ಚಂಬಲ್ ಚಿತ್ರತಂಡ ನಿರಾಳವಾಗಿದೆ ಯಾಕೆಂದರೆ ಈ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ಹೈಕೋರ್ಟ್ನಲ್ಲಿ ಡಿಕೆ ರವಿ ಪೋಷಕರು ಸಲ್ಲಿಸಿದ್ದ ರಿಟ್ ಅರ್ಜಿ ತಿರಸ್ಕೃತಗೊಂಡಿದೆ. ಈ ಮೂಲಕ ಬಿಡುಗಡೆಯ ಕಡೇ ಕ್ಷಣದಲ್ಲಿ ಎದುರಾಗಿದ್ದ ಕಂಟಕವೊಂದರಿಂದ ಚಂಬಲ್ ಬಚಾವಾಗಿದೆ.
ಡಿ ಕೆ ರವಿಯವರ ತಾಯಿ ಗೌರಮ್ಮ ಮತ್ತು ತಂದೆ ಕರಿಯಪ್ಪ ಹೈ ಕೋರ್ಟ್ನಲ್ಲಿ ಅಜೀ ಸಲ್ಲಿಸಿ, ಚಂಬಲ್ ಚಿತ್ರದಲ್ಲಿ ಡಿ ಕೆ ರವಿಯವರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ. ಆದ್ದರಿಂದ ಈ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಈ ಅರ್ಜಿ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಇಂದು ಈ ಬಗ್ಗೆ ವಿಚಾರಣೆ ನಡೆದಿದೆ. ಡಿಕೆ ರವಿಯವರ ತಂದೆ ತಾಯಿ ತಮ್ಮ ವಿಚಾರಗಳ್ನ್ನು ನ್ಯಾಯಾಧೀಶರ ಮುಂದಿಟ್ಟಿದ್ದಾರೆ. ಆದರೆ ಚಂಬಲ್ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಲು ಪೂರಕವಾದ ಯಾವುದೇ ಸಾಕ್ಷಾಧಾರಗಳೂ ಅವರ ಬಳಿ ಇರಲಿಲ್ಲ. ಚಂಬಲ್ ಚಿತ್ರದಲ್ಲಿ ಡಿಕೆ ರವಿಯವರ ಜೀವನದ ಕಥೆಯನ್ನು ಬಳಸಿಕೊಳ್ಳಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನಾಧರಿಸಿ ಈ ಅರ್ಜಿ ಸಲ್ಲಿಸಿದ್ದು ಸ್ಪಷ್ಟವಾಗಿತ್ತು.
ಆದರೆ ಕಡೇ ಕ್ಷಣದಲ್ಲಿ, ಇಷ್ಟು ತಡವಾಗಿ ಇಂಥಾದ್ದರ ಆಧಾರದಲ್ಲಿ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಅಂದಿರುವ ನ್ಯಾಯಾಧೀಶರು ಈ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇದೇ ಹೊತ್ತಿನಲ್ಲಿ ಸಿನಿಮಾ ತಂಡ ಕೂಡಾ ಅಫಿಡವಿಟ್ ಒಂದನ್ನು ನ್ಯಾಯಾಲಯದಲ್ಲಿ ಸಲ್ಲಿಸಿದೆ. ಇಡೀ ಚಿತ್ರದಲ್ಲಿ ಡಿ ಕೆ ರವಿಯವರನ್ನು ಅವಹೇಳನ ಮಾಡುವಂಥಾ, ಅವರ ಘನತೆ ಗೌರವಗಳಿಗೆ ಕುಂದುಂಟಾಗುವಂಥಾ ಯಾವ ಸನ್ನಿವೇಶವೂ ಇಲ್ಲ ಅಂತ ಸ್ಪಷ್ಟಪಡಿಸಿದೆ.ಅಲ್ಲಿಗೆ ಚಂಬಲ್ ಚಿತ್ರದ ಸುತ್ತ ಹರಡಿಕೊಂಡಿದ್ದ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ನಾಳೆ ಈ ಚಿತ್ರ ಅಂದುಕೊಂಡಂತೆಯೇ ಅದ್ದೂರಿಯಾಗಿ ತೆರೆಗೆ ಬರಲಿದೆ.
No Comment! Be the first one.