ಸಿನಿಮಾವೊಂದನ್ನು ನಿರ್ಮಿಸಿ ಅದನ್ನು ಸಕ್ಸಸ್ ಮಾಡುವುದು ಸುಲಭದ ಮಾತೇನಲ್ಲ. ಈ ಹಿಂದೆ ಸಂಯುಕ್ತ-2 ಚಿತ್ರವನ್ನು ನಿರ್ಮಿಸಿದ್ದ ಡಾ. ಡಿ.ಎಸ್. ಮಂಜುನಾಥ್ ಅವರ ನಿರ್ಮಾಣದ 2ನೇ ಚಿತ್ರವಾಗಿ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಡಿಬಂದಿದೆ. ಈ ಚಿತ್ರವೀಗ ಯಶಸ್ವಿಯಾಗಿ 63 ದಿನಗಳ ಪ್ರದರ್ಶನ ಕಂಡಿದೆ.
ಈ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲೆಂದು ಚಿತ್ರತಂಡ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ಪುಟ್ಟದೊಂದು ಸಮಾರಂಭ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬ ಕಲಾವಿದ ತಂತ್ರಜ್ಞರಿಗೂ ಸ್ಮರಣಾ ಫಲಕ ನೀಡಲಾಯಿತು.
ನಟ ನೀನಾಸಂ ಸತೀಶ್, ನಿರ್ಮಾಪಕ ಸುಪ್ರೀತ್, ಭರ್ಜರಿ ಚೇತನ್, ಅಯೋಗ್ಯ ಚಿತ್ರದ ನಿರ್ದೇಶಕರ ಮಹೇಶ್ ಕುಮಾರ್, ಗಾಯಕ ನವೀನ್ ಸಜ್ಜು ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಲ್ಲದೆ ಚಿತ್ರದ ನಾಯಕ ನಟರಾದ ಚಂದನ್, ನಾಯಕಿಯರಾದ ಸಂಜನಾ ಆನಂದ್, ಪ್ರಧಾನ ಪಾತ್ರದಲ್ಲಿ ನಟಿಸಿದ್ದ ತಬಲಾ ನಾಣಿ, ಅಪೂರ್ವ, ನಿರ್ದೇಶಕ ಕುಮಾರ್ ಮತ್ತು ನಿರ್ಮಾಪಕ ಮಂಜುನಾಥ್ ಕೂಡಾ ಭಾಗವಹಿಸಿದ್ದರು.
ನಟ ನೀನಾಸಂ ಸತೀಶ್ ಮಾತನಾಡಿ ಕಡಿಮೆ ಬಡ್ಜೆಟ್ನಲ್ಲಿ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಿಸುವುದು ಕಷ್ಟ. ಅಂತಹ ಕೆಲಸವನ್ನು ಈ ತಂಡ ಮಾಡಿದೆ. ಒಂದು ಸಿನಿಮಾಗೆ ಬೇಕಿರುವುದು ಒಳ್ಳೆಯ ಕಥೆ. ಅದಕ್ಕೆ ತಕ್ಕಂತೆ ಜೀವ ತುಂಬುವ ಕಲಾವಿದರು ತಬಲಾ ನಾಣಿ, ಸಂಜನಾ, ಚಂದನ್ ಎಲ್ಲರೂ ಎಫರ್ಟ್ ಹಾಕಿದ್ದಾರೆ, ಚಿತ್ರವನ್ನು ಗೆಲ್ಲಿಸಿದ್ದಾರೆ ಎಂದರು.
ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ ನಿರ್ದೇಶಕರಿಗೆ ತನ್ನ ಪ್ರತಿ ಚಿತ್ರ ಸವಾಲಾಗಿರುತ್ತದೆ. ಎಲ್ಲಾ ಸವಾಲುಗಳನ್ನು ಗೆದ್ದು ನಿರ್ಮಾಪಕರನ್ನು ಸೇಫ್ ಮಾಡಿದ್ದಾರೆ ಗೆಳೆಯ ಕುಮಾರ್ ಎಂದು ಹೇಳಿದರು.
ಮತ್ತೊಬ್ಬ ನಿರ್ದೇಶಕರ ಮಹೇಶ್ ಕುಮಾರ್ ಮಾತನಾಡಿ ಹೊಸ ಪ್ರತಿಭೆಗಳಿಗೆ ಸಾತ್ ಕೊಟ್ಟಿರುವುದು ಈ ನಿರ್ಮಾಪಕರ ದೊಡ್ಡ ಗುಣ. ಅವರು ಕೊಟ್ಟ ಅವಕಾಶವನ್ನು ಕುಮಾರ್ ಮತ್ತು ತಂಡ ಚೆನ್ನಾಗಿ ಉಪಯೋಗಿಸಿಕೊಂಡು ಸಕ್ಸಸ್ ಸಿನಿಮಾ ಮಾಡಿದೆ ಎಂದು ಹೇಳಿದರು.
ನಂತರ ನಟ ತಬಲಾ ನಾಣಿ ಮಾತನಾಡಿ ನಿರ್ಮಾಪಕರ ಮೊದಲ ಚಿತ್ರ ಸಂಯುಕ್ತ-2 ನಲ್ಲಿ ನಾನು ಅಭಿನಯಿಸಿದ್ದೆ.
ನಿರ್ದೇಶಕ ಕುಮಾರ್ ಈ ಕಥೆ ಹೇಳಿದಾಗ ತುಂಬಾ ಇಷ್ಟವಾಗಿ ಪಾತ್ರಕ್ಕೆ ಒಪ್ಪಿದೆ. ನಿರ್ಮಾಪಕರು ಕೊಟ್ಟ ಬಡ್ಜೆಟ್ನಲ್ಲೇ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಉಳಿದ ಎಲ್ಲರಿಗೂ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದರು.
ನಾಯಕಿ ಸಂಜನಾ ಮಾತನಾಡಿ 63 ದಿನ ಎಂದರೆ ಅದು ತಮಾಷೆ ಅಲ್ಲ. ನನ್ನ ಮೊದಲ ಚಿತ್ರ ಇಷ್ಟು ದೊಡ್ಡದಾಗಿ ಸೌಂಡ್ ಮಾಡುತ್ತಿರುವುದು ಖುಷಿಯ ವಿಚಾರ.
ಚಿತ್ರತಂಡದಿಂದ ಸಿಕ್ಕ ಪ್ರೋತ್ಸಾಹದಿಂದಲೇ ಇದು ಸಾಧ್ಯವಾಯಿತು ಎಂದು ಹೇಳಿದರು. ನಿರ್ಮಾಪಕ ಮಂಜುನಾಥ್ ಮಾತನಾಡಿ ನಾನು ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದೆ. ನಟನಾಗುತ್ತೇನೆ ಅಂತಲೂ ಅಂದುಕೊಂಡಿರಲಿಲ್ಲ. ಕುಮಾರ್ ಈ ಚಿತ್ರಕ್ಕಾಗಿ ನನ್ನ ಹಿಂದೆ 6 ತಿಂಗಳ ಕಾಲ ಅಲೆದಾಡಿದ್ದಾರೆ. ಈ ಸಕ್ಸಸ್ ನನ್ನ ಇಡೀ ಚಿತ್ರ ತಂಡಕ್ಕೆ ಸಲ್ಲಬೇಕು ಎಂದು ಹೇಳಿದರು. ವಿತರಕ ವಿಜಯ್ಕುಮಾರ್ ಕೂಡ ಹಾಜರಿದ್ದರು.
No Comment! Be the first one.