ಈ ವರ್ಷದ ಬಹುನಿರೀಕ್ಷಿತ ಕನ್ನಡ ಚಿತ್ರಗಳನ್ನ ಪಟ್ಟಿ ಮಾಡುವುದಾದರೆ ಅದರಲ್ಲಿ ಚಂಬಲ್ ಸಿನಿಮಾವೂ ನಿಸ್ಸಂಶಯವಾಗಿ ಹೋಗಿ ನಿಲ್ಲುತ್ತದೆ. ತನ್ನ ಹಾಡು, ಟ್ರೇಲರ್, ಟೀಸರ್ಗಳಿಂದಲೇ ಚಂಬಲ್ ಲಕ್ಷಾಂತರ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವುದು ಸದ್ಯದ ವರ್ತಮಾನ. ಈ ಚಿತ್ರದ ಟ್ರೇಲರ್ ನೋಡಿದ ಪುನೀತ್ ರಾಜ್ಕುಮಾರ್ ಇದೊಂದು ಕಲ್ಟ್ ಕ್ಲಾಸಿಕ್ ಸಿನಿಮಾವಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ನಟ ನೀನಾಸಂ ಸತೀಶ್ ಕೂಡಾ ತಮ್ಮ ಕೆರಿಯರ್ನಲ್ಲೇ ಭಿನ್ನವಾದಂಥ ಒಂದು ಪಾತ್ರ ನಿರ್ವಹಿಸಿದ್ದು ಅವರ ಹಾವಭಾವ, ನಡೆನುಡಿ, ಶೈಲಿ ಎಲ್ಲವೂ ಇಲ್ಲಿ ಬದಲಾಗಿದೆ. ಮಾಡಿರುವುದು ಬೆರಳೆಣಿಕೆ ಚಿತ್ರವಾದರೂ ಅದರಲ್ಲೇ ತಾನೊಬ್ಬ ಪ್ರಬುದ್ಧ, ಪ್ರತಿಭಾವಂತ ನಿರ್ದೇಶಕ ಎಂದು ಗುರುತಾಗಿರುವ ಜೇಕಬ್ ವರ್ಗಿಸ್ ಚಂಬಲ್ನ ನಿರ್ದೇಶಕ. ಚಂಬಲ್ ಚಿತ್ರದ ಜರ್ನಿ ಹೇಗಿತ್ತು, ಟ್ರೇಲರ್- ಟೀಸರ್ ನೋಡಿದವರ ಅನಿಸಿಕೆ ಏನು, ಚಂಬಲ್ ಚಿತ್ರವನ್ನ ಏಕಾಗಿ ನೋಡಬೇಕು.. ಈ ಎಲ್ಲದರ ವಿವರಣೆ ನಿಮಗಾಗಿ.
ಇದು ನನ್ನ ಇಮೇಜ್ ಬದಲಿಸಿದ ಚಿತ್ರ!
ಚಂಬಲ್ ಒಂದು ಥ್ರಿಲ್ಲರ್ ಸಿನಿಮಾ. ನೋಡುಗರಿಗೆ ಇದೊಂದು ಹೊಸ ಬಗೆಯ ಸಿನಿಮಾವಾಗುವ ಭರವಸೆ ನನಗಿದೆ. ನೀನಾಸಂ ಸತೀಶ್ನ ಇಲ್ಲೀವರೆಗೂ ಜನ ಹೇಗೆ ನೋಡಿದ್ದರೋ ಅದಕ್ಕಿಂತ ಭಿನ್ನವಾಗಿ ಇಲ್ಲಿ ತೋರಿಸಲಾಗಿದೆ. ನನ್ನ ಡ್ರಾಮಾ, ಲವ್ ಇನ್ ಮಂಡ್ಯದಂಥ ನಟನೆ, ಭಾಷಾ ಶೈಲಿ ಯಾವುದೂ ಇಲ್ಲಿಲ್ಲ. ಒಬ್ಬ ಅಧಿಕಾರಿಯ ಪಾತ್ರ ನನ್ನದು.
ಜನರ ನಡುವೆ ಇರುವ ಬಾಳುವ, ಅವರಿಗಾಗಿ ಎಂಥ ವಿರೋಧವನ್ನ ಬೇಕಾದರೂ ಎದುರಿಸಿ ನಿಲ್ಲಬಲ್ಲಂಥ ಪ್ರಾಮಾಣಿಕ ಅಧಿಕಾರಿಯೊಬ್ಬನ ಕಥೆ ಇಲ್ಲಿದೆ. ನನಗೆ ತುಂಬಾ ಇಷ್ಟವಾಗಿದ್ದು ಈ ಚಿತ್ರಕ್ಕೆ ಜೇಕಬ್ ವರ್ಗಿಸ್ರವರು ಹೆಣೆದಿರುವ ಚಿತ್ರಕಥೆ. ಅದು ತುಂಬಾ ಆಸಕ್ತಿಕರವಾಗಿದೆ. ಮೊದಲಾರ್ಧ ಎಲ್ಲವೂ ಕ್ಲಿಯರಾಗಿ ಅರ್ಥವಾಗುವುದಿಲ್ಲ. ಗೊಂದಲಗಳು ಉಳಿದುಕೊಳ್ಳಬಹುದು. ಇದ್ಯಾಕೆ ಹೀಗೆ, ಅದ್ಯಾಕೆ ಹಾಗಾಯ್ತು? ಈ ಪಾತ್ರ ಏಕೆ ಬಂತು? ಈ ರೀತಿ ಪ್ರಶ್ನೆಗಳನ್ನ ಹುಟ್ಟಿಹಾಕುತ್ತದೆ. ಆದರೆ ಅದೆಲ್ಲದಕ್ಕೂ ಕೊನೆಯ ಮೂವತ್ತು ನಿಮಿಷದಲ್ಲಿ ಉತ್ತರವಿದೆ. ಯಾವುದೇ ಗೊಂದಲಗಳಿಲ್ಲದೆ ’ಓಹ್ ಹೀಗಾ?!’ ಎಂದು ಪ್ರೇಕ್ಷಕ ಬೆರಗಾಗಿ ಅರ್ಥೈಸಿಕೊಳ್ಳುವಂಥ ಕನ್ಕ್ಲೂಷನ್ ಸಿಗುತ್ತದೆ. ಈ ಚಿತ್ರವನ್ನ ಗೆಲ್ಲಿಸುವುದೇ ಆ ಅಂಶ ಅನ್ನೋದು ನನ್ನ ನಂಬಿಕೆ.
ಚಂಬಲ್ನಲ್ಲಿ ಎಲ್ಲವೂ ಇದೆ. ರಾಜಕಾರಣ, ಆಡಳಿತಶಾಹಿ ವ್ಯವಸ್ಥೆ, ಭ್ರಷ್ಟಾಚಾರದ ಕರಾಳ ಮುಖ, ಪ್ರೇಮಕಥೆ, ಹಾಸ್ಯ ಮನರಂಜನೆ ಯಾವುದಕ್ಕೂ ಕೊರತೆಯಿಲ್ಲ. ನಾಲ್ಕು ಉತ್ತಮ ಹಾಡುಗಳಿವೆ. ಡ್ರಾಮಾ, ಥ್ರಿಲ್ ಎಲ್ಲವೂ ಸಿಕ್ಕುವಂಥ ಚಿತ್ರವಿದು. ಲೂಸಿಯಾ ಆದ ಮೇಲೆ ನಾನು ಮಾಡಿದ ಮತ್ತೊಂದು ಪ್ರಯೋಗಾತ್ಮಕ ಚಿತ್ರ ಚಂಬಲ್. ಈ ಚಿತ್ರದಲ್ಲಿ ನನ್ನ ಲುಕ್ ಬದಲಾಗಿದೆ. ಅಧಿಕಾರಿಯ ಗಾಂಭೀರ್ಯ ಅಳವಡಿಕೆ ಮಾಡಿಕೊಳ್ಳಬೇಕಾಗಿತ್ತು. ಮಾತಿಗಿಂತ ಕೃತಿಗೆ ಇಲ್ಲಿ ಹೆಚ್ಚಿನ ಸ್ಕೋಪ್ ಇದೆ. ಹೀಗಾಗಿ ಸವಾಲಿನ ಕೆಲಸ ಅಂದುಕೊಂಡೇ ಕೆಲಸ ಶುರುಮಾಡಿದೆ. ಸಿನಿಮಾ ನೋಡಿಯಾದ ಮೇಲೆ ಈ ಪಾತ್ರ ಒಪ್ಪಿಕೊಂಡು ಒಳ್ಳೇ ಕೆಲಸ ಮಾಡಿದೆ ಎನ್ನಿಸಿತು.
ಜೇಕಬ್ ವರ್ಗಿಸ್ ಉತ್ತಮ ನಿರ್ದೇಶಕ ಎಂದು ಹೆಸರಾದವರು. ಅವರ ಕೆಲಸಗಳಿಗೆ ಮನ್ನಣೆ ಸಿಕ್ಕಿದೆ. ಚಂಬಲ್ನಲ್ಲೂ ಅವರು ಅದನ್ನ ಮರುಸೃಷ್ಟಿಸಿದ್ದಾರೆ. ಸಿನಿಮಾ ರೆಡಿಯಾದ ಮೇಲೆ ’ಚಿತ್ರ ಹೇಗೆ ಮೂಡಿ ಬಂದಿದೆ ಸರ್?’ ಎಂದು ಒಂದ್ಸಲ ಪ್ರಶ್ನೆ ಮಾಡಿದೆ. ’ಚೆನ್ನಾಗಿದೆ’ ಎಂದು ಸುಮ್ಮನಾದರು. ಆದರೆ ನಾನು ಬಿಡಲಿಲ್ಲ. ’ಇಲ್ಲ ಹೇಳಿ.. ನನಗೆ ನಿಮ್ಮಿಂದ ಸ್ಪಷ್ಟ ಚಿತ್ರಣ ಬೇಕು’ ಅಂದೆ. ಆಗ ಅವರು ಹೇಳಿದ್ದು ಒಂದೇ ಮಾತು- ’ನನ್ನ ಇಲ್ಲೀವರೆಗಿನ ಎಲ್ಲಾ ಸಿನಿಮಾಗಳನ್ನ ಸರತಿಯಲ್ಲಿ ನಿಲ್ಲಿಸಿದರೆ ಇದು ಅದರಲ್ಲಿ ಮೊದಲಾಗಿ ನಿಲ್ಲುವಂಥದ್ದು..’
ಒಬ್ಬ ನಟನಾಗಿ ನನಗೆ ಇದಕ್ಕಿಂತ ಬೇರೇನು ಬೇಕು? ಚಂಬಲ್ ಗೆಲುವಿನ ಬಗ್ಗೆ ಆತ್ಮವಿಶ್ವಾಸ ಮತ್ತೂ ಹೆಚ್ಚಾಯ್ತು. ಟ್ರೇಲರ್ ಬಿಡುಗಡೆಯಾದ ಮೇಲೆ ಅದನ್ನ ನೋಡಿ ಜನ ನೀಡುತ್ತಿರುವ ಪ್ರತಿಕ್ರಿಯೆ ಇದೆಯಲ್ಲ.. ಅದು ಅಭೂತಪೂರ್ವ. ಬೇರೆ ಭಾಷೆಯ ಚಿತ್ರರಂಗದವರು, ನಮ್ಮ ಇಂಡಸ್ಟ್ರಿಯವರು, ಸಾಮಾನ್ಯ ಪ್ರೇಕ್ಷಕರು ಎಲ್ಲರೂ ಈ ಚಿತ್ರದ ಬಗ್ಗೆ ಭರವಸೆ ಇಟ್ಟುಕೊಂಡು ಮಾತಾಡುತ್ತಿದ್ದಾರೆ. ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ನಮಗೆ ಸಿಕ್ಕಿರುವ ದೊಡ್ಡ ಗೆಲುವು ಇದೇ ಎಂದು ನಾನು ಭಾವಿಸಿದ್ದೇನೆ..’
#
No Comment! Be the first one.