ಸಿನಿಮಾ ರಂಗಕ್ಕೆ ಚಲನಚಿತ್ರ ಪತ್ರಕರ್ತರ ಕೊಡುಗೆ ಅಪಾರ. ಅದೊಂದು ರೀತಿಯಲ್ಲಿ ಕೊಡುಕೊಳ್ಳುವಿಕೆ ಸಂಬಂಧ. ಇಂಥದ್ದೊಂದು ಬಾಂಧವ್ಯಕ್ಕೆ ಏಳು ದಶಕಗಳ ಇತಿಹಾಸವೇ ಇದೆ. ತಿ.ತಾ ಶರ್ಮ, ದೇವುಡು, ಅನಕೃ, ಚದುರಂಗ, ನಾ.ಕಸ್ತೂರಿ, ನಾಡಿಗೇರ ಕೃಷ್ಣಮೂರ್ತಿ, ಮಾ.ನಾ ಚೌಡಪ್ಪ, ಎಂ.ಬಿ.ಸಿಂಗ್, ವಿ.ಎನ್.ಸುಬ್ಬರಾವ್, ಸಿ.ಸೀತಾರಾಮ್, ಪಿ.ಜಿ.ಶ್ರೀನಿವಾಸ ಮೂರ್ತಿ, ಎ.ಎಸ್.ಮೂರ್ತಿ, ವಿಜಯಮ್ಮ, ಬಾಲಕೃಷ್ಣ ಕಾಕತ್ಕರ್, ಎನ್.ಎಸ್. ಶಂಕರ್ ಸೇರಿದಂತೆ ಅನೇಕ ಹೆಸರಾಂತ ಸಾಹಿತಿಗಳು ಮತ್ತು ಪತ್ರಕರ್ತರು ಸಿನಿಮಾ ಉದ್ಯಮದ ಬೆಳವಣಿಗೆಗೆ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ಮೂಕಿ ಚಿತ್ರಗಳ ಕಾಲದಿಂದಲೂ ಜತೆ ಜತೆಯಾಗಿಯೇ ಹೆಜ್ಜೆಹಾಕಿದ್ದಾರೆ.
ಕೇವಲ ಸಿನಿಮಾ ರಂಗದ ಬೆಳವಣಿಗೆಗೆ ಮಾತ್ರವಲ್ಲ, ಚಿತ್ರೋದ್ಯಮವನ್ನು ಒಟ್ಟಾಗಿಸಿಕೊಂಡು ಕರ್ನಾಟಕದ ಅನೇಕ ಸಂಕಷ್ಟಗಳಿಗೆ ಮಿಡಿದ ಹೆಗ್ಗಳಿಕೆ ಚಲನಚಿತ್ರ ಪತ್ರಕರ್ತರದ್ದು. ಸಿನಿಮಾ ಕಲಾವಿದರ, ತಂತ್ರಜ್ಞರ, ನಿರ್ಮಾಪಕರ ಹೀಗೆ ಎಲ್ಲಾ ವಲಯಗಳ ಖುಷಿಯಲ್ಲಿ ಒಂದಾಗುತ್ತಾ, ಕಷ್ಟಕ್ಕೆ ಸ್ಪಂದಿಸುತ್ತಾ ಸಾಗುತ್ತಿದ್ದಾರೆ. ಇಂತಹ ಸಾಗುವ ಸಾಧನೆಗೆ ಈಗ ಮತ್ತೊಂದು ಮಜಲು “ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ”. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮೀಡಿಯಾ, ವೆಬ್ ಪತ್ರಿಕೋದ್ಯಮದ ಹಿರಿಯ ಸಿನಿಮಾ ಪತ್ರಕರ್ತರ ಜತೆ ಜತೆಗೆ ಕಿರಿಯ ಪತ್ರಕರ್ತರು ಒಂದಾಗಿ ಕಟ್ಟಿಕೊಂಡ ಕನಸೇ ಈ ಅಕಾಡೆಮಿ. ಇದು ದಕ್ಷಿಣ ಭಾರತ ಚಲನಚಿತ್ರ ರಂಗದ ಇತಿಹಾಸದಲ್ಲೇ ಮೊದಲ ಹೆಜ್ಜೆ. ಸಿನಿಮಾಗಳು ಸರಿ ಅನಿಸಿದಾಗ ಪ್ರೋತ್ಸಾಹಿಸುತ್ತಾ, ತಪ್ಪಿದಾಗ ತಿದ್ದುವುದು ವಿಮರ್ಶಕರ ಕೆಲಸ. ಇದೇ ಮೊದಲ ಬಾರಿಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ “ಕನ್ನಡ ಚಿತ್ರ ವಿಮರ್ಶಕರ ಪ್ರಶಸ್ತಿ’ಯನ್ನು ನೀಡುವ ಪ್ರತೀತಿ ಆರಂಭಿಸುತ್ತಿದೆ. ಹತ್ತಾರು ಕನಸು, ಹೊಸ ಯೋಜನೆಗಳೊಂದಿಗೆ ಕಾರ್ಯಾರಂಭ ಮಾಡಲು ಹೊರಟಿದೆ. ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿ ನೀಡಲು ಈ ಉತ್ಸಾಹಿ ತಂಡ ಮುಂದಾಗಿದ್ದು, ೨೦ ಪ್ರಶಸ್ತಿಗಳಲ್ಲಿ ಸಿನಿಮಾ ಪತ್ರಕರ್ತರೇ ನಾಮಿನೇಟ್ ಮಾಡಿ ಸಮಾರಂಭದ ದಿನದಂದು ವಿಜೇತರ ಘೋಷಣೆ ಮಾಡುವುದು ಈ ಪ್ರಶಸ್ತಿಯ ವಿಶೇಷತೆಗಳಲ್ಲೊಂದು.
ಹಿರಿಯ ಪತ್ರಕರ್ತರಾದ ಬಿ.ಎನ್ ಸುಬ್ರಮಣ್ಯ, ಗಣೇಶ್ ಕಾಸರಗೋಡು, ಕೆ.ಎಚ್.ಸಾವಿತ್ರಿ, ಜಿ.ಎಸ್.ಕುಮಾರ್, ಕೆ.ಜೆ.ಕುಮಾರ್, ಡಿ.ಸಿ.ನಾಗೇಶ್, ಮುರಳಿಧರ ಖಜಾನೆ, ಮಹೇಶ್ ದೇವಶೆಟ್ಟಿ, ಸ್ನೇಹಪ್ರಿಯ ನಾಗರಾಜ್, ಕೆ.ಎಸ್.ವಾಸು ಈ ಬಾರಿಯ ಜ್ಯೂರಿ ಕಮೀಟಿಯಲ್ಲಿದ್ದು ೨೦೧೯ರಲ್ಲಿ ರಿಲೀಸ್ ಆದ ಸಿನಿಮಾಗಳನ್ನು ಪ್ರಶಸ್ತಿಗಾಗಿ ಇವರು ಆಯ್ಕೆ ಮಾಡಲಿದ್ದಾರೆ.
ಸದ್ಯ “ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ”ಯ ಲಾಂಛನವನ್ನು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಉಪಾಧ್ಯಕ್ಷರಾದ ಡಾ. ಶಿವರಾಜ್ ಕುಮಾರ್ ಉದ್ಘಾಟಿಸಿದರು. “ನಮ್ಮನ್ನೆಲ್ಲಾ ಜನರಿಗೆ ತಲುಪಿಸುವ ಕೆಲಸ ಮಾಡುವ ಪತ್ರಕರ್ತರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲುವುದಿಲ್ಲ. ನಾನಂತೂ ಮೀಡಿಯಾದವರೊಂದಗೆ ಯಾವತ್ತಿಗೂ ಉತ್ತಮ ಸ್ನೇಹವನ್ನು ಬೆಳೆಸಿಕೊಂಡು ಬಂದಿದೇನೆ. ಮೂವತ್ತು ವರ್ಷಗಳಿಂದ ಇರುವ ಜರ್ನಲಿಸ್ಟುಗಳಿಂದಾ ಮೂರು ವರ್ಷದ ಹಿಂದಷ್ಟೇ ಬಂದಿರುವವರ ತನಕ ಎಲ್ಲರೂ ನನಗೆ ಪರಿಚಯವಿದ್ದಾರೆ. ನಮ್ಮ ಸರಿ ತಪ್ಪುಗಳನ್ನು ತಿದ್ದುವ ಪತ್ರಕರ್ತರಿಂದಲೇ ನಾವು ಪ್ರಶಸ್ತಿ ಪಡೆಯುತ್ತೇವೆ ಅಂದರೆ ಅದು ದೊಡ್ಡ ಖುಷಿಯ ವಿಚಾರ” ಎಂದರು ಶಿವಣ್ಣ. ಈ ಸಂದರ್ಭದಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ಧೀರ ರಾಕ್ ಲೈನ್ ವೆಂಕಟೇಶ್ ಹಾಜರಿದ್ದು ‘ಚಿತ್ರರಂಗಕ್ಕೆ ಪತ್ರಕರ್ತರ ಕೊಡುಗೆ ಅಪಾರ. ಎಷ್ಟೋ ಸಲ ಅವರ ಬರವಣಿಗೆಗಳಿಂದ ಬೇಸರವಾದಾಗ ಕರೆ ಮಾಡಿ ಕೇಳಿದ್ದಿದೆ. ಹಾಗೇ ಹೊಗಳಿದಾಗ ಧನ್ಯವಾದವನ್ನೂ ತಿಳಿಸಿದೆ ಸುಮ್ಮನಿದ್ದುಬಿಡುತ್ತೇನೆ. ಈ ಅಕಾಡೆಮಿಯ ಕನಸು ದೊಡ್ಡದು. ಪತ್ರಕರ್ತರ ಈ ಕಾರ್ಯದೊಂದಿಗೆ ಯಾವತ್ತಿಗೂ ಜೊತೆಯಾಗಿದ್ದು ನನ್ನಿಂದ ಆಗುವ ಸಹಾಯವನ್ನೂ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಚಲನಚಿತ್ರ ಸಂಘದ ಅಧ್ಯಕ್ಷರಾದ ಡಾ. ವಿ. ನಾಗೇಂದ್ರಪ್ರಸಾದ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ. ಜೈರಾಜ್ ಸಹಾ ಪತ್ರಕರ್ತರ ಅಕಾಡೆಮಿಗೆ ನಮ್ಮಿಂದ ಸಾಧ್ಯವಾಗುವ ಯಾವುದೇ ರೀತಿಯ ಬೆಂಬಲ, ಸಹಕಾರ ನೀಡಲು ಸಿದ್ದರಿದ್ದೇವೆ ಎಂದರು. ಈ ಕಾರ್ಯಕ್ರಮದ ಮೂಲಕ “ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ” ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.
“ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ”ಗೆ ಚಾಲನೆ