ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡ ಐಎಎಸ್ ಅಧಿಕಾರಿ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಆತನ ಛಲ. ಅದಕ್ಕೆ ವಿರುದ್ಧವಾಗಿ ನಿಲ್ಲುವ ಎಂ.ಎಲ್.ಎ, ಮಂತ್ರಿಗಳು, ಅವರ ಮಕ್ಕಳು, ರಿಯಲ್ ಎಸ್ಟೇಟ್ ದೊರೆಗಳು. ಯಾವುದನ್ನೂ ಲೆಕ್ಕಿಸದೆ, ಮೇಲಿಂದ ಮೇಲೆ ಎದುರಾಗುವ ವರ್ಗಾವಣೆಯೆಂಬ ತಂತ್ರಕ್ಕೂ ಮಣಿಯದೆ ಸಿಕ್ಕ ಜಾಗದಲ್ಲೆಲ್ಲಾ ಕಳೆ ಕೀಳಲು ಮುಂದಾಗುವ ಅಧಿಕಾರಿಯ ಧೈರ್ಯ. ಆತ ರೇಡು ಮಾಡಿ, ಸೀಜು ಮಾಡಿಕೊಂಡು ಬಂದ ದಾಖಲೆಪತ್ರಗಳನ್ನು ಕಳವು ಮಾಡಲು ಸಂಚು ಹೂಡುವ ಸರ್ಕಾರಿ ಕ್ರಿಮಿಗಳು. ಕ್ರಿಮಿನಲ್ಗಳನ್ನೇ ಬಳಸಿಕೊಂಡು ವ್ಯವಸ್ಥಿತ ಷಡ್ಯಂತ್ರಗಳನ್ನು ರೂಪಿಸುವ ಗೌರ್ಮೆಂಟ್ ಕೇಡಿಗಳ ನಿಯತ್ತು. ಕಡೆಗೊಂದು ಕೊಲೆ. ಅದನ್ನು ಮುಚ್ಚಿಹಾಕಲು ಸ್ಕೆಚ್ಚು ಹಾಕಿ. ಅಂದುಕೊಂಡಂತೇ ಮಾಡಿಮುಗಿಸುವ ದುಷ್ಟಕೂಟ
ನೋ ಡೌಟ್!
ಡಿ.ಕೆ.ರವಿ ಎನ್ನುವ ನಿಷ್ಟಾವಂತ ಅಧಿಕಾರಿಯ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತಲ್ಲಾ? ಆ ಘಟನೆಯ ಸುತ್ತಮುತ್ತಲಿನ ವಿವರಗಳೆನ್ನೆಲ್ಲಾ ಕಲೆಹಾಕಿ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಜೇಕಬ್ ವರ್ಗೀಸ್. ಡಿ.ಕೆ.ರವಿಯ ಸಾವನ್ನು ತಮಗೆ ಬೇಕಾದಂತೆ ತಿರುಚಿಕೊಂಡ ರಾಜಕಾರಣಿಗಳು, ಅವರ ತಂತ್ರಗಳಿಗೆ ವಕಾಲತ್ತು ನೀಡಿದ ಆಗಿನ ಸರ್ಕಾರದ ಕೃಪಾಪೋಷಿತ ಬುದ್ಧಿಜೀವಿಗಳ ಕಣ್ಣಿಗೆ ವರ್ಗೀಸ್ ಅವರ ಸಿನಿಮಾ ಕಟ್ಟುಕಥೆಯೆಂಬಂತೆ ಕಾಣಬಹುದು ಅಥವಾ ಹಾಗಂದು ಅವರೆಲ್ಲಾ ಸುಮ್ಮನಾಗಬಹುದು. ಆದರೆ, ಡಿ.ಕೆ.ರವಿಯವರನ್ನು ಹತ್ತಿರದಿಂದ ಬಲ್ಲ, ಅವರನ್ನು ಅರ್ಥಮಾಡಿಕೊಂಡ ಯಾರಿಗೇ ಆದರೂ ‘ಚಂಬಲ್ ಅನ್ನೋ ಸಿನಿಮಾ ಮೂಲಕವಾದರೂ ಕೇಡುಗರ ಸಂಚಿಗೆ ಬಲಿಯಾದ ರವಿ ಅವರ ಆತ್ಮಕ್ಕೆ ಈಗಲಾದರೂ ಶಾಂತಿ ಸಿಗಬಹುದು’ ಎಂಬ ನಿರುಮ್ಮಳ ಭಾವ ಮೂಡಬಹುದು.
ಚಂಬಲ್ ಅನ್ನೋದು ಕಾರ್ಪೋರೇಟ್ ಮತ್ತು ರಾಜಕೀಯ ಕ್ರಿಮಿಗಳ ಒಳಸುಳಿಗಳನ್ನು ಇಂಚಿಂಚಾಗಿ ಬಿಚ್ಚಿಡುವ ಸಿನಿಮಾ. ಈ ಚಿತ್ರದಲ್ಲಿ ನೀನಾಸಂ ಸತೀಶ್ ಅಧಿಕಾರಿ ರವಿಯವರನ್ನು ಆವಾಹಿಸಿಕೊಂಡವರಂತೆ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಕೊಲೆಯಾಗುವ ದೃಶ್ಯವೊಂದು ಸಾಕು ಸತೀಶ್ ಎಂಥಾ ಅದ್ಭುತ ನಟ ಅನ್ನೋದನ್ನ ತಿಳಿಯಲು. ಇನ್ನು ಸಿನಿಮಾದಲ್ಲಿ ಎಲ್ಲಿಯೂ ಅತಿರಂಜಕವಾದ ಅಂಶಗಳಿಲ್ಲ. ಯಾವುದನ್ನೂ ವಿಜೃಂಭಿಸುವ ಗೋಜಿಗೆ ಹೋಗದೆ ಎಲ್ಲವೂ ಕಣ್ಣಮುಂದೆ ನಡೆದಂತೆ ಕಟ್ಟಿಕೊಡಲಾಗಿದೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಸಹಜ ಸಾವಿನ ಕುರಿತಾಗಿ ಸಾಮಾನ್ಯ ಜನರ ಒಡಲಲ್ಲಿ ಹೊತ್ತಿ ಉರಿಯುತ್ತಿತ್ತಲ್ಲಾ ಜ್ವಾಲೆ.. ಅದು ‘ಚಂಬಲ್’ ಮೂಲಕ ತಕ್ಕ ಮಟ್ಟಿಗಾದರೂ ತಣ್ಣಗಾಗುವಂತೆ ಮಾಡಿದೆ. ಈ ಕಾರಣಕ್ಕೆ ನಿರ್ದೇಶಕ ಜೇಕಬ್ ಮತ್ತು ಸತ್ತ ಅಧಿಕಾರಿಯ ಕುರಿತಾದ ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ ಜೀವ ನೀಡಿದ ಸತೀಶ್ ಅವರನ್ನು ಅಭಿನಂದಿಸಬೇಕು.
ಮೆದುಳನ್ನು ನಿಯತ್ತಿನ ಸಮೇತ ಆಳೋ ಮಂದಿಯ ಬೂಟುಗಾಲುಗಳಿಗೆ ಸಮರ್ಪಿಸಿಕೊಂಡ ಅಧಿಕಾರಿಗಳಿಗೆ ಸಾರ್ವಜನಿಕ ವಲಯದಲ್ಲಿ ಯಾವ ಕಿಮ್ಮತ್ತೂ ಇಲ್ಲ. ಹಾಗೆಂದ ಮೇಲೆ ಅಂಥವರೇ ಸೇರಿ ಕೊಟ್ಟ ಡಿಕೆ ರವಿ ಸಾವಿನ ವರದಿಯನ್ನವರು ಗಂಭೀರವಾಗಿ ಪರಿಗಣೆಸುತ್ತಾರಾ? ಇದು ಕೊಲೆಯಲ್ಲ ಆತ್ಮಹತ್ಯೆ ಅಂತ ಆಳುವ ದುಷ್ಟರು ಬಡ ಬಡಿಸಿದರು. ಕೆಲ ಹೈಪ್ರೊಫೈಲ್ ಎತ್ತುವಳಿವೀರರು ಅದಕ್ಕೆ ಕೋರಸ್ಸು ಹಾಡಿದರು. ಆದರೂ ಜನಸಾಮಾನ್ಯರೊಳಗೊಂದು ಸತ್ಯ ರವಿ ಕುರಿತಾಗಿ ಪ್ರವಹಿಸುತ್ತಿತ್ತಲ್ಲಾ? ಅದಕ್ಕೆ ಜೇಕಬ್ ವರ್ಗೀಸ್ ಕನ್ನಡಿ ಹಿಡಿದಿದ್ದಾರೆ. ಹುಲಿಯಂಥಾ ಮಗನದ್ದು ಆತ್ಮಹತ್ಯೆ ಅಲ್ಲ ಎಂಬ ರವಿಯವರ ಹೆತ್ತವರ ಕರುಳ ಸಂಕಟ ನೀಗಿ ಸುಪ್ತ ಸಮಾಧಾನ ನೀಡುವಂತೆ ಚಂಬಲ್ ಮೂಡಿ ಬಂದಿದೆ.
ಅಧಿಕಾರಶಾಹಿಯ ದುಷ್ಟತನಗಳ ಬೆಚ್ಚಿ ಬೀಳಿಸೋ ದೃಷ್ಯಾವಳಿಗಳನ್ನೂ ಕೂಡಾಜೇಕಬ್ ವರ್ಗೀಸ್ ಅಬ್ಬರವಿಲ್ಲದೆ ಕಟ್ಟಿ ಕೊಟ್ಟಿದ್ದಾರೆ. ಅದಕ್ಕೆ ನೀನಾಸಂ ಸತೀಶ್ ಸಾಥ್ ನೀಡಿರೋ ರೀತಿಯೇ ಅವರನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.
No Comment! Be the first one.