ಹಾಡುವುದೋ? ಕುಣಿಯುವುದೋ? ನಗಿಸುವುದೋ? ಅಳುವುದೋ? ಒಂದು ಕಾಂಪಿಟೇಷನ್ನು. ಆಯಾ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳು ಗೆಲ್ಲುವ ಹಂಬಲದಲ್ಲಿಯೇ ಸ್ಪರ್ಧಿಸುತ್ತಾರೆ. ತಮ್ಮ ಶಕ್ತಿ ಮೀರಿದ ಪ್ರಯತ್ನವನ್ನು ಮಾಡುತ್ತಲೇ ರಿಯಾಲಿಟಿ ಶೋಗಳಲ್ಲಿ ಉಳಿಯುತ್ತಾರೆ. ಜೊಳ್ಳುಗಳಾಗಿದ್ದರೆ ಕಾರ್ಯಕ್ರಮದಿಂದ ಹೊರಬರುತ್ತಾರೆ. ಅಸಾಧಾರಣ ಪ್ರತಿಭೆಗಳಾಗಿದ್ದರೆ ಫಿನಾಲೆ ತಲುಪುತ್ತಾರೆ. ಅದೃಷ್ಟವಿದ್ದವರು ಗೆಲುವಿನ ಕಿರೀಟವನ್ನು ತೊಟ್ಟು ರಾರಾಜಿಸುತ್ತಾರೆ.
ಕಾಂಪಿಟೇಶನ್ನು ಅಂದ್ರೆ ಹೇಗಿರುತ್ತೆ. ಅಲ್ಲಿ ಸ್ಪರ್ಧೆ ಯಾವ ಮಟ್ಟಕ್ಕಿರುತ್ತದೆ. ಸ್ಪರ್ಧಿಗಳನ್ನು ಅಳೆದು ತೂಗುವ ಜಡ್ಜ್ ಗಳು ಹೇಗಿರುತ್ತಾರೆ. ಯಾವೆಲ್ಲ ಮಾನದಂಡಗಳಿಂದ ಸರಿ, ತಪ್ಪುಗಳನ್ನು ಕಂಡು ಹಿಡಿಯುತ್ತಾರೆ. ತಿದ್ದುತ್ತಾರೆ. ಕಿವಿ ಹಿಂಡುತ್ತಾರೆ. ಮನಗೆದ್ದರೆ ಎದ್ದು ಚಪ್ಪಾಳೆ ತಟ್ಟುತ್ತಾರೆ ಎನ್ನುವುದನ್ನು ಪ್ರತಿನಿತ್ಯ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನೋಡಿಯೇ ಏಳುತ್ತಿದ್ದೇವೆ. ಮಲಗುತ್ತಿದ್ದೇವೆ. ಅಂತಹುದೇ ಕಾರ್ಯಕ್ರಮಗಳ ಮೂಲಕ ರೇಸಿಗೆ ಬಿದ್ದಿರುವ ಮನರಂಜನಾ ವಾಹಿನಿಗಳಲ್ಲಿ ಕಲರ್ಸ್ ಕನ್ನಡ ಪ್ರಮುಖವಾದದ್ದು. ಈ ವಾಹಿನಿ ಬಿಗ್ ಬಾಸ್, ಮಜಾ ಭಾರತ, ತಕದಿಮಿತ, ಕನ್ನಡದ ಕೋಗಿಲೆಯಂತಹ ಸಾಕಷ್ಟು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನಗೆದ್ದಿದೆ. ಹೊಸ ಮುಖಗಳನ್ನು ಪರಿಚಯಿಸುವ ಮಹಾನ್ ಕಾರ್ಯವನ್ನು ಮಾಡಿ ಎಲ್ಲೋ ಇದ್ದ ಅಸಾಧಾರಣ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸುತ್ತಿದೆ. ಇದಕ್ಕೆ ಎಲ್ಲರೂ ಭೇಷ್ ಎನ್ನಲೇಬೇಕು. ಅನ್ನೋಣ. ಆದರೆ ಕೆಲವೊಂದು ವಿಚಾರಗಳಲ್ಲಿ ಕಲರ್ಸ್ ಕನ್ನಡ ಆರೋಪಗಳನ್ನು ಎದುರಿಸುತ್ತಿದೆ.
ಕನ್ನಡದ ಕೋಗಿಲೆ ಕಾರ್ಯಕ್ರಮ ಮಾಡಿದ ಮೊದಲ ಮಿಸ್ಟೇಕು!
ಬಿಗ್ ಬಾಸ್ ಸೀಸನ್ 5 ಮುಗಿಯುತ್ತಿದ್ದಂತೆ ಕನ್ನಡದ ಕೋಗಿಲೆ ಕಾರ್ಯಕ್ರಮ ಆರಂಭವಾಯಿತು. ಆ ಕಾರ್ಯಕ್ರಮಕ್ಕೆ ಮೂರು ಜನ ತೀರ್ಪುಗಾರರ ಪೈಕಿ ಅದ್ಯಾವ ಮಾನದಂಡದ ಮೇಲೆ ಆಗಷ್ಟೇ ಬಿಗ್ ಬಾಸ್ ಮುಗಿಸಿ, ವಿಜೇತನ ಪಟ್ಟದಲ್ಲಿ ಹೊರಬಂದಿದ್ದ ಪೀಚು ಹುಡುಗ Rap ಸ್ಟಾರ್ ಚಂದನ್ ಶೆಟ್ಟಿಯನ್ನು ಸೆಲೆಕ್ಟ್ ಮಾಡಿಬಿಟ್ಟಿತೋ? ಆ ಟೈಮಿನಲ್ಲಿ ಅದೇ ಗೊಂದಲದಲ್ಲಿ ಪ್ರೇಕ್ಷಕ ಮಹಾಪ್ರಭುಗಳಿದ್ದದ್ದು ಸೋಶಿಯಲ್ ಮೀಡಿಯಾದಲ್ಲಿ ಆದ ಟ್ರೋಲು, ಟೀಕೆಗಳಿಂದಲೇ ಗೊತ್ತಾಗುತ್ತದೆ.
ಕೇವಲ ವಿನ್ನರ್ ಎನ್ನುವ ಮಾನದಂಡವಿದ್ದ ಮಾತ್ರಕ್ಕೆ ತೀರ್ಪುಗಾರನಾಗಬಹುದೇ ಎನ್ನುವ ಕುಚೋದ್ಯವನ್ನು ಸಾಕಷ್ಟು ಮಂದಿ ನೇರವಾಗಿ ಮಾಡಿದ್ದುಂಟು. ಆದರೆ ಎದ್ದ ಪ್ರಶ್ನೆಗಳಿಗೆ ಉತ್ತರಿಸುವ ವ್ಯವದಾನ ಪರಮೇಶ್ವರ್ ಗುಂಡ್ಕಲ್ ಗೆ ಬಾರದಿರುವುದು ದುರಂತ. ಅಂದರೆ ನಮ್ಮ ಕರ್ನಾಟಕದಲ್ಲಿ ಆ ಸ್ಥಾನದಲ್ಲಿ ಕೂರಲು ಚಂದನ್ ಶೆಟ್ಟಿಗಿಂತ ಮಿಗಿಲಾದ ಸಂಗೀತ ವಿದ್ವಾಂಸರು ಇರಲಿಲ್ಲವೇನೋ, ಬಿಗ್ ಬಾಸ್ ಸೀಜನ್ 5ರ ಗೆಲುವು ಆತನಿಗೆ ತೀರ್ಪುಗಾರನಾಗುವ ಪಟ್ಟ ಕೊಟ್ಟಿತೇನೋ! ಶೆಟ್ಟಿಯನ್ನು ಕಲರ್ಸ್ ಕನ್ನಡ ಜಡ್ಜ್ ಮಾಡಿಬಿಟ್ಟಿತು. ಒಪ್ಪೋಣ ಹಾಗಂತ ಆತ ಬಹುಮುಖ ಪ್ರತಿಭೆ ಸಾಧುಕೋಕಿಲಾ ಪಕ್ಕ ಕೂರುವಷ್ಟು ಯೋಗ್ಯನಾದವನೇ ಎಂಬುದನ್ನಾದರೂ ಯೋಚಿಸದೇ ಯಾಕೆ ವಾಹಿನಿ ದಡ್ಡತನ ಪ್ರದರ್ಶನ ಮಾಡಿತೋ! ಅಂದರೆ ವಿನ್ನರ್ ಎಂಬ ಪಟ್ಟ ಅವೆಲ್ಲವನ್ನೂ ತಿಮಿಂಗಲದಂತೆ ನುಂಗಿ ಹಾಕಿಬಿಟ್ಟಿತೇ..
ಕನ್ನಡದ ಕೋಗಿಲೆ ಎರಡನೇ ಸೀಜನ್ನಿಗೂ ತಟ್ಟಿದೆ ಕಳಂಕ!
ಮೊದಲನೇ ಸೀಜನ್ ಮುಗಿಸಿ ಸದ್ಯ ಎರಡನೇ ಸೀಜನ್ ನಲ್ಲಿರುವ ಕನ್ನಡದ ಕೋಗಿಲೆ ಕಾರ್ಯಕ್ರಮದಲ್ಲಿ ಈಗಲೂ ಹೊಸ ಮುಖಗಳ ಪ್ರವೇಶವಾಗಿದೆ. ಅದರಲ್ಲೂ ಕೊಪ್ಪಳದ ದೇಸಿ ಪ್ರತಿಭೆ ಅರ್ಜುನ್ ಇಟಗಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ನಟನೆ, ನೃತ್ಯ, ಹಾಡು ಎಲ್ಲವನ್ನೂ ಒಮ್ಮೆಲೆ ಮಾಡುವ ಮೂಲಕ ತೀರ್ಪುಗಾರರನ್ನೇ ದಿಗ್ಬ್ರಮೆಗೊಳಿಸುವ ತಾಕತ್ತು ಆ ಕಿರಿಯ ಹುಡುಗನಿರುವುದು ಎಲ್ಲರೂ ಮೆಚ್ಚುವಂತದ್ದು. ಆದರೆ ಚಂದನ್ ಶೆಟ್ಟಿ ಮಾಡಿದ ಒಂದು ಅವಾಂತರ ಶುದ್ಧವಾಗಿದ್ದ ಆತನ ಪ್ರತಿಭೆಯನ್ನು ಎಲ್ಲರೂ ಅನುಮಾನಿಸಿ ನೋಡುವಂತೆ ಮಾಡುತ್ತಿದೆ.
ಹೌದು ಇತ್ತೀಚಿಗೆ ತೀರ್ಪುಗಾರ ಚಂದನ್ ಶೆಟ್ಟಿ ಕಾರ್ಯಕ್ರಮದ ಹೊರತಾಗಿ ಅರ್ಜುನ್ ಜತೆ ವಿಡಿಯೋವೊಂದನ್ನು ಮಾಡಿದ್ದಾರೆ. ಆ ವಿಡಿಯೋ ದಲ್ಲಿ ಅರ್ಜುನ್ `ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗುತಿ’ ಎಂದು ಹಾಡೊಂದನ್ನು ಹಾಡಿದ್ದಾನೆ. ಅವನ ಜತೆಗೆ ಚಂದನ್ ಶೆಟ್ಟಿಯೂ ಹ್ಯಾಂಡ್ ಮ್ಯೂಸಿಕ್ ನಲ್ಲಿ ದನಿಯಾಗಿದ್ದಾರೆ. ಈ ವಿಡಿಯೋವನ್ನು ಅಧಿಕೃತವಾಗಿ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಅಲ್ಲದೇ ಹೆಲೋ, ಯೂಟ್ಯೂಬ್, ಇನ್ ಸ್ಟಾಗ್ರಾಂ ಸೇರಿದಂತೆ ಆ ವಿಡಿಯೋ ಎಲ್ಲೆಲ್ಲೂ ರಾರಾಜಿಸುತ್ತಿದೆ. ಇಷ್ಟೆಲ್ಲಾ ಆದರೂ ಕಲರ್ಸ್ ಕನ್ನಡ ಕ್ರಿಯೇಟೆವ್ ಹೆಡ್ ಪರಮೇಶ್ವರ್ ಗುಂಡ್ಕಲ್ ಯಾಕಪ್ಪ ಧೃತರಾಷ್ಟ್ರನ ಮೌನ ವಹಿಸಿದ್ದಾರೆ ಎಂಬುದೇ ಸದ್ಯದ ಪ್ರಶ್ನೆ. ಅರೇ ಅಂತದ್ದೇನಾಯ್ತು.. ಅಂತ ಯೋಚನೆ ಮಾಡ್ತಿದ್ದೀರಾ?
ಚಂದನ್ ಶೆಟ್ಟಿ ಏನು ಮಾಡಿದ್ರಪ್ಪ!
ತೀರ್ಪುಗಾರರಾದವರಿಗೆ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ಆ್ಯಂಕರ್ ಗಳಂತೆ, ಸ್ಟುಡಿಯೋದಲ್ಲಿ ಕುಳಿತಿರುವ ಆಡಿಯನ್ಸ್ ಗಳಂತೆ ರಿಯಾಕ್ಟ್ ಮಾಡುವಷ್ಟರ ಮಟ್ಟಿಗೆ ಅವರ ಸ್ಥಾನಮಾನವಿರುವುದಿಲ್ಲ. ಅವರ ಪ್ರತಿ ನಿರ್ಧಾರಗಳು, ಮಾತು, ರಿಯಾಕ್ಷನ್ನುಗಳು ಆಯಾ ಸ್ಪರ್ಧಿಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮವನ್ನುಂಟು ಮಾಡುತ್ತಿರುತ್ತಿರುತ್ತದೆ.
ಹೀಗಿರುವಾಗ ತೀರ್ಪುಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದನ್ ಶೆಟ್ಟಿ ಸ್ಪರ್ಧಿಯಾಗಿರುವ ಒಬ್ಬ ಹುಡುಗನನ್ನು ಪಕ್ಷಪಾತ ಮಾಡುವ ಮೂಲಕ ಆತನೊಂದಿಗೆ ಶೂಟಿಂಗ್ ಹೊರತಾಗಿಯೂ ಕೂತು ಹಾಡುವುದು ಎಷ್ಟರಮಟ್ಟಿಗೆ ಸರಿ. ಇದರಿಂದ ಉಳಿದ ಸ್ಪರ್ಧಿಗಳಿಗೆ ಹೊಡೆತ ಬೀಳುವುದಿಲ್ಲವೇ. ಅಕಸ್ಮಾನ್ ಅರ್ಜುನ್ ಗೆದ್ದದ್ದೇ ಆದರೆ ಅವನ ಗೆಲುವಿಗೆ ಅನುಮಾನ ವ್ಯಕ್ತವಾಗುವುದಿಲ್ಲವೇ. ಪರೋಕ್ಷವಾಗಿ ಪ್ರೊಮೋಷನ್ ಮಾಡಿ ಚಂದನ್ ಶೆಟ್ಟಿ ಅರ್ಜುನ್ ಅವರನ್ನು ಗೆಲ್ಲಿಸಿದ್ದಾರೆ ಎಂಬ ಅಪವಾದಕ್ಕೆ ಈಡಾಗುವುದಿಲ್ಲವೇ. ಅದರಲ್ಲೂ ಉಳಿದೆಲ್ಲಾ ಸ್ಪರ್ಧಿಗಳಿಗಿಂತ ಅರ್ಜುನನ ಮೇಲೆ ಯಾಕಷ್ಟು ಕೇರು… ಏನಾದ್ರೂ ಕಮಿಂಟ್ ಮೆಂಟಾ?
https://www.youtube.com/watch?v=FiimC7MG51s
ಕರ್ನಾಟಕದಲ್ಲಿ ಇದೇ ಮೊದಲ ಅವಾಂತರ!
ಒಂದು ಕ್ಯಾಶ್ ಫ್ರೈಸ್ ಕಾರ್ಯಕ್ರಮದಲ್ಲಿ ಶೂಟಿಂಗ್ ಹೊರತಾಗಿ ತೀರ್ಪುಗಾರರು ಸ್ಪರ್ಧಿಗಳ ಜತೆ ನಂಟು ಇಟ್ಟುಕೊಳ್ಳುವುದಾಗಲಿ, ಖಾಸಗಿಯಾಗಿ ಮಾತನಾಡುವುದಾಗಲಿ ಮಾತನಾಡುವಂತಿಲ್ಲ. ಕರ್ನಾಟಕದಲ್ಲಿ ಇಲ್ಲಿಯವರೆವಿಗೂ ನಡೆದಿರುವ ಎಲ್ಲ ರಿಯಾಲಿಟಿ ಶೋಗಳು, ಸ್ಪರ್ಧೆಗಳು, ಕಾರ್ಯಕ್ರಮಗಳು ಅದನ್ನೇ ಫಾಲೋ ಮಾಡಿಕೊಂಡು ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಸ್ಟ್ರಾಂಗ್ ಆಗಿ ಸಕ್ರಿಯರಾಗಿರುವ ಸುದೀಪ್ ಬಿಗ್ ಬಾಸ್ ನ ಕಳೆದ ಆರು ಸೀಸನ್ ಗಳನ್ನು ಹೋಸ್ಟ್ ಮಾಡುತ್ತಿದ್ದಾರೆ. ಅವರೆಂದಿಗೂ ಯಾವೊಬ್ಬ ಸ್ಪರ್ಧಿಯ ಜತೆಗೆ ಕಾರ್ಯಕ್ರಮದ ಹೊರತಾಗಿ ಮಾತನಾಡುವುದಾಗಲಿ, ಯಾವೊಬ್ಬ ಸ್ಪರ್ಧಿಯ ಪರವಾಗಿ ಟ್ವೀಟ್ ಮಾಡುವುದಾಗಲಿ ಮಾಡಿದ್ದಾರೆಯೇ..? ಇಲ್ಲ.
ಅವರು ಪ್ರತಿಭೆಗಳನ್ನು ಗೌರವಿಸುವುದಿಲ್ಲ, ಬೆಳೆಸುವುದಿಲ್ಲ ಅಂತಲ್ಲಾ ಅಲ್ವೇ. ಅವರೂ ಎಲ್ಲರನ್ನೂ ಸಮನಾಗಿ ನೋಡುತ್ತಿದ್ದಾರೆ ಎಂಬುದಷ್ಟೇ ಅಲ್ಲಿ ಕಾಣಸಿಗುವ ಉತ್ತರ. ಜತೆಗೆ ತೀರ್ಪುಗಾರನಿಗೆ ಇರಬೇಕಾದ ಬುದ್ದಿವಂತಿಕೆ, ಪ್ರಬುದ್ಧತೆ, ನಿಖರತೆ, ಪಾರದರ್ಶಕತೆ ಎಲ್ಲರೂ ಕಿಚ್ಚ ಸುದೀಪ್ ಗೆ ಇದ್ದದ್ದಕ್ಕೆ ಆರು ಸೀಸನ್ ನಿಂದಲೂ ಮಿಸ್ಟರ್ ಫರ್ಫೆಕ್ಟ್ ಆಗಿ ಉಳಿದಿದ್ದಾರೆ. ಪ್ರಾರಂಭದಿಂದಲೂ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಚಂದನ್ ಶೆಟ್ಟಿ ಅದಾವ ಪ್ರಬುದ್ಧನೋ.. ಸಾಮಾಜಿಕ ಜವಾಬ್ದಾರಿಯಿಲ್ಲದೇ ಚೈಲ್ಡ್ ನಂತಾಡುವ ಅವನಿಂದ ಉಳಿದ ಗಣ್ಯರಿಗೇಕೆ ಅವಮಾನ ಮಾಡುವ ಹುನ್ನಾರ ಪರಮೇಶ್ವರ್ ಗುಂಡ್ಕಲ್ ಮಾಡುತ್ತಿದ್ದಾರೋ ಗೊತ್ತಿಲ್ಲ.
ಹಾಗಂತ ಚಿಕ್ಕ ಹುಡುಗನನ್ನು ಪ್ರೊತ್ಸಾಹಿಸುವುದು ತಪ್ಪು ಎಂತಲ್ಲ. ಆತನೇನು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದ ಜ್ಞಾನ, ಪರಿಣಿಕ ವಯಸ್ಸಿನವನೇ ಅಲ್ಲ..! ಅವರಂತೆ ಸ್ಪೆಷಲ್ ಕ್ಯಾಂಡಿಡೇಟು ಅಲ್ಲವಲ್ಲ…! ಹಾಗಿದ್ದರೂ ವಿಶೇಷವಾಗಿ ಆತನನ್ನು ನಡೆಸಿಕೊಳ್ಳುವುದರಿಂದ ಕನ್ನಡದ ಕೋಗಿಲೆ ಕಾರ್ಯಕ್ರಮಕ್ಕಿರುವ ವ್ಯಾಲ್ಯೂ ಹಾಳಾಗುವುದಿಲ್ಲವೇ.. ಇರಲಿ ಮಾಡಿದವರ ಪಾಪ ಆಡಿದವರ ಬಾಯಿಗೆ. ನಿದ್ರೆಯಲ್ಲಿರುವ ಕಲರ್ಸ್ ಕನ್ನಡದ ಕ್ರಿಯೇಟಿವ್ ಹೆಡ್ಡು.. ಎಚ್ಚರಗೊಂಡು ಇಂತಹ ಅವಘಡಗಳು ನಡೆಯದಂತೆ ಇನ್ನಾದರೂ ಎಚ್ಚರ ವಹಿಸಲಿ. ಟಿ ಆರ್ ಪಿ ಗಾಗಿ ಅಪ್ರಬುದ್ಧರನ್ನು ತೂಕದ ಸ್ಥಾನಗಳಲ್ಲಿ ಕುಳ್ಳರಿಸಿ ಕಳಂಕ ತರುವ ದಡ್ಡತನವನ್ನು ಮಾಡದೇ ಇನ್ನಾದರೂ ತಿದ್ದಿಕೊಳ್ಳಲಿ… ಮೇ ಗಾಡ್ ಬ್ಲೆಸ್ ಯೂ…
– ಸಚಿನ್ ಕೃಷ್ಣ
No Comment! Be the first one.