ಎಸ್. ಡಿ ಅರವಿಂದ್ ನಿರ್ದೇಶನದ ಮಟಾಶ್ ಚಿತ್ರ ಆರಂಭ ಕಾಲದಿಂದಲೂ ಬಗೆ ಬಗೆಯಲ್ಲಿ ಸುದ್ದಿ ಮಾಡುತ್ತಾ ಬಂದಿದೆ. ಇದೀಗ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿ ಅದರ ಅಲೆಯಲ್ಲಿಯೇ ಚಿತ್ರದ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಗೂ ಚಾಲನೆ ಸಿಕ್ಕಿದೆ.
ರಾಮಾನುಜಂ ಹಾಡಿರುವ ನಮೋ ವೆಂಕಟೇಶಾ, ನಮೋ ತಿರುಮಲೇಶಾ ಎಂಬ ಹಾಡೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜನ ಸಾಮಾನ್ಯರೂ ಕೂಡಾ ಇದನ್ನು ಎಂಜಾಯ್ ಮಾಡಲಾರಂಭಿಸಿದ್ದಾರೆ. ಆದರೆ ಇದರ ಸುತ್ತಾ ಹರಡಿಕೊಂಡಿರೋ ಪ್ರಶ್ನಾರ್ಥಕ ಊಹಾಪೋಹಗಳು ಒಂದಷ್ಟು ಜನರ ಅಸಹನೆಗೆ ಕಾರಣವಾಗಿ, ಅದೂ ಕೂಡಾ ಮಟಾಶ್ ಚಿತ್ರಕ್ಕೆ ಪೂರಕ ಪ್ರಚಾರ ಕೊಡುತ್ತಿರೋದು ಸದ್ಯದ ಬೆಳವಣಿಗೆ!
ಅರವಿಂದ್ ಅವರು ಆರಂಭದಿಂದಲೂ ಇದು ನೈಜ ಘಟನೆಗಳನ್ನಾಧರಿಸಿದ ಕಾಲ್ಪನಿಕ ಚಿತ್ರವೆಂದು ಹೇಳಿಕೊಂಡಿದ್ದರು. ಇದರ ಕಥನ ನೋಟ್ ಬ್ಯಾನ್ ವಿದ್ಯಮಾನದ ಸುತ್ತ ನಡೆಯುತ್ತದೆಯಾದರೂ ಅದರ ದಿಕ್ಕೇ ಬೇರೆ. ಇಲ್ಲಿ ಸರಿ ತಪ್ಪುಗಳ ತರ್ಕಕ್ಕೆ ಆಸ್ಪದ ಕೊಟ್ಟಿಲ್ಲ ಅಂತಲೂ ಹೇಳಿದ್ದರು. ಆದರೆ ಈ ನಮೋ ವೆಂಕಟೇಶ ಹಾಡು ಬಿಡುಗಡೆಯಾದದ್ದೇ ಅದರ ಪ್ರತೀ ಪದಗಳಿಗೂ, ಭಾವಗಳಿಗೂ ತಂತಮ್ಮ ನಿಘಂಟಿನಿಂದ ಉತ್ತರ ಹೆಕ್ಕಿ ವಿಶ್ಲೇಷಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಕವಿರಾಜ್ ಬರೆದಿರೋ ಈ ಹಾಡಿನಲ್ಲಿ ಬರೋ ನಮೋ ಅಂದರೆ ಪ್ರಧಾನಿ ನರೇಂದ್ರ ಮೋದಿ ಅಂತಲೂ, ವೆಂಕಟೇಶಾದ ಕೊನೇಲಿ ಬರೋ ಶಾ ಅಂದರೆ ಅಮಿತ್ ಶಾ ಅಂತಲೂ ಕೆಲ ಮಂದಿ ಪ್ರವರ ಶುರು ಮಾಡಿಕೊಂಡಿದ್ದಾರೆ. ಈ ಮೂಲಕವೇ ಮಟಾಶ್ ಚಿತ್ರದ ಮಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಕೊಂಡಿರೋದಂತೂ ಸತ್ಯ. ಸದ್ಯದಲ್ಲೇ ಈ ಚಿತ್ರ ತೆರೆ ಕಾಣಲಿರೋದರಿಂದ ಇಂಥಾ ಎಲ್ಲ ಊಹಾಪೋಹಗಳಿಗೂ ತೆರೆ ಬೀಳೋ ಕಾಲವೂ ಹತ್ತಿರಾಗಿದೆ!
#
No Comment! Be the first one.