ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಂಬಲ್ ಕನ್ನಡಿಗರೆಲ್ಲರ ಮನಗೆದ್ದಿದೆ. ಹುಲಿಯಂತೆ ಬದುಕಿದ್ದ ಡಿಕೆ ರವಿಯವರ ಕಥೆಯನ್ನಾಧರಿಸಿದ್ದ ಈ ಚಿತ್ರವನ್ನು ಕಗ್ಗಂಟಾಗಿದ್ದ ಕೊಲೆ ಪ್ರಕರಣವೊಂದಕ್ಕೆ ಅಂತಿಮ ತೀರ್ಪಿನಂತೆಯೂ ಜನ ಸ್ವೀಕರಿಸಿದ್ದಾರೆ. ನಾಯಕ ನೀನಾಸಂ ಸತೀಶ್ ಪಾಲಿಗಂತೂ ಇದು ಇದು ಬೇರೆಯದ್ದೇ ಇಮೇಜ್ ಕೊಟ್ಟಿದ್ದ ಚಿತ್ರ.
ಕಾರಣಾಂತರಗಳಿಂದ ಈ ಸಿನಿಮಾವನ್ನು ಥೇಟರಿನಲ್ಲಿ ನೋಡೋಕಾಗದಿದ್ದವರಿಗೆ ಇಲ್ಲೊಂದು ಸಂತೋಷದ ಸುದ್ದಿಯಿದೆ. ಈ ಚಿತ್ರವೀಗ ಅಮೇಜಾನ್ ಪ್ರೈಮ್ ನಲ್ಲಿಯೂ ನೋಡಲು ಸಿಗುತ್ತದೆ. ಈ ವಿಚಾರವನ್ನು ತಿಳಿಸಿರುವ ನೀನಾಸಂ ಸತೀಶ್ ‘ನನ್ನ ಲೈಬ್ರರಿಯಲ್ಲಿ ಸೇರಿದ ಮತ್ತೊಂದು ಒಳ್ಳೆಯ ಚಿತ್ರ. ಇಂಥ ಪಾತ್ರ ಮತ್ತೊಮ್ಮೆ ಸಿಗಲಾರದು, ತಪ್ಪದೇ ನೋಡಿ ಎಂದು ಧೈರ್ಯವಾಗಿ ಹೇಳುವಂತಹ ಸಿನಿಮಾ. ಥೇಟರಿನಲ್ಲಿ ನೋಡದವರೆಲ್ಲ ಈಗ ಅಮೆಜಾನ್ ಪ್ರೈಮ್ ನಲ್ಲಿ ನೋಡಬಹುದು. ನೋಡಿದ ಮೇಲೆ ಖಂಡಿತಾ ನನ್ನ ಅಭಿಪ್ರಾಯ ನಿಮ್ಮದೂ ಆಗಿರುತ್ತದೆ’ ಅಂದಿದ್ದಾರೆ.
ಸತೀಶ್ ಪಾಲಿಗೆ ಅಯೋಗ್ಯ ಚಿತ್ರದ ಮೂಲಕವೇ ಅದೃಷ್ಟ ಖುಲಾಯಿಸಿತ್ತು. ಆದರೆ ಅದನ್ನೂ ಮೀರಿಸುವಂಥಾ ಮಹಾ ಅದೃಷ್ಟವೊಂದು ಚಂಬಲ್ ಕಣಿವೇಲಿ ಕೈ ಹಿಡಿದಿತ್ತು. ಸತೀಶ್ ಸಾಮಾನ್ಯ ಹುಡುಗನೊಬ್ಬ ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಎಂತೆಂಥಾ ಪಡಿಪಾಟಲುಗಳನ್ನು ಅನುಭವಿಸಬಹುದೋ ಅದೆಲ್ಲವನ್ನೂ ಎದುರುಗೊಂಡಿರುವವರು. ಅದೆಷ್ಟೋ ನೋವು ನಿರಾಸೆಗಳನ್ನ ನುಂಗಿಕೊಂಡೇ ಮೇಲೆದ್ದು ನಿಂತವರು. ಅಂಥಾ ಶ್ರಮವೆಲ್ಲವೂ ಚಂಬಲ್ ಮೂಲಕ ಸಾರ್ಥಕ್ಯ ಪಡೆದುಕೊಂಡಿದೆ. ಯಾಕೆಂದರೆ, ಈ ಚಿತ್ರದಲ್ಲಿನ ಅವರ ನಟನೆಯೇ ಅಂಥಾದ್ದಿದೆ.
ಮೊದಲು ಜೇಕಬ್ ವರ್ಗೀಸ್ ಕಥೆ ಹೇಳಿದಾಗಲೇ ಥ್ರಿಲ್ ಆಗಿದ್ದವರು ನೀನಾಸಂ ಸತೀಶ್. ಆ ಥ್ರಿಲ್ ಈಗ ಚಿತ್ರ ನೋಡಿದಾಗಲೂ ಹಾಗೆಯೇ ಉಳಿಯುತ್ತದೆ ಅನ್ನೋದು ಸತೀಶ್ ಅವರ ಸಾರ್ಥಕ ಭಾವ. ಅವರು ಈ ಸಿನಿಮಾ ಬಗ್ಗೆ ಇಷ್ಟೊಂದು ಭರವಸೆ ಹೊಂದಿರಲು ಕಾರಣವೇನೆಂಬುದಕ್ಕೆ ಚಂಬಲ್ನಲ್ಲಿ ಉತ್ತರವಿದೆ. ಅದಕ್ಕಾಗಿ ನೀವೆಲ್ಲ ಅಮೇಜಾನ್ ಪ್ರೈಮ್ ಮೂಲಕ ಒಂದು ಸಲ ಈ ಚಿತ್ರ ನೋಡಲು ಬಿಡುವು ಮಾಡಿಕೊಳ್ಳಿ…
No Comment! Be the first one.