ಉತ್ತರ ಭಾರತದ ಸುಪ್ರಸಿದ್ಧ ರಂಗತಂಡ ಚಾಯ್ ವಾಯ್ ಥೇಟರ್ ಕೋವಿಡ್ ಎಫೆಕ್ಟಿನಿಂದ ಕಂಗಾಲಾಗಿರುವ ರಂಗಭೂಮಿಯ ಸಂಕಷ್ಟಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ.
ಎಲ್ಲಿಂದಲೋ ಬಂದ ಕೊರೋನಾ ಸೋಂಕು ಭಾರತಕ್ಕೆ ಸೋಕಿದ ದಿನದಿಂದ ಬಹುತೇಕರ ಬದುಕು ಅಲ್ಲೋಲಕಲ್ಲೋಲವಾಗಿದೆ. ಚಲನಚಿತ್ರ ಕ್ಷೇತ್ರ ಚಲನೆ ಕಳೆದುಕೊಂಡಿದೆ. ನೋಡುಗರನ್ನು ಗೊಳೋ ಅನ್ನಿಸುತ್ತಿದ್ದ ಧಾರಾವಾಹಿಗಳೇ ಉಳಿಗಾಲವಿಲ್ಲದೆ ಗೋಳಿಡುತ್ತಿವೆ. ಈ ನಡುವೆ ಸಿನಿಮಾ ಮತ್ತು ಧಾರವಾಹಿಯ ಮೂಲ ಕೇಂದ್ರದಂತಿರುವ ರಂಗಭೂಮಿ ಮತ್ತು ಅದನ್ನು ನಂಬಿದವರ ಪಾಡೇನಾಗಿರಬೇಡ?
ಉತ್ತರ ಭಾರತದ ಸುಪ್ರಸಿದ್ಧ ರಂಗತಂಡ ಚಾಯ್ ವಾಯ್ ಥೇಟರ್ ಕೋವಿಡ್ ಎಫೆಕ್ಟಿನಿಂದ ಕಂಗಾಲಾಗಿರುವ ರಂಗಭೂಮಿಯ ಸಂಕಷ್ಟಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ. ತನ್ನ ಫೇಸ್ ಬುಕ್ ಪೇಜ್ ನಲ್ಲಿ ಭಾರತದ ಖ್ಯಾತ ರಂಗಕರ್ಮಿಗಳು ಲೈವ್ ಬಂದು ಈ ಸಂದರ್ಭದಲ್ಲಿ ರಂಗಭೂಮಿಯ ಮಂದಿ ಹೇಗಿರಬೇಕು, ಹೊಸ ಸಾಧ್ಯತೆಗಳತ್ತ ಗಮನಹರಿಸೋದು ಹೇಗೆ ಎಂಬಿತ್ಯಾದಿ ವಿವರಗಳ ಕುರಿತು ಮಾತಾಡುತ್ತಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪ್ರಸನ್ನ, ಎಂ.ಎಸ್ ಸತ್ಯು, ಟಿ.ಎಸ್. ನಾಗಾಭರಣ, ಸಿ ಬಸಲಿಂಗಯ್ಯ, ಪ್ರಕಾಶ್ ಬೆಳವಾಡಿ ಮುಂತಾದ ಭಾರತೀಯ ರಂಗಭೂಮಿಯಲ್ಲಿ ಹೆಸರು ಮಾಡಿರುವ ಕನ್ನಡಿಗರು ಮಾತಾಡಿದ್ದಾರೆ.
ರಂಗಭೂಮಿ ಆಸಕ್ತರು ಚಾಯ್ ವಾಯ್ ರಂಗ್ ಮಂಚ್ ನ ಫೇಸ್ ಬುಕ್ ಪೇಜಿಗೆ ಹೋದರೆ ಈ ಎಲ್ಲ ದಿಗ್ಗಜರ ಅನುಭವಗಳನ್ನು ನೋಡಬಹುದು. ಮುಂಬೈಯನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡಿರುವ ಚಾಯ್ ವಾಯ್ ರಂಗ್ ಮಂಚ್ ಈ ಫೇಸ್ ಬುಕ್ ಲೈವ್ ಕಾರ್ಯಕ್ರಮದ ಮೂಲಕ ಕರ್ನಾಟಕದಲ್ಲೂ ಜನಪ್ರಿಯತೆ ಪಡೆದಿದೆ. ಕರೋನಾದ ಕಡುಗಷ್ಟದ ಈ ದಿನಗಳಲ್ಲಿ ರಂಗಭೂಮಿಯನ್ನು ಉಳಿಸಿಕೊಂಡು, ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕಾದರೆ ಇಂಥಾ ಕಾರ್ಯಕ್ರಮಗಳ ಅಗತ್ಯವಿದೆ. ಚಾಯ್ ವಾಯ್ ಅದನ್ನು ಸಾಧ್ಯವಾಗಿಸಿದೆ.