋಣಿ ದಾಸನ್ ಮೂಲತಃ ತಮಿಳಿನ ಜಾನಪದ ಗಾಯಕ. ತನ್ನ ವಿಶಿಷ್ಟವಾದ ಕಂಠ ಸಿರಿಯ ಮೂಲಕ ಪ್ರಸಿದ್ಧಿ ಪಡೆದ ಅವರು ತಮಿಳು ಚಿತ್ರರಂಗಕ್ಕೆ ಅಡಿಯಿರಿಸಿದ್ದು ೨೦೧೩ರಲ್ಲಿ. ಆ ನಂತರ ಹಲವಾರು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ ಅಂತೋಣಿ ದಾಸನ್ ತಮಿಳಿಗಳ ಹಾಟ್ ಫೇವರಿಟ್ ಗಾಯಕ. ಜೊತೆಗೆ ಲಾವಣಿ ಹಾಡುಗಳನ್ನು ಬರೆದು ತಾವೇ ಹಾಡುತ್ತಾರೆ.
ತಮಿಳುನಾಡಿನಲ್ಲಿ ನಮ್ಮ ಕೀಲುಕುದುರೆಯನ್ನು ಹೋಲುವ ಕರಗಾಟ್ಟ ಎನ್ನುವ ಗ್ರಾಮೀಣ ಕಲೆಯಿದೆ. ಅಂತೋಣಿ ದಾಸನ್ ಅವರ ತಂದೆ ಕರಗಾಟ್ಟ ತಂಡದಲ್ಲಿ ನಾದಸ್ವರ ಕಲಾವಿದರಾಗಿದ್ದವರು. ಕಿತ್ತು ತಿನ್ನೋ ಬಡತನದಿಂದ ಆರನೇ ಕ್ಲಾಸಿಗೇ ಸ್ಕೂಲಿಗೆ ಗುಡ್ ಬೈ ಹೇಳಿದ ಅಂಥೋಣಿ ಕರಗಾಟ್ಟಗಳಲ್ಲಿ ಜನರನ್ನು ರಂಜಿಸುವ ಬಫೂನ್ ವೇಷ ಹಾಕಿ ಬದುಕು ಸಾಗಿಸುತ್ತಿದ್ದ. ಹಾಗೇ ರೋಡ್ರೋಡಲ್ಲಿ ಕುಣಿದುಕೊಂಡಿದ್ದಾತ ಇವತ್ತು ತನ್ನದೇ ಬ್ಯಾಂಡ್ ತಂಡವನ್ನು ಹೊಂದಿದ್ದಾನೆ. ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಾರ್ಯಕ್ರಮ ನೀಡುತ್ತಾನೆ. ತಮಿಳಿನ ಸ್ಟಾರ್ ನಟರ ಸಿನಿಮಾಗಳಲ್ಲಿ ಈತನದ್ದೊಂದು ಹಾಡಿರುತ್ತದೆ. ಬಣ್ಣ ಬಟ್ಟೆಗಳನ್ನು ನೋಡಿ ಅವಕಾಶ ಕೊಡೋ ಮಂದಿಯ ನಡುವೆ ಬೀದಿಗಳಲ್ಲಿ ಕುಣಿಯುತ್ತಿದ್ದ ಪ್ರತಿಭಾವಂತನನ್ನು ಕರೆತಂದು ಸಿನಿಮಾಗಳಲ್ಲಿ ಹಾಡುವ ಅವಕಾಶ ಕೊಟ್ಟ ತಮಿಳಿಗರನ್ನು ಭೇಷ್ ಅನ್ನಲೇಬೇಕು.
ಇಂಥಾ ಜನಪದ ಕಲಾವಿದ ಅಂತೋಣಿ ದಾಸನ್ ಈಗ ಕನ್ನಡದಲ್ಲೂ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಈತ ಹಾಡಿದ ಹಾಡುಗಳೆಲ್ಲಾ ಹಿಟ್ ಆಗುತ್ತಿವೆ. ಆ ಗೆಲುವಿನ ಪಟ್ಟಿಗೆ ಬೈರಾಗಿಯ ಟಕರನಕ ಟಕರನಕ ಹಾಡು ಕೂಡಾ ಸೇರಿಕೊಳ್ಳೋದರಲ್ಲಿ ಸಂಶಯವಿಲ್ಲ!
ವಿಜಯ್ ಮಿಲ್ಟನ್ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ ‘ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ‘ಟಗರು’ ಬಳಿಕ ‘ಡಾಲಿ’ ಧನಂಜಯ್ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಜತೆ ನಟಿಸಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕೂಡಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.
Comments